ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಣದಾಸೆಗಾಗಿ 16ರ ಹುಡುಗನಿಗೆ ಸಂತಾನಹರಣ ಚಿಕಿತ್ಸೆ (Sterilize | Jharkhand | Pawan Nayak | Ranchi)
Bookmark and Share Feedback Print
 
ವೈದ್ಯಕೀಯ ಸಿಬ್ಬಂದಿ ಮತ್ತು ನೆರೆ ಮನೆಯಾತನ ಹಣದಾಸೆಗೆ 16ರ ಹರೆಯದ ಹುಡುಗನೊಬ್ಬ ಬಲಿಪಶುವಾದ ಪ್ರಸಂಗವಿದು. ಜನಸಂಖ್ಯಾ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಿಂದ ಪಾರಿತೋಷಕ ಸಿಗುತ್ತದೆ ಎಂಬ ಆಸೆಯಿಂದ ಹದಿ ಹರೆಯದ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ ನಡೆಸಿದ್ದಾರೆ.

ಇದು ನಡೆದಿರುವುದು ಜಾರ್ಖಂಡ್‌ನ ಸುಕುರ್ಹುತ್ತು ಗ್ರಾಮದಲ್ಲಿ. ಜುಲೈ 31ರಂದು ತನಗೆ ಪರಿಚಯವಿದ್ದವರಿಂದಲೇ ಮೋಸ ಹೋದವನು ಪವನ್ ನಾಯಕ್.

ತನ್ನ ನೆರೆ ಮನೆಯಾತನ ಜತೆ ರಾಂಚಿಯಲ್ಲಿನ ಕಾಂಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಪವನ್ ಹೋಗಿದ್ದ. ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮತ್ತು ನೆರೆ ಮನೆಯಾತ ಸೇರಿಕೊಂಡು ಅಕ್ರಮವಾಗಿ ಪತ್ರವೊಂದಕ್ಕೆ ಈತನಿಂದ ಹೆಬ್ಬೆಟ್ಟು ಪಡೆದುಕೊಂಡಿದ್ದರು.

ನನ್ನ ವಯಸ್ಸು 28, ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು. ಇದಕ್ಕೆ ಪವನ್ ಕುಮಾರನಿಂದ ಬಲವಂತವಾಗಿ ಒಪ್ಪಿಗೆ ಪಡೆಯಲಾಗಿತ್ತು.

ಕೆಲವು ಕಾಗದಗಳ ಮೇಲೆ ಹೆಬ್ಬೆಟ್ಟು ಹಾಕುವಂತೆ ನನಗೆ ಹೇಳಿದರು. ಅವರು ಹೇಳಿದಂತೆ ನಾನು ಹೆಬ್ಬೆಟ್ಟು ಹಾಕಿದೆ. ನಂತರ ನನಗೆ ಕೆಲವು ಔಷಧಿಗಳನ್ನು ನೀಡಿದರು. ಜತೆಗೆ 1,100 ರೂಪಾಯಿ ಹಣವನ್ನೂ ನೀಡಿದರು. ನನಗೆ ಈ ರೀತಿ ಮಾಡಿದ ನೆರೆ ಮನೆಯಾತ ಮತ್ತು ವೈದ್ಯಕೀಯ ಸಿಬ್ಬಂದಿ ನನಗೆ ಸಿಕ್ಕಿದ ಮೊತ್ತದಿಂದ 700 ರೂಪಾಯಿ ಕಸಿದುಕೊಂಡರು ಎಂದು ಪವನ್ ವಿವರಣೆ ನೀಡಿದ್ದಾನೆ.

ತನಗೆ ಹಣ ನೀಡಲಾಗಿದ್ದರೂ, ಯಾವ ಕಾರಣಕ್ಕಾಗಿ ನೀಡಲಾಗಿತ್ತು ಎಂಬುದು ಪವನ್‌ಗೆ ತಿಳಿದಿರಲಿಲ್ಲ. ಆಸ್ಪತ್ರೆಯಲ್ಲಿ ನೀಡಿದ್ದ ಚೀಟಿಯನ್ನು ಇತರ ಪರಿಚಿತರು ನೋಡಿದ ನಂತರ, ಪವನ್‌ಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿರುವುದು ಬಯಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಪವನ್ ವೈದ್ಯರ ಗಮನಕ್ಕೆ ತಂದಿದ್ದಾನೆ.

ದೂರಿನ ಸಂಬಂಧ ವೈದ್ಯರ ತಂಡವೊಂದು ಪವನ್ ಕುಮಾರ್‌ನನ್ನು ತಪಾಸಣೆ ನಡೆಸಿದ್ದು, ಸಂತಾನಹರಣ ಚಿಕಿತ್ಸೆ ನಡೆದಿರುವುದನ್ನು ಖಚಿತಪಡಿಸಿದೆ.

ಆದರೂ ಸಂತಾನಹರಣ ಚಿಕಿತ್ಸೆಯು ಶಸ್ತ್ರಚಿಕಿತ್ಸೆರಹಿತವಾಗಿದ್ದುದರಿಂದ ಪವನ್ ಅಪಾಯದಿಂದ ಪಾರಾಗಿದ್ದಾನೆ.

ಸಂತಾನಹರಣ ಚಿಕಿತ್ಸೆಯನ್ನು ಔಷಧಿಗಳ ಮೂಲಕ ಮಾಡಲಾಗಿರುವುದರಿಂದ ಅದರ ಪರಿಣಾಮವನ್ನು ತಕ್ಷಣವೇ ಸ್ಥಗಿತಗೊಳಿಸಲು ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ರಾಂಚಿಯಲ್ಲಿನ ಸರ್ಜನ್ ಬಿ.ಕೆ. ಸಿಂಗ್ ಎಂಬವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ