ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರುಂಧತಿ ರಾಯ್ ವಿರುದ್ಧ ಎಫ್ಐಆರ್; ಕೋರ್ಟ್ ಸೂಚನೆ
(Delhi Police | Syed Ali Shah Geelani | Arundhati Roy | Kashmir issue)
ಅಕ್ಟೋಬರ್ 21ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಡಿರುವ ಭಾಷಣದ ಸಂಬಂಧ ಲೇಖಕಿ ಆರುಂಧತಿ ರಾಯ್, ಹುರಿಯತ್ ನಾಯಕ ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಇತರ ಐವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ.
ಭಾರತೀಯ ದಂಡ ಸಂಹಿತೆ ಅಡಿಯಲ್ಲಿನ ಸೂಕ್ತ ನಿಯಮಗಳ ಅಡಿಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ಮುಂದಿನ ವಿಚಾರಣೆ ನಡೆಯುವ 2011ರ ಜನವರಿ 6ರಂದು ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವಿತಾ ಕುಮಾರಿ ಬಾಘ ಆದೇಶ ನೀಡಿದರು.
ಗಿಲಾನಿ, ರಾಯ್ ಮತ್ತು ಇತರರ ವಿರುದ್ಧ ರಾಜದ್ರೋಹ ಮತ್ತು ಇತರ ಆರೋಪಗಳನ್ನು ಹೊರಿಸಲು ಸಾಕಷ್ಟು ಅಂಶಗಳು ಪೂರಕವಾಗಿ ಇರದೇ ಇದ್ದುದರಿಂದ ಪ್ರಕರಣ ದಾಖಲಿಸಲಾಗಿಲ್ಲ ಎಂದು ದೆಹಲಿ ಪೊಲೀಸರು ಸಲ್ಲಿಸಿದ್ದ ಸ್ಟೇಟಸ್ ವರದಿಯನ್ನು ಇದೇ ಸಂದರ್ಭದಲ್ಲಿ ಕೋರ್ಟ್ ವಜಾಗೊಳಿಸಿದೆ.
ಆರೋಪಿಗಳ ವಿರುದ್ಧ ಮೊದಲ ನೋಟದಲ್ಲಿ ನೋಡುವಾಗ ಸಾಕಷ್ಟು ಪುರಾವೆಗಳು ಕಂಡು ಬರುತ್ತಿದೆ. ಹಾಗಾಗಿ ಪ್ರಕರಣ ದಾಖಲಿಸಿಕೊಂಡು, ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸರಿಗೆ ನ್ಯಾಯಾಧೀಶರು ಆದೇಶ ನೀಡಿದರು.
ರಾಯ್ ಮತ್ತು ಗಿಲಾನಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಅಕ್ಟೋಬರ್ 28ರಂದು ಸುಶೀಲ್ ಪಂಡಿತ್ ಎಂಬವರು ಪೊಲೀಸರಿಗೆ ನೀಡಲಾಗಿದ್ದ ದೂರಿನ ಕುರಿತು ಸೂಕ್ತ ಸ್ಟೇಟಸ್ ರಿಪೋರ್ಟ್ ಸಲ್ಲಿಸಲು ವಿಫಲವಾಗಿರುವ ದೆಹಲಿ ಪೊಲೀಸರನ್ನು ಕೂಡ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.
ಗಿಲಾನಿ ಮತ್ತು ರಾಯ್ ಅವರನ್ನು ಹೊರತುಪಡಿಸಿ, ಸಂಸತ್ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿರುವ ದೆಹಲಿ ಯುನಿವರ್ಸಿಟಿ ಪ್ರೊಫೆಸರ್ ಎಸ್.ಎ.ಆರ್. ಗಿಲಾನಿ ಹಾಗೂ ಜಮ್ಮು-ಕಾಶ್ಮೀರ ಯುನಿವರ್ಸಿಟಿಯ ಪ್ರೊಫೆಸರ್ ಶೇಖ್ ಶೌಖಾತ್ ಹುಸೇನ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪಂಡಿತ್ ತನ್ನ ದೂರಿನಲ್ಲಿ ಮನವಿ ಮಾಡಿದ್ದರು.
ದೂರಿನಲ್ಲಿ ಹೇಳಿರುವ ಪ್ರಕಾರ, ಅಕ್ಟೋಬರ್ 21ರಂದು ಆರೋಪಿತರು ದೆಹಲಿಯಲ್ಲಿ ರಾಜದ್ರೋಹಕ್ಕೆ ಸಂಬಂಧಪಟ್ಟ ಭಾಷಣಗಳನ್ನು ಮಾಡಿದ್ದರು.
ಕಾಶ್ಮೀರಕ್ಕೆ ಸ್ವಾತಂತ್ರ್ಯ ಒದಗಿಸುವ ನಿಟ್ಟಿನಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ಇವರು ನೀಡಿದ್ದರು ಎಂದು ಆರೋಪಿಸಲಾಗಿದೆ.