ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೈ ಬೆರಳುಗಳನ್ನು ದೇವಿಗೆ ಅರ್ಪಿಸಿದ ನಿತೀಶ್ ಅಭಿಮಾನಿ! (Bihar Assembly elections | Anil Sharma | Nitish Kumar | JDU)
Bookmark and Share Feedback Print
 
ರಾಜಕೀಯ ಎಂದರೆ ಛೀ.. ಥೂ.. ಎಂದು ಉಗಿಯುವಂತಹ ಕಾಲ. ಅದರಲ್ಲೂ ಕರ್ನಾಟಕದ ಕೊಚ್ಚೆ ರಾಜಕೀಯವನ್ನು ನೋಡಿ ಪ್ರಜ್ಞಾವಂತರು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡಿರುವ ಹೊತ್ತಿದು. ಈ ವಿಚಾರದಲ್ಲಿ ರಾಷ್ಟ್ರ ರಾಜಧಾನಿಯ ರಾಜಕಾರಣವೂ ಹೊರತಲ್ಲ. ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ನಿತೀಶ್ ಕುಮಾರ್ ಅಭಿಮಾನಿಯೊಬ್ಬ ಅವರ ಗೆಲುವಿಗಾಗಿ ತನ್ನ ಕೈಯ ಎರಡು ಬೆರಳುಗಳನ್ನೇ ಕತ್ತರಿಸಿಕೊಂಡಿದ್ದಾನೆ.
PR

ಜೆಡಿಯು-ಬಿಜೆಪಿ (ಎನ್‌ಡಿಎ) ಮೈತ್ರಿಕೂಟವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿದ್ದಕ್ಕಾಗಿ ಜೆಹನಾಬಾದ್ ಎಂಬಲ್ಲಿನ ಒಯೆನಾ ಗ್ರಾಮದ ನಿವಾಸಿ ಅನಿಲ್ ಶರ್ಮಾ (31) ಎಂಬಾತ ಪಕ್ಕದ ದೇವಿ ದೇವಸ್ಥಾನಕ್ಕೆ ಹೋಗಿ ತನ್ನ ಬೆರಳುಗಳನ್ನು ಕತ್ತಿಯಿಂದ ಕತ್ತರಿಸಿಕೊಂಡಿದ್ದಾನೆ.

ಇದು ಮಾಡಿರುವುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲಿನ ಅಭಿಮಾನದಿಂದ. ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಮತ್ತು ಜೆಹನಾಬಾದ್ ಲೋಕಸಭಾ ಸದಸ್ಯ ಜಗದೀಶ್ ಶರ್ಮಾ ಪುತ್ರ ರಾಹುಲ್ ಕುಮಾರ್ ಜಯ ಗಳಿಸಿರುವುದಕ್ಕಾಗಿ ತಾನು ಸಂಭ್ರಮಾಚರಣೆಯ ಅಂಗವಾಗಿ ಬೆರಳುಗಳನ್ನು ಕತ್ತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾನೆ.

ನಿತೀಶ್ ಕುಮಾರ್ ಎರಡನೇ ಬಾರಿ ಅಧಿಕಾರಕ್ಕೆ ಮರಳಿರುವುದು ನನಗೆ ಸಂತಸ ತಂದಿದೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಬೆರಳುಗಳನ್ನು ಅರ್ಪಿಸುವುದಾಗಿ ದೇವಿಗೆ ಹರಕೆ ಹೊತ್ತುಕೊಂಡಿದ್ದೆ. ಅದರಂತೆ ನಡೆದುಕೊಂಡಿದ್ದೇನೆ ಎಂದು ನೋವಿನಿಂದ ನರಳುತ್ತಿರುವ ಅನಿಲ್ ಆಸ್ಪತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾನೆ.

ನಿತೀಶ್ ಕುಮಾರ್ 2005ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲೂ ಅನಿಲ್ ಶರ್ಮಾ ತನ್ನ ಬೆರಳುಗಳನ್ನು ಕತ್ತರಿಸಿಕೊಂಡಿದ್ದ.

ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ವಾರ ಕಳೆದಿರುವ ಈ ಹೊತ್ತಿನಲ್ಲಿ ಯಾಕೆ ಬೆರಳಿಗೆ ಕತ್ತಿ ಹಾಕಿದ್ದೀಯಾ ಎಂದು ಆತನಲ್ಲಿ ಪ್ರಶ್ನಿಸಿದಾಗ, 'ನನ್ನ ನಿರ್ಧಾರದ ಬಗ್ಗೆ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರು ನನ್ನ ಮನ ಒಲಿಸಲು ಯತ್ನಿಸಿದ್ದರು. ಹಾಗಾಗಿ ತಕ್ಷಣ ನನ್ನ ಹರಕೆಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ' ಎಂದು ತಿಳಿಸಿದ್ದಾನೆ.

ಶರ್ಮಾ ಈ ರೀತಿಯಾಗಿ ಬೆರಳುಗಳನ್ನು ಅರ್ಪಿಸುವುದರೊಂದಿಗೆ ಜಿಲ್ಲೆಯಾದ್ಯಂತ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾನೆ. ಕೆಲವರು ಈತನನ್ನು ಹುಚ್ಚ ಎಂದು ಲೇವಡಿ ಮಾಡಿದರೆ, ಹೆಚ್ಚಿನವರು ಅಭಿಮಾನವನ್ನು ಪ್ರಶಂಸಿಸಿದ್ದಾರೆ.

ಇತ್ತೀಚೆಗಷ್ಟೇ ಸಮಾಪ್ತಿಗೊಂಡಿದ್ದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 206 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲುವ ಮೂಲಕ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮಾಯವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ