ಇಬ್ಬರೂ ಅಪರಿಚಿತರಾಗಿದ್ದವರು. ಆಧುನಿಕ ಜಗತ್ತಿನ ಸ್ನೇಹದ ವೇದಿಕೆ ಸಾಮಾಜಿಕ ಸಂಪರ್ಕತಾಣ ಅವರನ್ನು ಸ್ನೇಹಿತರನ್ನಾಗಿಸಿತು. ಕೆಲವೇ ದಿನಗಳಲ್ಲಿ ಅದು ಪ್ರೀತಿಗೆ ತಿರುಗಿತು. ಇಬ್ಬರೂ ಫೋಟೋ ಹಂಚಿಕೊಂಡರು. ಇದನ್ನೇ ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಯುವಕ ತನ್ನ ಪ್ರಿಯತಮೆಯ ಚಿತ್ರವನ್ನು ಬೆತ್ತಲೆ ಚಿತ್ರವೊಂದಕ್ಕೆ ಸೇರಿಸಿ, ಬ್ಲ್ಯಾಕ್‌ಮೇಲ್ ಮಾಡಿ ಈಗ ಜೈಲು ಪಾಲಾಗಿದ್ದಾನೆ.
ಇಂತಹ ಪ್ರಕರಣ ವರದಿಯಾಗಿರುವುದು ಮಧ್ಯಪ್ರದೇಶದ ಭೋಪಾಲದಿಂದ. ಆರೋಪಿ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ಪಿತ್ ಭಾರ್ಗವ್ (19) ಎಂಬಾತನನ್ನು ಅಸ್ಸಾಂ ಪೊಲೀಸರು ಭೋಪಾಲ ಸಮೀಪದ ಜಬಲ್ಪುರದಲ್ಲಿನ ಆತನ ಮನೆಯಿಂದಲೇ ಬಂಧಿಸಿದ್ದಾರೆ.
ಅಸ್ಸಾಂನ ಗುವಾಹತಿಯ ಹುಡುಗಿ ದಿವ್ಯಾ (ಹೆಸರು ಬದಲಾಯಿಸಲಾಗಿದೆ) ಮತ್ತು ಆಕೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಎರಡು ವರ್ಷಗಳ ಹಿಂದೆ ರಮ್ಯಾ ದೆಹಲಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಭಾರ್ಗವ ಪರಿಚಿತನಾಗಿದ್ದ. ತನ್ನ ನಕಲಿ ಫೋಟೋ ಬಳಸಿ ಆತ ಖಾತೆ ತೆರೆದಿದ್ದ. ನಂತರ ಇಬ್ಬರೂ ಪರಸ್ಪರ ತಮ್ಮ ಭಾವಚಿತ್ರಗಳನ್ನು ಅದಲು-ಬದಲು ಮಾಡಿಕೊಂಡಿದ್ದರು.
ನಂತರ ಇವರ ಸಂಬಂಧ ಬಹುಕಾಲ ಅಂದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿಯಿತು. ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಹರಟುವುದು, ನೆಟ್‌ವರ್ಕ್‌ನಲ್ಲಿ ಚಾಟಿಂಗ್ ಮಾಡುವುದು ನಡೆಯುತ್ತಿತ್ತು.
ಆದರೆ ಭಾರ್ಗವ ನೀಡಿದ್ದು ನಕಲಿ ಫೋಟೋ ಎಂಬುದು ಅದ್ಹೇಗೋ ದಿವ್ಯಾಳಿಗೆ ತಿಳಿದು ಹೋಯಿತು. ಇದರ ಬಳಿಕ ಸಂಬಂಧ ಕಡಿದುಕೊಳ್ಳಲು ಮುಂದಾದ ದಿವ್ಯಾ, ಆತನಿಂದ ದೂರವಾದಳು.
ಇದರಿಂದ ಕ್ಷುದ್ರಗೊಂಡ ಭಾರ್ಗವ, ಆಕೆಯ ಫೇಸ್‌ಬುಕ್ ಖಾತೆ ಮತ್ತು ಮೊಬೈಲ್‌ಗೆ ಬೆದರಿಕೆ ಸಂದೇಶಗಳನ್ನು ರವಾನಿಸಲು ಆರಂಭಿಸಿದ. ನನ್ನನ್ನು ಇನ್ನು ಮುಂದೆ ಸಂಪರ್ಕಿಸಬೇಡ ಎಂದು ಹೇಳಿದ ಮೇಲೂ ಆತ ಬೆನ್ನು ಹತ್ತುವುದನ್ನು ಬಿಡಲಿಲ್ಲ.
ಈ ಹಂತದಲ್ಲಿ ವಿಕೃತ ಚಿಂತನೆಗೆ ಮುಂದಾದ ಭಾರ್ಗವ, ದಿವ್ಯಾ ಈ ಹಿಂದೆ ನೀಡಿದ್ದ ಭಾವಚಿತ್ರಕ್ಕೆ ಇಂಟರ್ನೆಟ್ಟಿನಲ್ಲಿ ಸಿಕ್ಕಿದ ಬೆತ್ತಲೆ ಚಿತ್ರಗಳಿಗೆ ಜೋಡಿಸಿ, ಅವುಗಳನ್ನು ನೆಟ್‌ವರ್ಕಿಂಗ್ ಸೈಟ್‌ನಲ್ಲಿ ಪೋಸ್ಟ್ ಮಾಡಿದ.
ಇಷ್ಟು ಹೊತ್ತಿಗೆ ಹುಡುಗಿಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ತಕ್ಷಣವೇ ಸಂಬಂಧಪಟ್ಟ ಖಾತೆಯನ್ನು ಸಿಐಡಿ ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಆದರೂ ಹಠ ಬಿಡದ ಭಾರ್ಗವ ಇನ್ನೊಂದು ಪ್ರೊಫೈಲ್ ಸೃಷ್ಟಿಸಿ ಅದರಲ್ಲಿ ಬೆತ್ತಲೆ ಚಿತ್ರಗಳನ್ನು ಪೋಸ್ಟ್ ಮಾಡಲಾರಂಭಿಸಿದ.
ಕೊನೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಎಸ್ಎಂಎಸ್ ಕಳುಹಿಸುತ್ತಿದ್ದ ಮೊಬೈಲ್ ಟವರ್ ಆಧರಿಸಿ ಭಾರ್ಗವನನ್ನು ಬಂಧಿಸಿದ್ದಾರೆ. ಆತ ತನ್ನ ಮೂರು ಮೊಬೈಲ್ ಫೋನ್‌ಗಳಿಂದ ದಿವ್ಯಾಳಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ.
ಆರೋಪಿ ಕೃತ್ಯಕ್ಕಾಗಿ ಬಳಸಿದ ಮೂರು ಮೊಬೈಲ್ ಫೋನ್, ಕಂಪ್ಯೂಟರ್ ಮತ್ತು ತಿದ್ದಿದ ಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.