ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ಸಂಘ ಬಿಜೆಪಿ ಬಿಡಲಿ: ದಿಗ್ವಿಜಯ್ ಪುಕ್ಕಟೆ ಸಲಹೆ (BJP | RSS | Congress | Digvijay Singh)
Bookmark and Share Feedback Print
 
ಕಾಂಗ್ರೆಸ್‌ನ ವಿವಾದಿತ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಆರೆಸ್ಸೆಸ್-ಬಿಜೆಪಿಯತ್ತ ತನ್ನ ಉರಿ ನಾಲಿಗೆ ಹರಿಸಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಹರಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕೇಸರಿ ಪಕ್ಷವು ದೂರ ಸರಿಯಬೇಕು ಎಂದು ಅವರು ಪುಕ್ಕಟೆ ಸಲಹೆ ನೀಡಿದ್ದಾರೆ.

ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದು ನಿಜವಾದರೂ, ಬಿಜೆಪಿಯು ಹಿಂದೂ ಮೂಲಭೂತವಾದದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ಭಯೋತ್ಪಾದನೆಯನ್ನು ಹರಡುವಲ್ಲಿ ಸಕ್ರಿಯರಾಗಿರುವ ಆರೋಪ ಹೊತ್ತಿರುವ ಆರೆಸ್ಸೆಸ್‌ನಿಂದ ಕೇಸರಿ ಪಕ್ಷವು ದೂರ ಸರಿಯಬೇಕು. ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ದಿಗ್ವಿಜಯ್ ಹೇಳಿದ್ದಾರೆ.

ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಹೆಸರಿಗೆ ಕಳಂಕ ಅಂಟಿಸುವ ಮೂಲಕ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ಬಾಳ್ ಠಾಕ್ರೆಯವರು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದಾರೆ ಎಂದೂ ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

ಹೇಮಂತ್ ಕರ್ಕರೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಅಡ್ವಾಣಿ, ಭಯೋತ್ಪಾದನೆ ಆರೋಪದಲ್ಲಿ ಜೈಲು ಸೇರಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಭೇಟಿ ಮಾಡಿದ್ದ ರಾಜನಾಥ್ ಸಿಂಗ್ ಮತ್ತು ಕರ್ಕರೆ ವಿರುದ್ಧ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯವರಿಗೆ ತಾವು ಮಾಡಿದ್ದು ರಾಷ್ಟ್ರ ವಿರೋಧಿ ಕೃತ್ಯಗಳು ಎಂಬುದು ಮನವರಿಕೆಯಾಗುತ್ತಿಲ್ಲ ಎಂದು ದಿಗ್ವಿಜಯ್ ಚುಚ್ಚಿದ್ದಾರೆ.

ಭಯೋತ್ಪಾದನೆ ಸಂಬಂಧದ ಆರೋಪಗಳ ಮೇಲೆ ಬಂಧನಕ್ಕೊಳಗಾಗಿರುವ ಸ್ವಾಮಿ ಆಸೀಮಾನಂದ್ ಜತೆ ಕೆಲವು ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡದ್ದು ರಾಷ್ಟ್ರೀಯತೆಯೇ ಎಂದು ಈಗ ಪ್ರಶ್ನಿಸುತ್ತಿರುವ ದಿಗ್ವಿಜಯ್, ತನ್ನ ಹೇಳಿಕೆಗೆ ಬಿಜೆಪಿ ನೀಡಿರುವ ಪ್ರತಿಕ್ರಿಯೆ ಇಬ್ಬಗೆಯದ್ದು ಎಂದು ಟೀಕಿಸಿದ್ದಾರೆ.

ಮುಂಬೈ ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರು ತನಗೆ ಫೋನ್ ಮಾಡಿದ್ದರು ಎಂದು ಪುರಾವೆ ರಹಿತವಾಗಿ ಹೇಳಿದ್ದ ದಿಗ್ವಿಜಯ್ ಪ್ರಸಕ್ತ ತನ್ನ ಹಿಂದಿನ ಹೇಳಿಕೆಯನ್ನು ತಪ್ಪಿಯೂ ಉಲ್ಲೇಖಿಸುತ್ತಿಲ್ಲ.

ಕರ್ಕರೆಯವರು ದಿಗ್ವಿಜಯ್‌ಗೆ ದೂರವಾಣಿ ಕರೆ ಮಾಡಿಲ್ಲ, ಈ ಕುರಿತು ತಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಹೇಳಿದ ಮೇಲಂತೂ ತೀವ್ರ ಮುಜುಗರದಲ್ಲಿರುವ ಕಾಂಗ್ರೆಸ್ ನಾಯಕ, ಅದನ್ನು ಮರೆಸುವ ನಿಟ್ಟಿನಲ್ಲಿ ಇನ್ನಿತರ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಸಚಿವ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ನಾನ್ಯಾಕೆ ಸುಳ್ಳು ಹೇಳಲಿ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ