ಬಾಲಕಿಯೊಬ್ಬಳನ್ನು ಅಪಹರಿಸಿದ ನಾಲ್ವರು ಕಾಮುಕರು ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆಯೊಂದು ನಡೆದಿದೆ.
ದೆಹಲಿಯ ವಾಯುವ್ಯ ಪ್ರದೇಶದ ಸುಲ್ತಾನ್ಪುರಿ ಎಂಬಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ 18ರ ಹರೆಯ ಬಾಲಕಿಯನ್ನು ನಾಲ್ವರು ಬಲವಂತದಿಂದ ಕಾರಿನೊಳಕ್ಕೆ ಎಳೆದೊಯ್ದಿದ್ದರು.
ಈ ಸಂದರ್ಭದಲ್ಲಿ ಯುವತಿ ಸಾಕಷ್ಟು ಪ್ರತಿರೋಧರೋಧ ಒಡ್ಡಿ, ಕಾರಿನಲ್ಲಿದ್ದ ಕೆಲವು ವಸ್ತುಗಳನ್ನು ಎಸೆದಿದ್ದಳು. ಅದರ ಪರಿಣಾಮ ಕಾರಿನ ಗಾಜುಗಳು ಪುಡಿಯಾಗಿದ್ದವು. ಆದರೂ ಚಲಿಸುತ್ತಿದ್ದ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾರಿನೊಳಗೆ ಕೂಗಿಕೊಳ್ಳುತ್ತಿರುವ ಶಬ್ದ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಕಾರಿನ ನಂಬರ್ ನೀಡಿ ಮಾಹಿತಿ ಕೊಟ್ಟಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರು ಹಾಗೂ ಅಪ್ರಾಪ್ತನೊಬ್ಬ ಸೇರಿದಂತೆ ನಾಲ್ವರು ಕಾಮುಕರನ್ನು ವಶಕ್ಕೆ ತೆಗೆದುಕೊಂಡಿದ್ದರು. ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತರಾಗಿರುವವರನ್ನು ರಾಮ, ಚಂದ್ರಪಾಲ್ ಹಾಗೂ ಮನೀಷ್ ಎಂದು ಗುರುತಿಸಲಾಗಿದೆ. ಮತ್ತೊರ್ವ ಅಪ್ರಾಪ್ತ ಬಾಲಕನಾಗಿದ್ದು ಆತನನ್ನು ಬಾಲಾಪರಾಧಿ ಕಾಯ್ದೆಯಡಿ ಬಂಧಿಸಲಾಗಿದೆ.