ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌಡರ ಭೂಮಿಯನ್ನು ಬಡವರಿಗೆ ಹಂಚುತ್ತೇನೆ: ಯಡಿಯೂರಪ್ಪ (JD(S) | BS Yeddyurappa | HD Devegowda | HD Kumaraswamy)
Bookmark and Share Feedback Print
 
ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯವರು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಜಮೀನು ಪಡೆದುಕೊಂಡಿದ್ದು, ಇದನ್ನು ವಶಕ್ಕೆ ತೆಗೆದುಕೊಂಡು ಬಡವರಿಗೆ ಹಂಚುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ವರಿಷ್ಠರ ಭೇಟಿಗೆ ದೆಹಲಿಗೆ ಬಂದಿರುವ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, 'ಮೈಸೂರು ಜಿಲ್ಲೆಯ ಭೂ ಹಗರಣಗಳ ಬಗ್ಗೆ ರಾಷ್ಟ್ರೀಯ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡುವ ನಿರ್ಧಾರಕ್ಕೆ ಪಕ್ಷ ಬಂದಿತ್ತು. ಹಾಸನ ಜಿಲ್ಲೆಯಲ್ಲಿ ನಡೆದಿರುವ ಭೂ ಅಕ್ರಮಗಳ ಬಗ್ಗೆ ಮೂರ್ನಾಲ್ಕು ದಿನದಲ್ಲಿ ಜಾಹೀರಾತು ಪ್ರಕಟಿಸಲಾಗುತ್ತದೆ' ಎಂದರು.

ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಾಹೀರಾತು ಪ್ರಕಟಿಸಿರುವುದಕ್ಕೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಮೇಲಿನಂತೆ ಯಡಿಯೂರಪ್ಪ ಉತ್ತರಿಸಿದರು.

ಗೌಡರ ಕುಟುಂಬವು ಅಕ್ರಮವಾಗಿ ಜಮೀನು ಪಡೆದುಕೊಂಡಿರುವ ಹಾಸನದ ಆ ನಿರ್ದಿಷ್ಟ ಜಾಗಕ್ಕೆ ಶೀಘ್ರವೇ ಹೋಗಲಿದ್ದೇನೆ. ಆ ಜಮೀನನ್ನು ವಾಪಸ್ ಪಡೆದುಕೊಂಡು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ಜನರಿಗೆ ಹಂಚುವ ಚಿಂತನೆ ನನ್ನಲ್ಲಿದೆ ಎಂದರು.

ಈ ವಿಚಾರಗಳನ್ನು ತಾನು ಬಿಜೆಪಿ ನಾಯಕರ ಜತೆ ಇನ್ನೂ ಸಮಾಲೋಚನೆ ನಡೆಸಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ತಾವು ಇತರ ನಾಯಕರು ಇದೇ ರೀತಿಯಾಗಿ ಅಕ್ರಮವಾಗಿ ಪಡೆದುಕೊಂಡಿರುವ ಭೂಮಿಗಳ ಬಗ್ಗೆಯೂ ನಡೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, 'ಈ 81 ಎಕರೆ ಜಮೀನನ್ನು ವಾಪಸ್ ಪಡೆದು ಬಡವರಿಗೆ ಹಂಚುವ ಬಗ್ಗೆ ನಾನು ಗಂಭೀರವಾಗಿ ಯೋಚಿಸುತ್ತಿದ್ದೇನೆ' ಎಂದರು.

ಹಾಸನ ಜಿಲ್ಲೆಯಲ್ಲಿ ನಡೆದಿರುವ ಭೂ ಅತಿಕ್ರಮಣಗಳ ಬಗ್ಗೆ ವಿವರಗಳನ್ನು ನೀಡುವಂತೆ ತಾನು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದೂ ಮುಖ್ಯಮಂತ್ರಿ ತಿಳಿಸಿದರು.

ಬಿಜೆಪಿ ವರಿಷ್ಠರಾದ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್ ಅವರೊಂದಿಗಿನ ಭೇಟಿ ಬಗ್ಗೆ ಮಾತನಾಡುತ್ತಾ, ಕರ್ನಾಟಕ ರಾಜ್ಯದ ವ್ಯವಹಾರಗಳ ಬಗ್ಗೆ ಎಲ್ಲರೂ ಸಂತಸದಿಂದಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ