ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ವಿಶ್ವಾಸ ಮತ ಯಾಚಿಸುವುದಿಲ್ಲ: ಬಿಜೆಪಿ ಸ್ಪಷ್ಟನೆ (BJP | H R Bhardwaj | L K Advani | B S Yeddyurappa)
Bookmark and Share Feedback Print
 
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ವಿಧಾನಸಭೆಯಲ್ಲಿ ಮತ್ತೊಮ್ಮೆ ವಿಶ್ವಾಸ ಮತ ಯಾಚಿಸಿ ಎಂಬ ಆಹ್ವಾನ ನೀಡಿರುವುದನ್ನು ತಿರಸ್ಕರಿಸಿರುವ ಬಿಜೆಪಿ, ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಕರ್ನಾಟಕ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರನ್ನು ಒತ್ತಾಯಿಸಿದೆ.

ಬಿಜೆಪಿ ಸಂಸದೀಯ ಪಕ್ಷದ ನಾಯಕ ಎಲ್.ಕೆ. ಅಡ್ವಾಣಿಯವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಯಾವುದೇ ರಾಜಕೀಯ ಅಥವಾ ಸಾಂವಿಧಾನಿಕ ಬಿಕ್ಕಟ್ಟಿಲ್ಲ ಎಂಬ ಅಂತಿಮ ನಿರ್ಣಯ ಕೈಗೊಂಡ ಸಭೆಯು, ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿರುವುದು ರಾಜಭವನ ಎಂಬ ಅಭಿಪ್ರಾಯಕ್ಕೆ ಬಂದಿದೆ ಎಂದು ಜೇಟ್ಲಿ ಸಭೆಯ ನಂತರ ಪತ್ರಕರ್ತರಿಗೆ ತಿಳಿಸಿದ್ದಾರೆ.

ಅಕ್ಟೋಬರ್ 11ರಂದು ಪಡೆದ ವಿಶ್ವಾಸ ಮತದ ವಿಧಾನವು ಸರಿ ಕಂಡಿಲ್ಲ. ಹಾಗಾಗಿ ಮತ್ತೆ ಅಕ್ಟೋಬರ್ 14ರಂದು 11 ಗಂಟೆಗೆ ವಿಶ್ವಾಸ ಮತ ಯಾಚಿಸುವ ಅವಕಾಶವನ್ನು ನೀಡಿ ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇಂದು ಪತ್ರ ಬರೆದಿದ್ದರು.

ಈ ಸಭೆಯಲ್ಲಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ರಾಜ್ಯ ಕಾನೂನು ಸಚಿವ ಸುರೇಶ್ ಕುಮಾರ್ ಕೂಡ ಭಾಗವಹಿಸಿದ್ದರು.

ರಾಜ್ಯಪಾಲರ ನಡೆ ಈ ಹಿಂದೆಂದೂ ಕಂಡಿರದೇ ಇರುವಂತದ್ದು ಎಂದು ಜೇಟ್ಲಿ ಬಣ್ಣಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆಯ ಸಂಬಂಧ ಸಾಂವಿಧಾನಿಕ ಅಧಿಕಾರ ಹೊಂದಿರುವ ಮತ್ತು ನ್ಯಾಯಾಂಗದಲ್ಲೂ ಸೀಮಿತ ವಿಮರ್ಶೆಗೊಳಪಡುವ ಅಧಿಕಾರವನ್ನು ಹೊಂದಿರುವ ಸ್ಪೀಕರ್ ಅವರಿಗೆ ಮೊದಲು ಪತ್ರ ಬರೆದಿದ್ದ ರಾಜ್ಯಪಾಲರು, 'ನಿಮ್ಮ ಅಧಿಕಾರವನ್ನು ಚಲಾಯಿಸಿ ಪಕ್ಷಾಂತರಿಗಳನ್ನು ಅನರ್ಹಗೊಳಿಸಬೇಡಿ ಎಂದು ತಾಕೀತು ಮಾಡಿದ್ದರು. ಅಲ್ಲದೆ ಹಾಗೇನಾದರೂ ಮಾಡಿದಲ್ಲಿ ಅಂತಹ ಸದನದ ನಿರ್ಧಾರವು ಅನೂರ್ಜಿತವೆನಿಸುತ್ತದೆ' ಎಂದು ಬೆದರಿಕೆಯನ್ನೂ ಹಾಕಿದ್ದರು ಎಂದು ಭಾರದ್ವಾಜ್ ನಡೆಯನ್ನು ಟೀಕಿಸಿದರು.

ರಾಜಕೀಯ ನಿಷ್ಪಕ್ಷಪಾತತನದ ಎಲ್ಲಾ ಎಲ್ಲೆಗಳನ್ನೂ ಭಾರದ್ವಾಜ್ ಮೀರಿ ನಿಂತಿದ್ದಾರೆ. ರಾಜ್ಯಪಾಲರೇ ಉದ್ದೇಶಪೂರ್ವಕವಾಗಿ ಬಿಕ್ಕಟ್ಟು ಸೃಷ್ಟಿಸಿದ್ದಾರೆ. ಇದಕ್ಕೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವೇ ಸಾಕ್ಷಿ. ಇಂತಹ ರಾಜ್ಯಪಾಲರನ್ನು ತಕ್ಷಣವೇ ಕೇಂದ್ರವು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಜೇಟ್ಲಿ ಒತ್ತಾಯಿಸಿದರು.

ಈ ನಡುವೆ ದೆಹಲಿಯಲ್ಲೇ ಬೀಡು ಬಿಟ್ಟಿರುವ ಬಿಜೆಪಿ ಶಾಸಕರು ಇಂದು ಸಂಜೆ ಸಭೆ ಸೇರಲಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸಂಜೆ 5 ಗಂಟೆಗೆ ನಡೆಯಲಿದೆ. ರಾಜ್ಯಪಾಲರು ಮುಂದಾಗಿರುವ ನೂತನ ಕ್ರಮ ಮತ್ತು ಇತರ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ