ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕಾರು ಬಳಸಿ ಹತ್ಯೆಗೈಯಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾ ಸಂಚು ರೂಪಿಸಿತ್ತು. ಅಲ್ಲದೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ತನ್ನ ನೆಲೆಗಳನ್ನು ವಿಸ್ತರಿಸಲು ಯೋಜನೆ ಸಿದ್ಧಪಡಿಸಲಾಗಿತ್ತು ಎಂದು ವಿಕಿಲೀಕ್ಸ್ ರಹಸ್ಯ ದಾಖಲೆಗಳು ಬಹಿರಂಗಪಡಿಸಿವೆ.
2008ರ ನವೆಂಬರಿನಲ್ಲಿ ಮುಂಬೈ ದಾಳಿ ನಡೆದ ಏಳು ತಿಂಗಳ ನರೇಂದ್ರ ಮೋದಿಯವರನ್ನು ಕೊಂದು ಹಾಕಲು ಲಷ್ಕರ್ ಸಂಚು ಹೂಡಿತ್ತು. ಕಾರನ್ನು ಬಳಸಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬ ಮಾಹಿತಿ ಅಮೆರಿಕಾಕ್ಕೆ ಸಿಕ್ಕಿತ್ತು. ಅಮೆರಿಕಾ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕಚೇರಿಯಿಂದ ಈ ದಾಖಲೆ ರವಾನೆಯಾಗಿತ್ತು.
ಈ ದಾಖಲೆಯಲ್ಲಿರುವ ಮಾಹಿತಿಗಳ ಪ್ರಕಾರ ಮೋದಿಯವರನ್ನು ಹತ್ಯೆಗೈಯುವ ಯೋಜನೆಯನ್ನು ರೂಪಿಸಿದ್ದು ಪಾಕಿಸ್ತಾನದ ಲಷ್ಕರ್ ಸದಸ್ಯ ಶಾಫಿಕ್ ಖಾಫಾ. ಇದನ್ನು ಕಾರ್ಯಗತಗೊಳಿಸುವ ಹಣೆ ಭಾರತದ ಲಷ್ಕರ್ ಸದಸ್ಯ ಸಮೀರ್ ಹುಸೇನ್ ಎಂಬಾತನಿಗೆ ವಹಿಸಲಾಗಿತ್ತು.
'ಲಷ್ಕರ್ ಸದಸ್ಯ ಶಾಫಿಕ್ ಖಾಫಾ ರೂಪಿಸುತ್ತಿರುವ ಈ ಕಾರ್ಯಾಚರಣೆಯನ್ನು ಭಾರತದಲ್ಲಿನ ಲಷ್ಕರ್ ಸದಸ್ಯ ಹುಸೇನ್ ಯೋಜನೆಯನ್ನು ಮುಂದುವರಿಸುತ್ತಿದ್ದು, ಆತನಲ್ಲಿ ಜೂನ್ ಆರಂಭದಲ್ಲಿ ಸಾಧಿಸಬೇಕಾದ ಮೂರು ಜವಾಬ್ದಾರಿಗಳಿವೆ. ಮೊದಲನೆಯದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರದ್ದು, ತರಬೇತಿ ಶಿಬಿರವನ್ನು ಸ್ಥಾಪಿಸುವುದು ಮತ್ತು ಕಾರು ಬಳಸಿ ನಡೆಸುವ ಅನಿರ್ದಿಷ್ಟ ಕಾರ್ಯಾಚರಣೆ. ಈ ಯೋಜನೆಗಳಿಗೆ ಹುಸೇನ್‌ಗೆ ಸಮೀರ್ ಎಂಬ ಮತ್ತೊಬ್ಬ ಭಾರತೀಯ ಸಹಕಾರ ನೀಡುತ್ತಾನೆ' ಎಂದು 2009ರ ಜೂನ್ ತಿಂಗಳಲ್ಲಿ ರವಾನಿಸಲ್ಪಟ್ಟಿರುವ ಈ ರಹಸ್ಯ ದಾಖಲೆ ತಿಳಿಸಿದೆ.
2009ರ ಜೂನ್ 19ರಂದು ಈ ದಾಖಲೆಯನ್ನು ಅಮೆರಿಕಾದ ವಿದೇಶಾಂಗ ಇಲಾಖೆಯಿಂದ ರಕ್ಷಣಾ ಅಧಿಕಾರಿ ಕಚೇರಿ ಹಾಗೂ ಲಿಬಿಯಾದ ಟ್ರಿಪೋಲಿ, ಮೊರಾಕೋದ ಕಸಬ್ಲಾಂಕಾ ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಅಮೆರಿಕಾದ ರಾಯಭಾರ ಕಚೇರಿಗಳಿಗೆ ಕಳುಹಿಸಲಾಗಿತ್ತು. ಈ ಅಮೂಲ್ಯ ಮಾಹಿತಿಯನ್ನು ಭಾರತಕ್ಕೆ ರವಾನಿಸಿರುವ ಬಗ್ಗೆ ಯಾವುದೇ ಮಾಹಿತಿಗಳು ವಿಕಿಲೀಕ್ಸ್‌ನಲ್ಲಿ ಲಭ್ಯವಾಗಿಲ್ಲ.
ಕರ್ನಾಟಕದಲ್ಲಿ ತರಬೇತಿ ಶಿಬಿರ... ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿ ತರಬೇತಿ ನಡೆಸಲು ಸೂಕ್ತ ಸ್ಥಳಗಳನ್ನು ಹುಡುಕುವ ಕಾರ್ಯದಲ್ಲಿ ಪಾಕಿಸ್ತಾನ ಮೂಲದ ಶಾಫಿಕ್ ಖಾಫಾ ನಿರತನಾಗಿದ್ದಾನೆ. ಇದಕ್ಕಾಗಿ 'ಎಸ್.ಜೆ' ಎಂಬಾತ ಖಾಫಾನಿಗೆ ಸಹಕಾರ ನೀಡುತ್ತಿದ್ದಾನೆ.
ಲಷ್ಕರ್ ನೆಲೆಯನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲು ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ನೇಪಾಳಗಳಲ್ಲಿನ ಲಷ್ಕರ್ ಸದಸ್ಯರ ಬೆಂಬಲವನ್ನು ಪಡೆದುಕೊಳ್ಳಲಾಗುತ್ತದೆ. ಅದಕ್ಕಾಗಿ ಎರಡು ತಂಡಗಳನ್ನು ರಚಿಸಲಾಗುತ್ತದೆ ಎಂಬ ಮಾಹಿತಿಯೂ ಈ ದಾಖಲೆಯಲ್ಲಿತ್ತು.
ಭಾರತ, ಶ್ರೀಲಂಕಾ ಮತ್ತು ನೇಪಾಳಗಳಲ್ಲಿ ಲಷ್ಕರ್ ಜಾಲವನ್ನು ಮತ್ತಷ್ಟು ವಿಸ್ತರಿಸಬೇಕು. ದಕ್ಷಿಣ ಭಾರತದಲ್ಲಿ ನಡೆಸುವ ದಾಳಿಗಳಿಗಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ತಮ್ಮ ಸದಸ್ಯರಿಗೆ ತರಬೇತಿ ನೀಡಲು ಸೂಕ್ತ ಸ್ಥಳವನ್ನು ಹುಡುಕಬೇಕು ಎನ್ನುವುದು ಖಾಫಾ ಬಯಕೆಯಾಗಿತ್ತು. ಅದರಂತೆ ಕಾರ್ಯಾಚರಣೆ ರೂಪಿಸಲಾಗಿತ್ತು.