ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೊಲೀಸರಿಂದ ಚಿತ್ರಹಿಂಸೆ; ನಾವ್ಯಾಕೆ ನಕ್ಸಲರಾಗಬಾರದು? (Maoists | Chhattisgarh tribals | police | India)
Bookmark and Share Feedback Print
 
ನಕ್ಸಲ್‌ವಾದವು ಸಮಸ್ಯೆಗೆ ಪರಿಹಾರವಲ್ಲದೇ ಇರಬಹುದು. ಆದರೆ ಸೇಡು, ಪ್ರತೀಕಾರ ತೀರಿಸಿಕೊಳ್ಳಲು ಇದಕ್ಕಿಂತ ಉತ್ತಮ ಹಾದಿ ಯಾವುದಿದೆ? ಪೊಲೀಸರ ದೌರ್ಜನ್ಯ, ಸಮಾಜದಲ್ಲಿನ ಅಸಮಾನತೆ, ರಾಜಕೀಯ ಪಕ್ಷಗಳ ಸೋಗಲಾಡಿತನಗಳ ವಿರುದ್ಧ ಸಿಡಿದೇಳಲು ಇದಕ್ಕಿಂತ ಉತ್ತಮವಾದ ವೇದಿಕೆ ಎಲ್ಲಿದೆ? ನಾವೂ ಯಾಕೆ ಮಾವೋವಾದಿಗಳಾಗಬಾರದು ಎಂದು ಪ್ರಶ್ನಿಸಿದ್ದಾರೆ ಛತ್ತೀಸ್‌ಗಢದ ಶೋಷಿತರು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೊಂಚ ಪ್ರತಿರೋಧ ಒಡ್ಡುವವರನ್ನೆಲ್ಲ ಮಾವೋಗಳು ಎಂದು ಹೇಳಲಾಗುತ್ತದೆ. ನಕ್ಸಲ್ ದಮನದ ಹೆಸರಿನಲ್ಲಿ ಪೊಲೀಸರು, ಭದ್ರತಾ ಪಡೆಗಳು ಅಮಾಯಕರನ್ನು ಮಾವೋಗಳ ಹೆಸರಿನಲ್ಲಿ ಸುಲಭವಾಗಿ ಕೊಂದು ಹಾಕುತ್ತಿದ್ದಾರೆ. ಸುಖಾ ಸುಮ್ಮನೆ ನಕ್ಸಲರ ಹೆಸರಿನಲ್ಲಿ ಸಾಯುವುದಕ್ಕಿಂತ ನಾವೇ ನಕ್ಸಲರಾದರೆ ಉತ್ತಮವಲ್ಲವೇ? ನಮಗೆ ನ್ಯಾಯ ಒದಗಿಸುವವರೇ ಇಲ್ಲವೇ ಎಂದು ಛತ್ತೀಸ್‌ಗಢದ ಮುಗ್ಧ ನಾಗರಿಕರು ಕಣ್ಣೀರು ಹಾಕುತ್ತಾರೆ.

ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಬಸ್ತಾರ್ ಜಿಲ್ಲೆಯ ಕೊಲೆಂಗ್ ಪ್ರದೇಶದಲ್ಲಿನ ಇಬ್ಬರು ಗ್ರಾಮಸ್ಥರು ಪಡಿತರ ಅಂಗಡಿಗೆಂದು ಹೋಗಿದ್ದವರನ್ನು ಅರಣ್ಯ ಪ್ರದೇಶದಲ್ಲಿ ಪೊಲೀಸರು ಕೊಂದು ಹಾಕಿದ್ದಾರೆ. ನಕ್ಸಲರ ಹೆಸರಿನಲ್ಲಿ ಅವರನ್ನು ಕೊಂದು ಹಾಕಲಾಗಿತ್ತು.

ಈ ರೀತಿಯಾಗಿ ಸುಖಾಸುಮ್ಮನೆ ನಕ್ಸಲರ ಹೆಸರಿನಲ್ಲಿ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುವುದಕ್ಕಿಂತ, ನಾವು ಕೂಡ ಮಾವೋವಾದಿಗಳಾಗಿ ಸರಕಾರದ ದೌರ್ಜನ್ಯದ ವಿರುದ್ಧ ಹೋರಾಡುವುದು ಉತ್ತಮ. ಪೊಲೀಸರು ಯಾಕೆ ಈ ರೀತಿಯಾಗಿ ಯೋಜನೆ ರೂಪಿಸಿ ನಮ್ಮನ್ನು ಕೊಲ್ಲುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು 22ರ ಹರೆಯದ ವೊಹ್ರು ಎಂಬ ಯುವಕ ತನ್ನ ವ್ಯಥೆಯನ್ನು ತೋಡಿಕೊಂಡಿದ್ದಾನೆ.

ಕಳೆದ ಮೂರು ದಶಕಗಳಿಂದ ಬಸ್ತಾರ್ ಪ್ರಾಂತ್ಯ ಮಾವೋವಾದಿಗಳು ಮತ್ತು ಪೊಲೀಸರ ಘರ್ಷಣೆಗೆ ಹೆಸರಾಗಿದೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ನಾಗರಿಕರು ಇಲ್ಲಿದ್ದಾರೆ. ಇದುವರೆಗೆ ಪೊಲೀಸರ ಗುಂಡಿಗೆ ಬಲಿಯಾದ ಅಮಾಯಕರ ಜೀವಗಳೆಷ್ಟು ಲೆಕ್ಕ ಕೇಳಿದವರು ಜೀವಂತವಾಗಿ ಉಳಿದಿಲ್ಲ.

ಮೆಹ್ರು ಮತ್ತು ಶ್ಯಾಮ್ ಶಂಕರ್ ಎಂಬ ಇಬ್ಬರು ನಮ್ಮವರು ರೇಷನ್ ಖರೀದಿಸಲು ಇತರ ಕೆಲವು ಮಂದಿಯ ಜತೆ ಪಕ್ಕದ ಗ್ರಾಮಕ್ಕೆ ಹೋಗಿದ್ದರು. ಹಾಗೆ ವಾಪಸ್ ಬರುತ್ತಿದ್ದಾಗ ಪೊಲೀಸರು ಅರಣ್ಯ ಪ್ರದೇಶದಲ್ಲಿನ ರಸ್ತೆ ಬದಿಯಲ್ಲಿ ಗುಂಡಿಕ್ಕಿ ಕೊಂದು ಹಾಕಿದ್ದಾರೆ.

ಮರುದಿನವಷ್ಟೇ ನಮಗೆ ಇಬ್ಬರನ್ನು ಪೊಲೀಸರು ಕೊಂದಿರುವ ವಿಚಾರ ತಿಳಿಯಿತು. ಗ್ರಾಮಕ್ಕೆ ಬಂದ ಪೊಲೀಸರು, ಇಬ್ಬರು ನಕ್ಸಲರನ್ನು ನಾವು ಕೊಂದು ಹಾಕಿದ್ದೇವೆ. ಇನ್ನೂ ಹಲವು ಮಂದಿ ಇಲ್ಲಿ ಪಕ್ಕದಲ್ಲಿ ಅಡಗಿಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಅವರು ನಮ್ಮನ್ನೆಲ್ಲ ಗುರಿ ಮಾಡಿಕೊಂಡು ಈ ರೀತಿಯಾಗಿ ಹೇಳುತ್ತಿದ್ದಾರೆ ಎಂದು ತಮ್ಮ ಪ್ರಾಣ ಭೀತಿಯಲ್ಲಿರುವ ಪಾಂಡುರಾಮ್ ಎಂಬವರು ಹೇಳುತ್ತಾರೆ.

ನಾಗರಿಕರಿಂದ ತೀವ್ರ ಪ್ರತಿಭಟನೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಸ್ತಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಸುಂದರರಾಜ್ ವಾಸ್ತವ ಸ್ಥಿತಿಗೆ ಬಂದಂತೆ ಕಾಣುತ್ತಿದೆ.

ರಸ್ತೆ ಬದಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮಾವೋವಾದಿಗಳೆಂದು ಕೊಂದು ಹಾಕಿರುವುದು ಎಸ್‌ಟಿಎಫ್ ಮತ್ತು ಜಿಲ್ಲಾ ಪೊಲೀಸ್ ದಳ. ಈ ಸಂಬಂಧ ನಾವು ನಡೆಸಿದ ತನಿಖೆಯ ಪ್ರಾಥಮಿಕ ಮಾಹಿತಿಗಳ ಪ್ರಕಾರ ಬಲಿಯಾದವರು ನಾಗರಿಕರು. ನಮ್ಮ ಪ್ರಕಾರ ತಪ್ಪು ಮಾಹಿತಿಯಿಂದಾಗಿ ಅವರು ಎನ್‌ಕೌಂಟರಿನಲ್ಲಿ ಬಲಿಯಾಗಿದ್ದಾರೆ ಎಂದು ಸುಂದರರಾಜ್ ಹೇಳಿದ್ದಾರೆ.

ಪೊಲೀಸರು ನಾಗರಿಕರನ್ನು ಈ ರೀತಿಯಾಗಿ ಕೊಂದು ಹಾಕುತ್ತಿರುವುದು ಮತ್ತು ಘಟನೆ ನಡೆದ ನಂತರ ಇಲಾಖೆಯು ಇಂತಹ ಭರವಸೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೊಂದ ನಂತರ ವಿಷಾದ ವ್ಯಕ್ತಪಡಿಸಿ ಕೈತೊಳೆದುಕೊಳ್ಳುತ್ತಾರೆ. ಆದರೆ ಕೆಲ ದಿನಗಳ ಬಳಿಕ ಸುಮ್ಮನೆ ನಮ್ಮನ್ನು ಗುರಿ ಮಾಡಿ ಕೊಲ್ಲುತ್ತಾರೆ ಎಂದು ತಮ್ಮ ಮನೆಯವರನ್ನು ಕಳೆದುಕೊಂಡಿರುವ ಗ್ರಾಮಸ್ಥರು ಗದ್ಗದಿತರಾಗುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ