ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ-ಮುಸ್ಲಿಮರಿಗೆ ಅಯೋಧ್ಯೆ ಹಂಚಿಕೆ: ಹೈಕೋರ್ಟ್ ತೀರ್ಪು (Ayodhya verdict | Ram Janmabhoomi | Babri Masjid | Allahabad high court)
Bookmark and Share Feedback Print
 
ಸ್ವಾತಂತ್ರೋತ್ತರ ಭಾರತದಲ್ಲೇ ಅತಿ ಪುರಾತನವಾದ ಅಯೋಧ್ಯೆ ಒಡೆತನ ಕುರಿತ ಮಹತ್ವದ ತೀರ್ಪು ಹೊರ ಬಿದ್ದಿದ್ದು, ವಿವಾದಿತ ಸ್ಥಳವು ರಾಮ ಜನ್ಮಭೂಮಿ ಎಂಬುದನ್ನು ಒಕ್ಕೊರಲಿನಿಂದ ಅಲಹಾಬಾದ್ ಹೈಕೋರ್ಟ್ ಒಪ್ಪಿಕೊಂಡಿದೆ. ಅಲ್ಲದೆ ವಿವಾದಿತ ಸ್ಥಳವನ್ನು ಮೂರು ಭಾಗಗಳನ್ನಾಗಿ ಹಿಂದೂ-ಮುಸ್ಲಿಂ ಸಮುದಾಯಗಳಿಗೆ ವಿಂಗಡನೆ ಮಾಡಿ ತೀರ್ಪು ನೀಡಿದೆ.

ಸುದೀರ್ಘ ಕಾಲ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ಜುಲೈ ತಿಂಗಳಲ್ಲಿ ಮುಗಿಸಿದ್ದ ನ್ಯಾಯಮೂರ್ತಿ ಎಸ್.ಯು. ಖಾನ್, ಡಿ.ವಿ. ಶರ್ಮಾ ಮತ್ತು ಸುಧೀರ್ ಅಗರ್ವಾಲ್ ಅವರನ್ನೊಳಗೊಂಡ ಅಲಹಾಬಾದ್ ಹೈಕೋರ್ಟಿನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಈ ತೀರ್ಪನ್ನು ನೀಡಿದೆ.

ತೀರ್ಪಿನ ಪ್ರಮುಖ ಅಂಶಗಳು:
* ಅಯೋಧ್ಯೆಯ ವಿವಾದಿತ ಸ್ಥಳವೇ ಶ್ರೀರಾಮ ಜನ್ಮಭೂಮಿ.
* ಮಸೀದಿ ಸುತ್ತ ಸ್ಮಶಾನವಿತ್ತೆಂಬ ಸುನ್ನಿ ವಕ್ಫ್ ಮಂಡಳಿ ಅರ್ಜಿ ವಜಾ.
* ವಿವಾದಿತ ಸ್ಥಳ ಮೂರು ಭಾಗಗಳಾಗಿ ವಿಂಗಡನೆ.
* ರಾಮನ ಮೂರ್ತಿಯಿರುವ ಜಾಗ 'ಹಿಂದೂ ಮಹಾಸಭಾ'ಕ್ಕೆ.
* ರಾಮ ಜನ್ಮಸ್ಥಳ (ಚಬೂತರ್) ಮತ್ತು ಸೀತಾ ರಸೋಯಿ (ಅಡುಗೆ ಮಾಡುತ್ತಿದ್ದ ಸ್ಥಳ) ನಿರ್ಮೋಹಿ ಅಖಾಡಾಕ್ಕೆ
* ಮೂರನೇ ಭಾಗ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ.
* ಮೂರು ತಿಂಗಳವರೆಗೆ ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಬಾರದು.
* ಮಧ್ಯ ಗುಮ್ಮಟದ ಭಾಗವೇ ರಾಮ ಹುಟ್ಟಿದ ಜಾಗ.

ಪ್ರಕರಣದ ವಾದಿಗಳಾದ ನಿರ್ಮೋಹಿ ಅಖಾಡಾ, ಹಿಂದೂ ಮಹಾಸಭಾ, ಗೋಪಾಲ್ ವಿಶಾರದ್ ಮತ್ತು ಸುನ್ನಿ ವಕ್ಫ್ ಮಂಡಳಿಗಳ ಸದಸ್ಯರು ಮತ್ತು ಅವರ ವಕೀಲರುಗಳು ಹಾಗೂ ಸರಕಾರದ ಪ್ರತಿನಿಧಿಗಳನ್ನು ಹೊರತುಪಡಿಸಿ ಇತರರಿಗೆ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಹೈಕೋರ್ಟ್ ಅವಕಾಶ ನೀಡಿರಲಿಲ್ಲ. ನ್ಯಾಯಾಲಯದಲ್ಲಿ ಮೊಬೈಲ್ ಬಳಕೆಯ ಮೇಲೂ ನಿಷೇಧ ಹೇರಲಾಗಿತ್ತು.

ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗಳಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಧಾರ್ಮಿಕ ಮತ್ತು ರಾಜಕೀಯ ಭಾವನೆಗಳು ಕೂಡ ಅಡಗಿರುವುದರಿಂದ ತೀರ್ಪು ದೇಶದ ರಾಜಕೀಯ ವ್ಯವಸ್ಥೆಯ ಮೇಲೂ ಭಾರೀ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಅಯೋಧ್ಯೆ ಒಡೆತನದ ಕುರಿತು ಮೂವರು ನ್ಯಾಯಮೂರ್ತಿಗಳು ನೀಡಿರುವ ಪ್ರತ್ಯೇಕ ತೀರ್ಪುಗಳ ವಿವರಣೆ ಇಲ್ಲಿದೆ.

ನ್ಯಾಯಮೂರ್ತಿ ಎಸ್.ಯು. ಖಾನ್ ತೀರ್ಪು...
* ಮೊಘಲ್ ದೊರೆ ಬಾಬರನ ಆದೇಶದಂತೆ ಮಸೀದಿಯನ್ನು ಕಟ್ಟಲಾಗಿತ್ತು.
* ಮಸೀದಿ ಕಟ್ಟಲಾದ ವಿವಾದಿತ ಜಮೀನು ಬಾಬರ ಅಥವಾ ಮಸೀದಿಯನ್ನು ಕಟ್ಟಿದ ವ್ಯಕ್ತಿ ಅಥವಾ ಕಟ್ಟಲು ಆದೇಶ ನೀಡಿದ ವ್ಯಕ್ತಿಗೆ ಸೇರಿದ್ದೆಂದು ರುಜುವಾತು ಪಡಿಸುವ ನೇರ ಸಾಕ್ಷ್ಯಗಳು ದೊರಕಿಲ್ಲ.
* ಮಸೀದಿಯನ್ನು ಕಟ್ಟಲು ಯಾವುದೇ ದೇಗುಲ ಅಥವಾ ಮಂದಿರವನ್ನು ಧ್ವಂಸಗೊಳಿಸಿರಲಿಲ್ಲ.
* ಅಯೋಧ್ಯೆಯಲ್ಲಿ ಸಂಪೂರ್ಣ ಪಾಳು ಬಿದ್ದಿದ್ದ ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿತ್ತು ಮತ್ತು ಅದಕ್ಕಾಗಿ ದೇಗುಲದ ಕೆಲವು ಪರಿಕರಗಳನ್ನು ಕೂಡ ಬಳಸಲಾಗಿತ್ತು.
* ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಆಗುವ ತನಕ ವಿಸ್ತಾರ ಪ್ರದೇಶದ ಯಾವುದೋ ಒಂದು ಸಣ್ಣ ಭಾಗದಲ್ಲಿ ರಾಮ ಜನ್ಮಸ್ಥಳವಿದೆ ಎಂದು ಹಿಂದೂಗಳು ನಂಬಿದ್ದರು. ಆದರೆ ಆ ಸ್ಥಳ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ.
* ಮಸೀದಿ ನಿರ್ಮಾಣವಾದ ಕೆಲ ಸಮಯದ ನಂತರ ಹಿಂದೂಗಳು ವಿವಾದಿತ ಸ್ಥಳದಲ್ಲಿ ರಾಮ ಜನ್ಮಸ್ಥಳವನ್ನು ಗುರುತಿಸಲು ಆರಂಭಿಸಿದ್ದರು.
* ವಿವಾದಿತ ಸ್ಥಳದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಜಂಟಿಯಾಗಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಬಂದಿದ್ದರು.
* ಮಸೀದಿಯ ಕೇಂದ್ರ ಗುಮ್ಮಟವಿದ್ದ ಕೆಳಗಿನ (ಪ್ರಸಕ್ತ ತಾತ್ಕಾಲಿಕ ರಾಮಮಂದಿರ ಇರುವಲ್ಲಿ) ಜಾಗವೇ ರಾಮ ಹುಟ್ಟಿದ ನಿರ್ದಿಷ್ಟ ಜಾಗ ಎಂದು 1949ಕ್ಕೆ ಕೆಲವು ದಶಕಗಳ ಹಿಂದೆ ಹಿಂದೂಗಳು ನಂಬಿ, ಪ್ರತಿಪಾದಿಸಲಾರಂಭಿಸಿದರು.
* 1949ರ ಡಿಸೆಂಬರ್ 23ರಂದು ಮುಂಜಾನೆ ಬಾಬ್ರಿ ಮಸೀದಿಯ ಕೇಂದ್ರ ಗುಮ್ಮಟದ ಕೆಳಗಡೆ ಮೊತ್ತ ಮೊದಲ ಬಾರಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
* ಹಾಗಾಗಿ ಪ್ರಸಕ್ತ ತಾತ್ಕಾಲಿಕ ಮಂದಿರದಲ್ಲಿ ಇಡಲಾಗಿರುವ ಮೂರ್ತಿಯಿರುವ ಜಾಗವು ಅಂದರೆ ಈ ಹಿಂದೆ ಮಸೀದಿಯ ಕೇಂದ್ರ ಗುಮ್ಮಟವಿದ್ದ ಜಾಗವು ಹಿಂದೂಗಳಿಗೆ ನೀಡಬೇಕು.
* ರಾಮ ಚಬೂತರ ಮತ್ತು ಸೀತಾ ರಸೋಯಿಗಳಲ್ಲಿನ ಭಾಗಗಳನ್ನು ನಿರ್ಮೋಹಿ ಅಖಾಡಾಕ್ಕೆ ಹಸ್ತಾಂತರಿಸಬೇಕು.
* ಉಳಿದ ಹಿಂದೂಗಳಿಂದ ಪೂಜಿಸಲ್ಪಡ ಜಾಗವನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು.
* ಈ ಕುರಿತು ಆಕ್ಷೇಪಗಳು ಅಥವಾ ಬದಲಾವಣೆಗಳು ಬೇಕೆಂದು ವಾದಿಗಳಿಗೆ ಅನ್ನಿಸಿದಲ್ಲಿ ಅಥವಾ ಸಲಹೆಗಳನ್ನು ನೀಡಬೇಕೆಂದು ಬಯಸಿದಲ್ಲಿ ನೀಡಬಹುದಾಗಿದೆ.

ನ್ಯಾಯಮೂರ್ತಿ ಸುಧೀರ್ ಅಗರ್‌ವಾಲ್ ಅವರ ತೀರ್ಪಿನ ಸಾರಾಂಶ...
* ಮೂರು ಗುಮ್ಮಟಗಳಿರುವ ವಿವಾದಿತ ಕಟ್ಟಡದ ಕೇಂದ್ರೀಯ ಗುಮ್ಮಟದಿಂದ ಆವೃತವಾಗಿರುವ ಪ್ರದೇಶವು (ಅನುಸೂಚಿ 7ರಲ್ಲಿ ವಿವರಿಸಲಾಗಿರುವ ಎಎ ಬಿಬಿ ಸಿಸಿ ಡಿಡಿ ಭಾಗ) ಭಗವಾನ್ ರಾಮ ಜನ್ಮಸ್ಥಾನವಾಗಿದ್ದು, ಅದು ವಾದಿಗಳಿಗೇ (ಇಲ್ಲಿ ಹಿಂದೂಗಳು) ಸೇರಬೇಕು.
* ಒಳ ಆವರಣದಲ್ಲಿ (ಅನುಸೂಚಿ 7ರಲ್ಲಿ ಸೂಚಿಸಿದ ಬಿ ಸಿ ಡಿ ಎಲ್ ಕೆ ಜೆ ಹೆಚ್ ಜಿ) ಇರುವ ಪ್ರದೇಶವು ಹಿಂದೂಳಿಗೆ ಮತ್ತು ಮುಸ್ಲಿಮರಿಗೆ ಸೇರಬೇಕು. ಯಾಕೆಂದರೆ ಉಭಯ ಬಣದವರೂ ಶತಮಾನಗಳಿಂದ ಇದನ್ನು ಬಳಸುತ್ತಾ ಬಂದಿದ್ದಾರೆ.
* ಹೊರ ಆವರಣದಲ್ಲಿರುವ ರಾಮ ಚಬೂತ್ರ (ಅನುಸೂಚಿ 7ರ ಇಇ ಎಫ್ ಎಫ್ ಜಿಜಿ ಹೆಚ್‌ಹೆಚ್), ಸೀತಾ ರಸೋಯಿ (ಅನುಸೂಚಿ 7ರ ಎಂಎಂ ಎನ್ಎನ್ ಒಒ ಪಿಪಿ) ಮತ್ತು ಭಂಡಾರ (ಅನುಸೂಚಿ 7ರ ಐಐ ಜೆಜೆ ಕೆಕೆ ಎಲ್ಎಲ್) ಕಟ್ಟಡಗಳಿರುವ ಪ್ರದೇಶವು ನಿರ್ಮೋಹಿ ಅಖಾಡಕ್ಕೆ ಸೇರುತ್ತದೆ.
* ಹೊರ ಆವರಣದಲ್ಲಿರುವ ಮುಕ್ತ ಪ್ರದೇಶ (ಅನುಸೂಚಿ 7ರ ಎ ಜಿ ಹೆಚ್ ಜೆ ಕೆ ಎಲ್ ಇ ಎಫ್) ಹಿಂದೂಗಳಿಂದ ಪೂಜಿಸಲ್ಪಡುತ್ತಿದ್ದ ಸ್ಥಳವಾಗಿರುವುದರಿಂದ ನಿರ್ಮೋಹಿ ಅಖಾಡಕ್ಕೆ ಸೇರುತ್ತದೆ.
* ಈ ಜಾಗದಲ್ಲಿ ಮುಸ್ಲಿಮರ ಪಾಲು ಒಟ್ಟೂ ಆವರಣದ ಮೂರನೇ ಒಂದಕ್ಕಿಂತ ಕಡಿಮೆ ಇರಬಾರದು, ಅಗತ್ಯವಿದ್ದರೆ ಹೊರ ಆವರಣದಲ್ಲಿ ಒಂದಷ್ಟು ಜಾಗ ನೀಡಬಹುದು.
* 1993ರ ಅಯೋಧ್ಯೆ ಕಾಯ್ದೆಯಡಿ ಭಾರತ ಸರಕಾರ ವಶಪಡಿಸಿಕೊಂಡಿರುವ ಜಮೀನನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಈ ಮೇಲಿನಂತೆ ಮೂರೂ ವಾದಿಗಳ (ಹಿಂದೂಗಳು, ಮುಸ್ಲಿಮರು ಮತ್ತು ನಿರ್ಮೋಹಿ ಅಖಾಡ) ಬಳಕೆಗಾಗಿ ಹಂಚಬೇಕು. ಅವುಗಳಿಗೆ ಅನ್ಯರ ಹಕ್ಕುಗಳಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತ್ಯೇಕ ಪ್ರವೇಶ ದ್ವಾರ ಇರಬೇಕು.
* ಕನಿಷ್ಠ 3 ತಿಂಗಳ ಕಾಲ ಅಥವಾ ಬೇರೆ ನಿರ್ದೇಶನ ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.

ನ್ಯಾಯಮೂರ್ತಿ ಧರ್ಮವೀರ ಶರ್ಮಾ ಅವರ ತೀರ್ಪಿನ ಪ್ರಮುಖಾಂಶಗಳು...
* ವಿವಾದಿತ ಪ್ರದೇಶವು ರಾಮನ ಜನ್ಮಸ್ಥಳ. ಶ್ರೀರಾಮ ಅಪಾರ ಭಕ್ತರ ದೈವೀಕ ಚೇತನ.
* ವಿವಾದಿತ ಕಟ್ಟಡ ಕಟ್ಟಿಸಿದ್ದು ಬಾಬರ್, ಯಾವ ವರ್ಷ ಎಂಬುದು ಖಚಿತವಿಲ್ಲ. ಆದರೆ ಇದನ್ನು ಇಸ್ಲಾಂನ ನಿಯಮಾವಳಿಗೆ ವಿರುದ್ಧವಾಗಿ ಕಟ್ಟಲಾಗಿತ್ತು. ಹೀಗಾಗಿ ಅದಕ್ಕೆ ಮಸೀದಿಯ ಲಕ್ಷಣಗಳಿಲ್ಲ.
* ಹಳೆಯ ಕಟ್ಟಡವನ್ನು ಧ್ವಂಸ ಮಾಡಿ ವಿವಾದಿತ ಕಟ್ಟಡ ಕಟ್ಟಲಾಗಿದೆ. ಅಲ್ಲಿ ಬೃಹತ್ ಹಿಂದೂ ಧಾರ್ಮಿಕ ಕಟ್ಟಡವಿತ್ತು ಎಂಬುದನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಸಾಬೀತುಪಡಿಸಿದೆ.
* ವಿವಾದಿತ ಆಸ್ತಿಯು ಶ್ರೀರಾಮಚಂದ್ರನ ಮತ್ತು ಹಿಂದೂಗಳ ಪೂಜಾ ಸ್ಥಳ. ಹಿಂದೂಗಳು ಅನಾದಿ ಕಾಲದಿಂದಲೂ ಈ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿ ಪೂಜಿಸಿಕೊಂಡು ಬರುತ್ತಿದ್ದು, ಅವರಿಗೆ ಅರ್ಚಿಸುವ ಹಕ್ಕಿದೆ. ವಿವಾದಿತ ಕಟ್ಟಡ ಕಟ್ಟಲಾದ ಬಳಿಕ, ಅಲ್ಲಿ 1949ರ ಡಿ.22/23ರ ಮಧ್ಯರಾತ್ರಿ ವಿಗ್ರಹಗಳನ್ನು ತಂದಿಟ್ಟದ್ದು ಸಾಬೀತಾಗಿದೆ. ಅಲ್ಲದೆ ಹೊರ ಆವರಣವು ಹಿಂದೂಗಳ ಒಡೆತನದಲ್ಲಿರುವುದು ಸಾಬೀತಾಗಿದ್ದು, ಒಳ ಆವರಣದಲ್ಲಿಯೂ ಅವರು ಪೂಜಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ವಿವಾದಿತ ಕಟ್ಟಡವು ಇಸ್ಲಾಂನ ನಿಯಮಗಳಿಗೆ ವಿರುದ್ಧವಾಗಿ ಅಸ್ತಿತ್ವಕ್ಕೆ ಬಂದಿರುವುದರಿಂದ ಅದನ್ನು ಮಸೀದಿ ಎಂದು ಪರಿಗಣಿಸಲಾಗದು.

ಸಂಬಂಧಿತ ಮಾಹಿತಿ ಹುಡುಕಿ