ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಪಾಲಿಕೆ ಚುನಾವಣೆ; ಮೀಸೆ ತಿರುವುತ್ತಿರುವ ಮೋದಿ (BJP | Gujarat civic polls | Ahmedabad | Surat | Narendra Modi)
Bookmark and Share Feedback Print
 
ಗುಜರಾತ್ ಮುಖ್ಯಮಂತ್ರಿ ಮತ್ತೊಮ್ಮೆ ಮೀಸೆ ತಿರುವಲು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಆರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಪಡೆಯುವುದು ಖಚಿತವಾಗಿದ್ದು, ಕಾಂಗ್ರೆಸ್ ವಿರುದ್ಧ ಸ್ಪಷ್ಟವಾಗಿ ಜನತೆ ತೀರ್ಪು ನೀಡಿರುವುದು ಕಂಡು ಬಂದಿದೆ.

ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಜಾಮಾನಗರ್ ಮತ್ತು ಭಾವನಗರ್ ಎಂಬ ಆರು ಮಹಾನಗರ ಪಾಲಿಕೆಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಇದರ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಆರಂಭವಾಗಿದ್ದು, ಎಲ್ಲಾ ಆರು ಕಡೆಗಳಲ್ಲೂ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ.

ಅಹಮದಾಬಾದ್‌ನಲ್ಲಿನ ಒಟ್ಟು 189 ಸೀಟುಗಳಲ್ಲಿ ಬಿಜೆಪಿ ಇದುವರೆಗೆ 37 ಸೀಟುಗಳನ್ನು ಗೆದ್ದುಕೊಂಡಿದೆ. ಇಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎಂಟು. ವಡೋದರಾದಲ್ಲಿ ಬಿಜೆಪಿ 75 ಸೀಟುಗಳಲ್ಲಿ ಬಹುತೇಕ ಮೂರನೇ ಒಂದು ಭಾಗವನ್ನು ಗೆದ್ದಾಗಿದೆ. ಕಾಂಗ್ರೆಸ್ ಗೆದ್ದಿರುವುದು ಕೇವಲ ಮೂರು. ಸೂರತ್‌ನ 114 ಕ್ಷೇತ್ರಗಳಲ್ಲಿ ಬಿಜೆಪಿ 27 ಗೆದ್ದರೆ, ಕಾಂಗ್ರೆಸ್ ಮೂರು ಗೆದ್ದುಕೊಂಡಿದೆ.

ಉಳಿದ ಪಾಲಿಕೆಗಳ ಕಥೆಯೂ ಭಿನ್ನವಲ್ಲ. ರಾಜ್‌ಕೋಟ್‌ನಲ್ಲಿ 69 ಸೀಟುಗಳಲ್ಲಿ 58ನ್ನು ಬಿಜೆಪಿ ಗೆದ್ದರೆ, 11 ಸೀಟುಗಳು ಕಾಂಗ್ರೆಸ್ ಪಾಲಾಗಿವೆ. ಭಾವನಗರದಲ್ಲಿ ಬಿಜೆಪಿಯ 41 ಹಾಗೂ ಕಾಂಗ್ರೆಸ್‌ನ 10 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಾಮಾನಗರದಲ್ಲೂ ಆಡಳಿತ ಪಕ್ಷ ಬಿಜೆಪಿ ಮುನ್ನಡೆ ಸಾಧಿಸಿದೆ.

ಈ ಬಾರಿ ಪ್ರಗತಿಯ ಜತೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಜನತೆಯ ಮುಂದಿಟ್ಟಿದ್ದ ಪ್ರಮುಖ ವಿಚಾರ ಕೇಂದ್ರದ ಪಕ್ಷಪಾತ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ರಾಜ್ಯದ ಪ್ರಗತಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದು ಟೀಕಾ ಪ್ರಹಾರ ಮಾಡಲಾಗಿತ್ತು.

ಸಿಬಿಐಯಿಂದ ಕಾಂಗ್ರೆಸ್‌ಗೆ ಚುನಾವಣೆಯನ್ನು ಗೆಲ್ಲಿಸಿಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಜನತೆ ಸ್ಪಷ್ಟವಾದ ಉತ್ತರ ನೀಡಬೇಕು ಎಂದು ಮೋದಿ ಕರೆ ನೀಡಿದ್ದರು. ಬಹುತೇಕ ಜನತೆ ಸ್ಪಷ್ಟ ಉತ್ತರವನ್ನೇ ನೀಡಿದ್ದಾರೆ ಎಂದು ಇತ್ತೀಚಿನ ಮತ ಎಣಿಕೆ ಮಾಹಿತಿಗಳು ಹೇಳುತ್ತಿವೆ. ಪೂರ್ಣ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ