ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ ಉಗ್ರರಿಂದ ಜೀವ ಬೆದರಿಕೆ ಇತ್ತೆಂದು ಹೇಳಿದ್ದ ಕರ್ಕರೆ? (Congress | Digvijay Singh | Mumbai attacks | Hemant Karkare)
ಹಿಂದೂ ಉಗ್ರರಿಂದ ಜೀವ ಬೆದರಿಕೆ ಇತ್ತೆಂದು ಹೇಳಿದ್ದ ಕರ್ಕರೆ?
ನವದೆಹಲಿ, ಶನಿವಾರ, 11 ಡಿಸೆಂಬರ್ 2010( 12:20 IST )
ಉಗ್ರರಿಗೆ ಬಲಿಯಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರು ಮುಂಬೈ ದಾಳಿಗೆ ಎರಡು ಗಂಟೆ ಮೊದಲು ನನಗೆ ಕರೆ ಮಾಡಿ, ತನಗೆ ಹಿಂದೂ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
2008ರ ನವೆಂಬರ್ 26ರಂದು ಪಾಕಿಸ್ತಾನಿ ಭಯೋತ್ಪಾದಕರು ಕಾಮಾ ಹಾಸ್ಪಿಟಲ್ ಸಮೀಪ ಗುಂಡಿನ ದಾಳಿ ನಡೆಸಿ ಕರ್ಕರೆಯವರನ್ನು ಕೊಂದು ಹಾಕಿದ್ದರು.
ಆದರೆ ದಿಗ್ವಿಜಯ್ ವಾದ ಬೇರೆಯೇ ಇದೆ. ಹಿಂದೂ ಉಗ್ರವಾದಿಗಳಿಂದ ನಡೆದಿದೆ ಎಂದು ಹೇಳಲಾಗಿರುವ ಮಾಲೆಗಾಂವ್ ಸ್ಫೋಟದ ತನಿಖೆಯ ಬಗ್ಗೆ ಸಂಬಂಧಪಟ್ಟವರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಕರ್ಕರೆಯವರು ನನ್ನಲ್ಲಿ ಹೇಳಿದ್ದರು ಎಂದು ಕಾಂಗ್ರೆಸ್ ನಾಯಕ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಮುಂಬೈ ದಾಳಿ ನಡೆದ ಕೆಲವೇ ದಿನಗಳಲ್ಲಿ ಆಗಿನ ಅಲ್ಪಸಂಖ್ಯಾತ ಸಚಿವ ಎ.ಆರ್. ಅಂತುಲೆ ಕೂಡ ಇದೇ ವಾದ ಮಂಡಿಸಿದ್ದರು. ಭಯೋತ್ಪಾದನೆ ಅಥವಾ ಭಯೋತ್ಪಾದನೆ ಮತ್ತಿತರ ಕಾರಣಗಳಿಗೆ ಕರ್ಕರೆಯವರು ಬಲಿಪಶುವಾಗಿರಬಹುದು ಎಂದು ಅಂತುಲೆ ಹೇಳಿದ್ದರು. ಈ ಆರೋಪಗಳಿಗೆ ಭಾರೀ ಬೆಲೆ ತೆತ್ತಿದ್ದ ಅಂತುಲೆ ನಂತರ ರಾಜೀನಾಮೆ ಸಲ್ಲಿಸಿದ್ದರು.
ದಿಗ್ವಿಜಯ್ ಹೇಳಿಕೆಯಿದು... 2008ರ ನವೆಂಬರ್ 26ರಂದು ಮುಂಬೈ ದಾಳಿ ಆರಂಭವಾಗುವ ಎರಡು ಗಂಟೆ ಮೊದಲು ಸಂಜೆಯ ಏಳು ಗಂಟೆಗೆ ಹೇಮಂತ್ ಕರ್ಕರೆಯವರು ನನ್ನ ಮೊಬೈಲಿಗೆ ಕರೆ ಮಾಡಿದ್ದರು. ತಾನು ನಡೆಸುತ್ತಿರುವ ಮಾಲೆಗಾಂವ್ ಸ್ಫೋಟದ ತನಿಖೆಯಿಂದ ಅಸಮಾಧಾನಗೊಂಡ ಮಂದಿ ನನ್ನ ಕುಟುಂಬ ಮತ್ತು ಜೀವಕ್ಕೆ ನಿರಂತರ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದರು.
ತೀರಾ ಚಿಂತಿತರಾಗಿದ್ದ ಕರ್ಕರೆಯವರು, ಬೆದರಿಕೆ ಕರೆ ಬಂದಿರುವ ದೂರವಾಣಿಗಳನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇನೆ. ಆದರೆ ಅವರ ಪತ್ರಿಕೆಗಳಲ್ಲಿ ನನ್ನ ಬಗ್ಗೆ ವೈಯಕ್ತಿಕ ದಾಳಿಗಳನ್ನು ನಡೆಸಿರುವುದು ಮತ್ತು ಬೆದರಿಕೆಗಳು ಬಂದಿರುವುದರಿಂದ ನಾನು ತೀವ್ರ ನಿರುತ್ಸಾಹಗೊಂಡಿದ್ದೇನೆ ಮತ್ತು ಖಿನ್ನಗೊಂಡಿದ್ದೇನೆ ಎಂದಿದ್ದರು.
ನನ್ನ ಪುತ್ರ ಮುಂಬೈಯಲ್ಲಿ ವಿದ್ಯಾರ್ಥಿಯಾಗಿದ್ದ ವಾಸ್ತವದ ಹೊರತಾಗಿಯೂ, ಹಿಂದೂ ಬಲಪಂಥೀಯ ಸಂಘಟನೆಯ ಮುಖವಾಣಿ ಪತ್ರಿಕೆಯೊಂದು ನನ್ನ ಮಗ ದುಬೈಯಲ್ಲಿ ನೋಟು ಮುದ್ರಿಸುತ್ತಿದ್ದಾನೆ ಎಂದು ಆರೋಪಿಸುತ್ತಿದೆ ಎಂದೂ ಕರ್ಕರೆಯವರು ತನ್ನ ನೋವನ್ನು ತೋಡಿಕೊಂಡಿದ್ದರು.
ಅದೇ ದಿನ ತಡರಾತ್ರಿ ಕರ್ಕರೆಯವರು ಮುಂಬೈ ದಾಳಿಯಲ್ಲಿ ಹತರಾದರು ಎಂಬ ಸುದ್ದಿ ಕೇಳಿದಾಗ ಆಘಾತಕ್ಕೊಳಗಾದ ನಾನು, 'ಓ ದೇವರೇ, ಅವರು ಕರ್ಕರೆಯನ್ನು ಕೊಂದರು' ಎಂದು ತಕ್ಷಣ ಬಾಯಿಯಿಂದ ಬಂದಿತ್ತು.
ಆದರೆ ಭಯೋತ್ಪಾದಕರು ಮುಂಬೈ ನಗರದ ಮೇಲೆ ದಾಳಿ ನಡೆಸಿದ್ದಾರೆ ಎಂದು ನನಗೆ ತಿಳಿದದ್ದು ನಂತರ.
ಇದು ಈ ಹಿಂದೆಯೂ ಇದೇ ವಿಚಾರದಲ್ಲಿ ಸಾಕಷ್ಟು ವಿವಾದಿತ ಹೇಳಿಕೆಗಳನ್ನು ನೀಡಿರುವ ದಿಗ್ವಿಜಯ್ ಸಿಂಗ್ ಮಾತು. ಡಿಸೆಂಬರ್ 6ರಂದು ನಡೆದಿದ್ದ, ಉರ್ದು ಸಹರಾ ಪತ್ರಿಕೆಯ ಸಂಪಾದಕ ಅಜೀಜ್ ಬರ್ನೀಯವರ ಲೇಖನಿಯಲ್ಲಿ ಮೂಡಿರುವ '26/11, ಆರೆಸ್ಸೆಸ್ ಪಿತೂರಿ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇದನ್ನು ಬಹಿರಂಗಪಡಿಸಿದ್ದರು.