ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಎರಡನೇ ಬಾರಿ ಬೂಟು ಎಸೆದ ಘಟನೆ ಭಾನುವಾರ ನಡೆದಿದ್ದು, ಬೂಟು ಅವರಿಗೆ ತಾಗಲಿಲ್ಲವಾದರೂ ಸನಿಹದಲ್ಲಿಯೇ ಬಿದ್ದಿತ್ತು.
ಹಿಸಾರ್ ಸರಕಾರಿ ಕಾಲೇಜಿನ ಆವರಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವೇಳೆಯಲ್ಲಿ ಅಜಿತ್ ಸಿಂಗ್ ಎಂಬ ಯುವಕ ಮುಖ್ಯಮಂತ್ರಿಗಳ ಮೇಲೆ ಶೂ ಎಸೆದಿದ್ದ. ಶೂ ವೇದಿಕೆ ಬಳಿ ಬಿದ್ದಿತ್ತು. ಕೂಡಲೇ ಜಾಗೃತರಾದ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡರು.
ಏತನ್ಮಧ್ಯೆ, ತಾನು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕಾಗಿ ಮುಖ್ಯಮಂತ್ರಿ ಹೂಡಾ ಅವರನ್ನು ಖುದ್ದು ಭೇಟಿ ಮಾಡಬೇಕೆಂದು ಕಿರ್ಮಾರಾ ನಿವಾಸಿ ಸಿಂಗ್ ಅಧಿಕಾರಿಗಳಲ್ಲಿ ಅಲವತ್ತುಕೊಂಡಿದ್ದ. ಆದರೆ ಆತನಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಆ ನಿಟ್ಟಿನಲ್ಲಿ ತಾನು ಅಸಮಾಧಾನಗೊಂಡು ಶೂ ಎಸೆದಿರುವುದಾಗಿ ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾನೆ.
ಕಳೆದ ಆಗಸ್ಟ್ 22ರಂದು ದಕ್ಷಿಣ ಹರಿಯಾಣದ ಮಹೇಂದ್ರಗಢ ಎಂಬಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ 21 ವರ್ಷದ ಶಕ್ತಿ ಸಿಂಗ್ ಎಂಬ ನಿರುದ್ಯೋಗಿ ಯುವಕ ಪತ್ರಕರ್ತರ ಗ್ಯಾಲರಿಯಿಂದ ಹೂಡಾ ಅವರತ್ತ ಶೂ ಎಸೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.