ಸ್ವತಃ 2ಜಿ ಹಗರಣ ಆರೋಪದಲ್ಲಿ ಸಿಲುಕಿ ನಲುಗುತ್ತಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ದೇಶದ ಗಮನ ವಿಕೇಂದ್ರೀಕರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ನೀವು ಕೇಂದ್ರ ಸರಕಾರಕ್ಕೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳುವ ಮೊದಲು ನಿಮ್ಮ ಬಟ್ಟಲಿನಲ್ಲಿ ಆನೆ ಬಿದ್ದಿರುವುದನ್ನು ನೋಡಿಕೊಳ್ಳಿ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೋನಿಯಾ, ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಮುಂದುವರಿಸಲು ಅವಕಾಶ ನೀಡಿರುವ ಬಿಜೆಪಿಗೆ ಭ್ರಷ್ಟಾಚಾರದ ಕುರಿತು ಉಸಿರೆತ್ತುವ ನೈತಿಕತೆಯಿಲ್ಲ ಕಿಡಿ ಕಾರಿದರು.
PTI
ಭ್ರಷ್ಟಾಚಾರದ ಕುರಿತು ನಮಗೆ ಪಾಠ ಹೇಳಲು ಬಿಜೆಪಿ ಯಾರು? ಕರ್ನಾಟಕದ್ದು ಭ್ರಷ್ಟ ಸರಕಾರ. ಭೂ ಹಗರಣಗಳಲ್ಲಿ ಸಿಲುಕಿ ಜಗಜ್ಜಾಹೀರಾದರೂ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿದಿದ್ದಾರೆ. ಅವರ ಪಕ್ಷದ ಅಧ್ಯಕ್ಷರೇ (ಬಂಗಾರು ಲಕ್ಷ್ಣಣ್) ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದವರು. ಇಂತಹ ಪಕ್ಷದಿಂದ ಕಾಂಗ್ರೆಸ್ ಕಲಿಯುವಂತದ್ದು ಏನೂ ಇಲ್ಲ ಎಂದು ಕುಟುಕಿದರು.
ತನ್ನ ಪಕ್ಷದ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಾಗ ಕಾಂಗ್ರೆಸ್ ತಕ್ಷಣವೇ ಕ್ರಮ ಕೈಗೊಂಡಿದೆ ಎಂದ ಸೋನಿಯಾ, ಬಿಜೆಪಿಯು ಅಂತಹ ನಡೆಯನ್ನು ಅನುಸರಿಸಿಲ್ಲ ಎಂದು ಎತ್ತಿ ತೋರಿಸಿದರು. ಇಂತಹ ಮಂದಿ ಆಗ್ರಹಿಸುತ್ತಿರುವ 2ಜಿ ತರಂಗಾಂತರ ಹಗರಣದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಾವು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕೇಂದ್ರ ಸರಕಾರ ಮುಖಭಂಗ ಅನುಭವಿಸುತ್ತರುವ ಹೊತ್ತಿನಲ್ಲಿ ಜನತೆಯ ಗಮನವನ್ನು ಬೇರೆಡೆಗೆ ಸೆಳೆದು, ಅಕ್ರಮಗಳ ಸುಳಿಯಿಂದ ಪಾರಾಗಲು ಸೋನಿಯಾ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವತಃ ಸೋನಿಯಾ ಗಾಂಧಿಯವರ ಇಬ್ಬರು ಸಹೋದರಿಯರಾದ ಅನೂಷ್ಕಾ ಮತ್ತು ನಾಡಿಯಾ ಎಂಬವರು 2ಜಿ ಹಗರಣದಲ್ಲಿ ಶೇ.60ರ (36,000 ಕೋಟಿ ರೂಪಾಯಿ) ಪಾಲು ಪಡೆದಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.