ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 2ಜಿ ತರಂಗಾಂತರ ಹಂಚಿಕೆ ಹಗರಣ ಸಂಸತ್ತಿನ ಚಳಿಗಾಲದ ಅಧಿವೇಶನವನ್ನೇ ನುಂಗಿ ಹಾಕಿದೆ. ಪ್ರತಿಷ್ಠೆಗೆ ಬಿದ್ದ ರಾಜಕೀಯ ಪಕ್ಷಗಳು, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವಂತೆ ಮಾಡಿವೆ. ಆದರೆ ಇದನ್ನು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಸಮರ್ಥಿಸಿಕೊಂಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಸತತ 23ನೇ ಹಾಗೂ ಕೊನೆಯ ದಿನದ ಕಲಾಪಕ್ಕೂ ಪ್ರತಿಪಕ್ಷಗಳು ಅವಕಾಶ ನೀಡಲಿಲ್ಲ. 2ಜಿ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕೆಂಬ ಪಟ್ಟಿನಿಂದ ಹಿಂದಕ್ಕೆ ಸರಿಯಲಿಲ್ಲ. ದಾರಿ ಕಾಣದ ಸ್ಪೀಕರುಗಳು, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಇದರೊಂದಿಗೆ 2ಜಿ ಹಗರಣದ ರಾಜಕೀಯ ಮೇಲಾಟ ಇನ್ನು ಸಂಸತ್ತಿನ ಹೊರಗಡೆ ಪ್ರಬಲವಾಗುವ ಎಲ್ಲಾ ಸ್ಪಷ್ಟ ಸೂಚನೆಗಳು ಲಭಿಸಿವೆ. ಯುಪಿಎಯೇತರ ಪಕ್ಷಗಳು ಎನ್‌ಡಿಎ ನೇತೃತ್ವದಲ್ಲಿ ದೇಶದಾದ್ಯಂತ ಪ್ರತಿಭಟನಾ ರ‌್ಯಾಲಿಗಳನ್ನು ನಡೆಸುವ ಯೋಚನೆಯಲ್ಲಿವೆ.
ಈ ನಡುವೆ ಕಲಾಪಕ್ಕೆ ಅಡ್ಡಿಪಡಿಸಿರುವ ಪ್ರತಿಪಕ್ಷಗಳ ಕ್ರಮವನ್ನು ಅಡ್ವಾಣಿ ಸಮರ್ಥಿಸಿಕೊಂಡಿದ್ದಾರೆ. ಕೆಲವು ಬಾರಿ ಕಲಾಪ ನಡೆಯದಿದ್ದರೂ ಫಲಿತಾಂಶಗಳು ಸಿಗುತ್ತವೆ ಎಂದು ಪತ್ರಕರ್ತರೊಂದಿಗೆ ಹೇಳಿಕೊಂಡಿದ್ದಾರೆ.
ಸೋಮವಾರ ಕೊನೆಗೊಂಡಿರುವ ಚಳಿಗಾಲದ ಅಧಿವೇಶನ ವಸ್ತುಶಃ ಯಾವುದೇ ಫಲಿತಾಂಶ ನೀಡಿರದ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ಅಡ್ವಾಣಿಯವರು ಪ್ರತಿಕ್ರಿಯಿಸಿದರು.
ನನಗೆ ತೀವ್ರ ನೋವಾಗಿದೆ - ಹೀಗೆಂದು ಹೇಳಿರುವುದು ಸ್ಪೀಕರ್ ಮೀರಾ ಕುಮಾರ್. ಅಧಿವೇಶನವು ಸಂಪೂರ್ಣವಾಗಿ ವ್ಯರ್ಥವಾಗಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುದೀರ್ಘ ಅವಧಿಯ ಕಾಲ ಸಂಸತ್ ಅಧಿವೇಶನಕ್ಕೆ ಧಕ್ಕೆಯುಂಟಾಗಿರುವುದು ಇದೇ ಮೊದಲು. ಕಾಂಗ್ರೆಸ್‌ನ ಕುಖ್ಯಾತ 64 ಕೋಟಿ ರೂಪಾಯಿಗಳ ಬೋಫೋರ್ಸ್ ಹಗರಣದಲ್ಲಿ 45 ದಿನಗಳ ಕಾಲ ಸಂಸತ್ ಅಧಿವೇಶನಕ್ಕೆ ಅಡೆ-ತಡೆಗಳು ಎದುರಾಗಿದ್ದರೂ, ಸಂಪೂರ್ಣವಾಗಿ ಪ್ರಸಕ್ತ ನಡೆದಿರುವಂತೆ ಕಲಾಪ ರದ್ದುಗೊಂಡಿರಲಿಲ್ಲ.