ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಕಸಬ್, ದಾವೂದ್, ಮಸೂದ್‌ನ ಭಾರತೀಯ 'ಭಕ್ತ' ಸೆರೆ (Saifi Ahmed | Mumbai airport | Ajmal Kasab | Masood Azhar)
Bookmark and Share Feedback Print
 
ಮುಂಬೈಗೆ ದಂಡೆತ್ತಿ ಬಂದ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್, ಭೂಗತ ದೊರೆ ದಾವೂದ್ ಇಬ್ರಾಹಿಂ, ಭಯೋತ್ಪಾದಕ ಮಸೂದ್ ಅಜರ್ ಮುಂತಾದ ಕುಖ್ಯಾತರ ಭಾವಚಿತ್ರಗಳು, ಮುಂಬೈ ದಾಳಿಯ ಕರಾಳ ಚಿತ್ರಣಗಳನ್ನೊಳಗೊಂಡ ಫೋಟೋಗಳನ್ನು ಮೊಬೈಲ್‌ನಲ್ಲಿ ಹಾಕಿಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

27ರ ಹರೆಯದ ಸೈಫಿ ಅಹ್ಮದ್ ಎಂಬಾತನೇ ಆ ಆರೋಪಿ. ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದ ಮೂಲಕ ಜೆಡ್ಡಾಕ್ಕೆ (ಸೌದಿ ಅರೇಬಿಯಾ) ತೆರಳಬೇಕಿದ್ದ ಈತ ಬಿಹಾರ ನಿವಾಸಿ.

ಶನಿವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ತನ್ನ ಬ್ಯಾಗುಗಳ ಪರಿಶೀಲನೆ ನಡೆಸುವ ಹೊತ್ತಿನಲ್ಲಿ ಭದ್ರತಾ ತಪಾಸಣೆ ನಡೆಸುವ ಕೌಂಟರಿನಲ್ಲಿ ಮೊಬೈಲ್ ಬಿಟ್ಟು ಹೋಗಿದ್ದ. ಅನಾಥವಾಗಿರುವ ಮೊಬೈಲ್ ನೋಡಿದ್ದ ಸಿಐಎಸ್ಎಫ್ ಸಿಬ್ಬಂದಿಗಳು, ಮಾಲಕನನ್ನು ಪತ್ತೆ ಹಚ್ಚುವ ಸಲುವಾಗಿ ಮೊಬೈಲ್‌ನಲ್ಲಿ ತಡಕಾಟ ಆರಂಭಿಸಿದ್ದರು. ಆಗ ಹಲವರ ಫೋಟೋಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ವಿಮಾನ ನಿಲ್ದಾಣದ ಸಿಬ್ಬಂದಿ ಮೊಬೈಲ್‌ನ ಮಾಲಕನನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದ ಹೊತ್ತಿನಲ್ಲಿ ಭದ್ರತಾ ಕೌಂಟರಿಗೆ ಸೈಫಿ ಬಂದಿದ್ದ. ಆಗ ಈ ಮೊಬೈಲ್ ಆತನದ್ದೇ ಎಂದು ಖಚಿತವಾಗಿತ್ತು.

ಆರಂಭಿಕ ವಿಚಾರಣಾ ಮಾಹಿತಿಗಳ ಪ್ರಕಾರ ಈತ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಯಾವುದೇ ಸುಳಿವುಗಳು ಲಭಿಸಿಲ್ಲ. ಸಾಕಷ್ಟು ವಿಚಾರಣೆ ನಡೆಸಿದ ಬಳಿಕವಷ್ಟೇ ಆತನನ್ನು ಪ್ರಯಾಣಿಸಲು ಅವಕಾಶ ನೀಡುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಸಬ್, ದಾವೂದ್, ಅಜರ್ ಮೆಹಮೂದ್ ಮುಂತಾದ ಭಯೋತ್ಪಾದಕರ ಚಿತ್ರಗಳಲ್ಲದೆ ರಾಜಕಾರಣಿಗಳಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಚಿತ್ರಗಳೂ ಮೊಬೈಲ್‌ನಲ್ಲಿದ್ದವು. ಮುಂಬೈ ದಾಳಿ ಸಂದರ್ಭದಲ್ಲಿ ಹೊತ್ತಿ ಉರಿಯುತ್ತಿದ್ದ ಹೊಟೇಲ್ ತಾಜ್ ಫೋಟೋಗಳನ್ನೂ ಸೇವ್ ಮಾಡಿಕೊಂಡಿದ್ದ.

ಈ ಚಿತ್ರಗಳು ಇಂಟರ್ನೆಟ್‌ನಲ್ಲಿ ಲಭ್ಯವಿರುವಂತಹ ಸಾಮಾನ್ಯ ಚಿತ್ರಗಳಾದರೂ, ನಿರ್ದಿಷ್ಟವಾಗಿ ಭಯೋತ್ಪಾದಕರ ಚಿತ್ರಗಳನ್ನು ಹೊಂದಿರುವುದು ಪೊಲೀಸರ ಶಂಕೆಗೆ ಕಾರಣವಾಗಿದೆ. ತಾನು ಇದನ್ನು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿಕೊಂಡಿದ್ದೇನೆ ಎಂದು ಸೈಫಿ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ.

ಯಾವ ಕಾರಣಕ್ಕಾಗಿ ಮೊಬೈಲ್‌ನಲ್ಲಿ ಈ ಫೋಟೋಗಳನ್ನು ಸೇವ್ ಮಾಡಿ ಇಡಲಾಗಿದೆ ಮತ್ತು ಎಲ್ಲಿಂದ ತೆಗೆದದ್ದು ಎಂದು ಪೊಲೀಸರು ಕೇಳಿದಾಗ, ಸುಮ್ಮನೆ ಕುತೂಹಲಕ್ಕಾಗಿ ಇಟ್ಟುಕೊಂಡಿದ್ದೆ ಎಂದಿದ್ದಾನೆ.

ಜೆಡ್ಡಾದಲ್ಲಿ ಚಾಲಕನಾಗಿದ್ದ ಸೈಫಿ ಹೆಚ್ಚು ವಿದ್ಯಾವಂತನಲ್ಲ. 2007ರವರೆಗೆ ಆತ ಜೆಡ್ಡಾದಲ್ಲಿಯೇ ಇದ್ದ. 2008ರಲ್ಲಿ ಭಾರತಕ್ಕೆ ಮರಳಿದ್ದರೂ, ಜೆಡ್ಡಾದಲ್ಲಿನ ತನ್ನ ಉದ್ಯೋಗದಾತನ ಜತೆ ಸಂಪರ್ಕದಲ್ಲಿದ್ದ. ಮತ್ತೆ ಬರುವಂತೆ ಕರೆ ಬಂದ ಹಿನ್ನೆಲೆಯಲ್ಲಿ ಸೈಫಿ ಹೊರಟಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ