ಬಾಬ್ರಿ ಮಸೀದಿ ಧ್ವಂಸಕ್ಕಿಂದು 18 ವರ್ಷ ತುಂಬಿದೆ. ಅಯೋಧ್ಯೆಯ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ವರ್ಷ ಭಾರತೀಯರಿಗೆ ವಿಶೇಷವಾಗಿರುವ ನಡುವೆಯೇ, ವಿವಾದಿತ ಸ್ಥಳದಲ್ಲಿ ಮಸೀದಿ-ಮಂದಿರ ಕಟ್ಟುವ ಕುರಿತಾಗಿನ ಗೊಂದಲಗಳು ಯಥಾ ರೀತಿಯಲ್ಲಿ ಮುಂದುವರಿದಿದೆ.
1992ರ ಡಿಸೆಂಬರ್ 6ರಂದು ಐತಿಹಾಸಿಕ ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು. ಇದಕ್ಕೆ ಇಂದು 18 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆ ಮತ್ತು ಫೈಜಾಬಾದ್‌ಗಳಲ್ಲಿ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಭಾರೀ ಸಂಖ್ಯೆಯ ಪೊಲೀಸ್ ಮತ್ತು ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
PTI
ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸೇರಿದಂತೆ ದೇಶದಾದ್ಯಂತ ಭದ್ರತೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಮಸೀದಿ ನಿರ್ಮಾಣವಾಗಬೇಕು: ಮಾವೋವಾದಿಗಳು 18 ವರ್ಷಗಳ ಹಿಂದಿ ಬಾಬ್ರಿ ಮಸೀದಿ ಧ್ವಂಸ ದಿನವನ್ನು ಕರಾಳ ದಿನ ಎಂದು ಹೇಳಿರುವ ಸಿಪಿಐ (ಮಾವೋವಾದಿ), ಅದೇ ಸ್ಥಳದಲ್ಲಿ ಮಸೀದಿಯನ್ನು ಪುನರ್ ನಿರ್ಮಿಸಬೇಕು ಮತ್ತು ಮಸೀದಿ ಧ್ವಂಸಗೊಳಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ.
ಸಿಪಿಐ (ಮಾವೋವಾದಿ) ಕೇಂದ್ರೀಯ ಸಮಿತಿಯು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ. ಬಾಬ್ರಿ ಮಸೀದಿ ಇದ್ದ ಸ್ಥಳ ಮುಸ್ಲಿಮರಿಗೇ ಸೇರಿದ್ದು ಮತ್ತು ಅದನ್ನು ಅವರಿಗೆ ವಾಪಸ್ ನೀಡಬೇಕು ಎಂದು ಸಿಪಿಐಎಂ ವಕ್ತಾರ ಅಭಯ್ ತಿಳಿಸಿದ್ದಾನೆ.
500 ವರ್ಷದಷ್ಟು ಪುರಾತನವಾದ ಬಾಬ್ರಿ ಮಸೀದಿಯನ್ನು ವಿವಾದಿತ ಸ್ಥಳವನ್ನಾಗಿ ಮಾಡಿದ್ದು ಹಿಂದೂ ಮೂಲಭೂತವಾದಿಗಳು. ಶ್ರೀರಾಮ ಹುಟ್ಟಿದ ಸ್ಥಳ ಎಂದು ಹೇಳಿ ವಿವಾದ ಎಬ್ಬಿಸಿ, ದೇಶದಲ್ಲಿ ಸಾವಿರಾರು ಮುಸ್ಲಿಮರನ್ನು ಕೋಮು ಗಲಭೆಗಳಲ್ಲಿ ಕೊಂದು ಹಾಕಲಾಯಿತು ಎಂದು ಮಾವೋವಾದಿಗಳು ತಿಳಿಸಿದ್ದಾರೆ.
ನಮ್ಮ ದೇಶದ ಇತಿಹಾಸದಲ್ಲೇ ಹಿಂದೂ ಮೂಲಭೂತವಾದಿಗಳು ನಡೆಸಿದ ಬಹುದೊಡ್ಡ ದಾಳಿಯೆಂದರೆ ಬಾಬ್ರಿ ಮಸೀದಿ ಧ್ವಂಸ. ಎಲ್.ಕೆ. ಅಡ್ವಾಣಿ, ಅಶೋಕ್ ಸಿಂಘಾಲ್, ಮುರಳಿ ಮನೋಹರ ಜೋಷಿ, ಪ್ರವೀಣ್ ತೊಗಾಡಿಯಾ, ಉಮಾ ಭಾರತಿ, ಸಾಧ್ವಿ ರೀತಾಂಬರ ಮುಂತಾದವರು ಇದರಲ್ಲಿ ನೇರವಾಗಿ ಪಾಲ್ಗೊಂಡಿದ್ದರು. ಆದರೆ ಇದುವರೆಗೂ ಅವರಿಗೆ ನ್ಯಾಯಾಲಯವು ಯಾವುದೇ ಶಿಕ್ಷೆ ವಿಧಿಸಿಲ್ಲ ಎಂದೂ ನಕ್ಸಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂದಿರವೇ ನಿರ್ಮಾಣವಾಗಲಿ: ತೊಗಾಡಿಯಾ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಂಬಂಧ ಸಂಸತ್ತು ನೂತನ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿರುವ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.
ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಬಿಡುವುದಿಲ್ಲ. ಇಡೀ 67 ಎಕರೆ ಪ್ರದೇಶದಲ್ಲಿ ರಾಮಮಂದಿರ ಮಾತ್ರ ಇರಬೇಕು ಎಂದು ಇಂದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಿಳಿಸಿದರು.
ಹೈದರಾಬಾದ್‌ನಲ್ಲಿ ಬಂದ್... ಬಾಬ್ರಿ ಮಸೀದಿ ಧ್ವಂಸಕ್ಕೆ 18 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ನೀಡಿರುವ ಹೈದರಾಬಾದ್ ಬಂದ್‌ಗೆ ಕೆಲವು ಕಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟುಗಳು ತೆರೆದಿಲ್ಲ. ಇತರೆಡೆ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.
ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲೀಮೆನ್, ಮಜ್ಲಿಸ್ ಬಚಾವೋ ತೆಹ್ರಿಕ್, ತಮೀರ್ ಇ ಮಿಲ್ಲತ್ ಮತ್ತು ಮುಸ್ಲಿಂ ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ವಿವಾದಿತ ಸ್ಥಳದಲ್ಲಿ ಮಸೀದಿ ಪುನರ್ ನಿರ್ಮಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದವು.