ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಶಕ್ತಿ ಕೇಂದ್ರಕ್ಕೆ ದಾಳಿ ನಡೆದು ಇಂದಿಗೆ ಸರಿಯಾಗಿ ಒಂಬತ್ತು ವರ್ಷ. ಆದರೆ ಇದಕ್ಕೆಲ್ಲ ಕಾರಣನಾದ ದೇಶೀ ಭಯೋತ್ಪಾದಕ ಅಫ್ಜಲ್ ಗುರು ಇನ್ನೂ ಜೈಲಿನಲ್ಲಿ ಆರಾಮವಾಗಿ ದಿನ ಕಳೆಯುತ್ತಿದ್ದಾನೆ. ಆತನ ಸಾವಿಗೆ ಇಡೀ ದೇಶವೇ ಕಾಯುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸಂಸತ್ ದಾಳಿಯ ದಿನ ತಮ್ಮ ಪ್ರಾಣಗಳನ್ನು ಕೊಟ್ಟು ಹುತಾತ್ಮರಾದವರಿಗೆ ನಾನು ಋಣಿಯಾಗಿದ್ದೇನೆ, ಅವರ ಬಲಿದಾನವನ್ನು ಗೌರವಿಸುತ್ತೇನೆ. ಅದೇ ಹೊತ್ತಿಗೆ ಇಂತಹ ದಾಳಿಗೆ ಕಾರಣನಾಗಿರುವ, ನ್ಯಾಯಾಲಯಗಳಿಂದ ತೀರ್ಪು ಪಡೆದುಕೊಂಡಿರುವ ಅಫ್ಜಲ್ ಗುರುವನ್ನು ಯಾಕೆ ಶಿಕ್ಷಿಸಲಾಗುತ್ತಿಲ್ಲ ಎಂದು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇರುತ್ತದೆ. ಆ ಪಾತಕಿಯ ಸಾವಿಗೆ ಇಡೀ ದೇಶವೇ ಕಾಯುತ್ತಿದೆ ಎಂದು ಸುಷ್ಮಾ ಅಭಿಪ್ರಾಯಪಟ್ಟರು.
ಸಂಸತ್ ದಾಳಿಗೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ ಅವರು ಮಾತನಾಡುತ್ತಿದ್ದರು.
ಸಂಸತ್ ಭವನದಲ್ಲಿರುವ ಯೋಧರ ಸ್ಮಾರಕಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಸೇರಿದಂತೆ ನೂರಾರು ಗಣ್ಯರು ಈ ಸಂದರ್ಭದಲ್ಲಿ ಗೌರವ ಅರ್ಪಿಸಿದರು.
ಅಫ್ಜಲ್ ಗುರು ಗಲ್ಲಿನ ಹಾದಿ... 2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ 2002ರ ಡಿಸೆಂಬರ್ 18ರಂದು ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು 2003ರ ಅಕ್ಟೋಬರ್ 29ರಂದು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಫ್ಜಲ್ ಮೇಲ್ಮನವಿಯನ್ನು 2005ರ ಆಗಸ್ಟ್ 4ರಂದು ಸುಪ್ರೀಂ ಕೋರ್ಟ್ ಕೂಡ ತಳ್ಳಿ ಹಾಕಿತ್ತು.
2006ರ ಅಕ್ಟೋಬರ್ 20ರಂದು ತಿಹಾರ್ ಜೈಲಿನಲ್ಲಿ ಭಯೋತ್ಪಾದಕನನ್ನು ಗಲ್ಲಿಗೆ ಹಾಕುವಂತೆ ಸೆಷನ್ಸ್ ನ್ಯಾಯಾಲಯವು ಮುಹೂರ್ತವನ್ನೂ ನಿಗದಿಪಡಿಸಿತ್ತು. ಆದರೆ ಆತನ ಪತ್ನಿ ತಬಸಮ್ ಗುರು ನಾಲ್ಕು ವರ್ಷಗಳ ಹಿಂದೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ಬಿದ್ದಿತ್ತು. ಪ್ರಸಕ್ತ ಈ ಅರ್ಜಿ ಕೇಂದ್ರ ಸರಕಾರದ ಮೂಗಿನ ಕೆಳಗೆ ಕೊಳೆಯುತ್ತಾ ಬಿದ್ದಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರು, ದೇಶೀ ಉಗ್ರರ ಜತೆ ಸೇರಿಕೊಂಡು ಒಂಬತ್ತು ವರ್ಷಗಳ ಹಿಂದೆ ನಡೆಸಿದ್ದ ಈ ದಾಳಿಯಲ್ಲಿ ಐವರು ಪೊಲೀಸರೂ ಸೇರಿದಂತೆ ಒಂಬತ್ತು ರಕ್ಷಣಾ ಸಿಬ್ಬಂದಿಗಳು ಬಲಿಯಾಗಿದ್ದರು.
ಕಾಂಗ್ರೆಸ್ ಪೊಲಿಕಿಕ್ಸ್? ಎಲ್ಲಾ ವಿಚಾರಗಳಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎನ್ನುವುದು ಕೇಳಿ ಬರುತ್ತಿರುವ ಆರೋಪ. ಅದರಂತೆ ಕಾಶ್ಮೀರಿಯಾಗಿರುವ ಅಫ್ಜಲ್ ಗುರು ಸಾವನ್ನು ಕೂಡ ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಮರಣದಂಡನೆಯನ್ನು ಮುಂದಕ್ಕೆ ಹಾಕುವ ಮೂಲಕ ಮುಸ್ಲಿಮರ ಒಲವು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಆರೋಪಗಳಿವೆ.
ಅದಕ್ಕೆ ತಕ್ಕಂತೆ ಕೇಂದ್ರದ ಮಾಜಿ ಗೃಹಸಚಿವ ಶಿವರಾಜ್ ಸಿಂಗ್ ಪಾಟೀಲ್, ಪ್ರಸಕ್ತ ಗೃಹಸಚಿವ ಪಿ. ಚಿದಂಬರಂ ಮತ್ತು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮುಂತಾದ ಕಾಂಗ್ರೆಸ್ ನಾಯಕರು ಕಾಲಕಾಲಕ್ಕೆ ತಕ್ಕಂತೆ ಈ ಬಗ್ಗೆ ಋಣಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿರುವುದು ಕಾಣ ಸಿಗುತ್ತದೆ.
ಇಲ್ಲ, ಅಫ್ಜಲ್ ಗುರು ಸರದಿ ಬಂದಾಗ ಆತನನ್ನು ಗಲ್ಲಿಗೇರಿಸಲಾಗುತ್ತದೆ. ಸರದಿ ತಪ್ಪಿಸಿ ಗಲ್ಲಿಗೆ ಹಾಕುವುದು ಸಾಧ್ಯವಿಲ್ಲ ಎನ್ನುವುದು ಸರಕಾರದ ಸಮರ್ಥನೆ. ದೇಶದ ಶಕ್ತಿಕೇಂದ್ರಕ್ಕೆ ದಾಳಿ ಮಾಡಿದ ಉಗ್ರನನ್ನೇ ಶಿಕ್ಷಿಸಲಾರದ ಸರಕಾರ, ನಮ್ಮನ್ನು ಹೇಗೆ ರಕ್ಷಿಸುತ್ತದೆ ಎನ್ನುವುದು ಜನತೆಯ ಆತಂಕ. ಆದರೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.