ಮಗಳು ದಲಿತ ಪ್ರೇಮಿಯೊಂದಿಗೆ ಪರಾರಿಯಾದಳು ಎಂಬ ಏಕೈಕ ಕಾರಣವನ್ನು ಅಪಮಾನ ಮತ್ತು ಕ್ರೂರ ವರ್ತನೆ ಎಂದು ಪರಿಗಣಿಸಿದ ಕುಟುಂಬವೊಂದು ಆತ್ಮಹತ್ಯೆಗೆ ಶರಣಾದ ಪ್ರಸಂಗವೊಂದು ತಮಿಳುನಾಡಿನಲ್ಲಿ ನಡೆದಿದೆ.
ತಮ್ಮ ಮಗಳಿಂದಾಗಿ ಮನೆಯ ಮಾನ ಹರಾಜಾಯಿತು ಎಂದು ಭಾವಿಸಿದ ಮಧುರೈ ಸಮೀಪದ ಪಳನಿ ಎಂಬಲ್ಲಿನ ಕುಟುಂಬದ ನಾಲ್ವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ತಮ್ಮ ಮನೆಯಲ್ಲಿದ್ದ ಜರ್ಮನ್ ಶೆಫರ್ಡ್ ನಾಯಿಗೂ ವಿಷ ಉಣ್ಣಿಸಿರುವುದು. ನಾಲ್ವರ ಶವಗಳ ಜತೆ ನಾಯಿಯೂ ಮರಳಿ ಬಾರದ ಲೋಕಕ್ಕೆ ಹೋಗಿತ್ತು.
ಪಳನಿಯಲ್ಲಿನ ಬೆಳ್ಳುಳ್ಳಿ ಸಗಟು ವ್ಯಾಪಾರಿ ಕೋದಂಡಪಾಣಿ (58), ಅವರ ಪತ್ನಿ ಕೃಷ್ಣವೇಣಿ (48), ಇಬ್ಬರು ಮಕ್ಕಳಾದ ದಾಲಿನಿ (22) ಮತ್ತು ಪಾಂಡ್ಯನ್ (21) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವವರು. ನೆರೆಮನೆಯವರು ಸಂಶಯದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಸೋಮವಾರ ಘಟನೆ ಬೆಳಕಿಗೆ ಬಂದಿತ್ತು.
ಕೋದಂಡಪಾಣಿ-ಕೃಷ್ಣವೇಣಿಯವರ ಪುತ್ರಿ ದೇವಿ (24) ತನ್ನ ದಲಿತ ಪ್ರಿಯಕರ ಮರಿಯಪ್ಪನ್ ಎಂಬಾತನ ಜತೆ ಪರಾರಿಯಾಗಿರುವುದು ಬೆಳಕಿಗೆ ಬಂದ ನಂತರ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯ ಇಬ್ಬರು ಹೆಣ್ಣು ಮಕ್ಕಳಾದ ದೇವಿ ಮತ್ತು ದಾಲಿನಿ ಇಲ್ಲಿನ ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದರು. ಪುತ್ರ ಪಾಂಡ್ಯನ್ ಕೊಯಂಬತ್ತೂರಿನಲ್ಲಿ ಗ್ಯಾರೇಜೊಂದನ್ನು ನಡೆಸುತ್ತಿದ್ದ.
ಕೆಲ ತಿಂಗಳ ಹಿಂದಷ್ಟೇ ದೇವಿ ಇಲ್ಲೇ ಸಮೀಪದ ಮರಿಯಪ್ಪನ್ ಎಂಬಾತನ ಜತೆ ಅನುರಕ್ತಳಾಗಿದ್ದಳು. ಅದೇ ಹೊತ್ತಿಗೆ ಇತ್ತ ಮನೆಯಲ್ಲಿ ದೇವಿಗೆ ವರ ಹುಡುಕುತ್ತಿದ್ದರು. ಶನಿವಾರ ಕೆಲಸಕ್ಕೆಂದು ಹೋಗಿದ್ದ ದೇವಿ, ವಾಪಸ್ ಬಂದಿರಲಿಲ್ಲ. ಹುಡುಕಾಟಗಳು ವ್ಯರ್ಥವಾದ ನಂತರ ಆಕೆ ಮರಿಯಪ್ಪನ್ ಜತೆ ಪರಾರಿಯಾಗಿದ್ದಾಳೆಂಬುದು ತಿಳಿದು ಬಂದಿತ್ತು.
ಆತ್ಮಹತ್ಯೆ ಮಾಡಿಕೊಂಡ ಇಡೀ ಕುಟುಂಬದ ಯಜಮಾನ ಕೋದಂಡಪಾಣಿ ಮರಣ ಪತ್ರವನ್ನೂ ಬರೆದಿಟ್ಟಿದ್ದಾರೆ. ತಮ್ಮ ಸಾವಿಗೆ ಹಿರಿಯ ಪುತ್ರಿ ದೇವಿಯೇ ಕಾರಣ ಎಂದು ದೂರಿದ್ದಾರೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ಕಾರಣದಿಂದ ನಾವು ಬದುಕಲು ಇಚ್ಛಿಸುತ್ತಿಲ್ಲ ಎಂದು ಬರೆದಿದ್ದಾರೆ.