ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಗೆ ಸಹಾಯ; ಡಾ. ಬಿನಾಯಕ್ ಸೇನ್‌ಗೆ ಜೀವಾವಧಿ (Dr Binayak Sen | Naxal | Chhattisgarh | PUCL)
Bookmark and Share Feedback Print
 
ದೇಶದ ವಿರುದ್ಧ ಯುದ್ಧ ಸಾರಿರುವ ನಕ್ಸಲರಿಗೆ ಬೆಂಬಲ ನೀಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್ ಸೇನ್, ನಕ್ಸಲ್ ಸಿದ್ಧಾಂತವಾದಿ ನಾರಾಯಣ ಸನ್ಯಾಲ್, ಕೊಲ್ಕತ್ತಾ ಉದ್ಯಮಿ ಪಿಯುಶ್ ಗುಹಾ ಅವರಿಗೆ ರಾಯ್ಪುರದಲ್ಲಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಭಾರತೀಯ ದಂಡ ಸಂಹಿತೆ 124 (ರಾಜದ್ರೋಹ), 120 ಬಿ (ಷಡ್ಯಂತ್ರ) ಪರಿಚ್ಛೇದಗಳು ಮತ್ತು ಛತ್ತೀಸ್‌ಗಢ ಸಾರ್ವಜನಿಕ ಭದ್ರತೆಯ ವಿಶೇಷ ಕಾಯ್ದೆಯಡಿ ಈ ಮೂವರು ತಪ್ಪಿತಸ್ಥರು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಪಿ. ವರ್ಮಾ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

ಮಕ್ಕಳ ತಜ್ಞರಾಗಿರುವ 58ರ ಹರೆಯದ ಸೇನ್ ಭೂಗತರಾಗಿರುವ ಮಾವೋವಾದಿಗಳಿಗೆ ಸನ್ಯಾಲ್ ಅವರಿಂದ ಪತ್ರಗಳು ಮತ್ತು ಸಂದೇಶಗಳನ್ನು ಹಸ್ತಾಂತರಿಸುತ್ತಿದ್ದರು ಎಂದು ಸರಕಾರಿ ವಕೀಲರು ಆರೋಪಿಸಿದ್ದರು. ಗುಹಾ ಕೂಡ ನಕ್ಸಲರು ತಮ್ಮ ಜಾಲವನ್ನು ವಿಸ್ತರಿಸಲು ಸಹಕಾರ ನೀಡುತ್ತಿದ್ದರು.

ನಗರ ಪ್ರದೇಶಗಳಲ್ಲಿ ನಕ್ಸಲ್ ಜಾಲವನ್ನು ವಿಸ್ತರಿಸಲು ಸೇನ್ ಸಹಕಾರ ನೀಡಿದ್ದರು ಎಂದು ಛತ್ತೀಸ್‌ಗಢ ಪೊಲೀಸರು ವಾದಿಸಿದ್ದರು.

ಪಿಯುಸಿಎಲ್ ಕಾರ್ಯಕರ್ತರಾಗಿರುವ ಬಿನಾಯಕ್ ಅವರನ್ನು 2007ರ ಮೇ 14ರಂದು ಬಿಲಾಸ್ಪುರದಲ್ಲಿ ಬಂಧಿಸಲಾಗಿತ್ತು. ನ್ಯಾಯಾಧೀಶರು ತೀರ್ಪು ನೀಡುವ ಸಂದರ್ಭದಲ್ಲಿ ಸನ್ಯಾಲ್ ಮತ್ತು ಗುಹಾ ಅವರೊಂದಿಗೆ ಸೇನ್ ಕೂಡ ಹಾಜರಿದ್ದರು.

ತೀರ್ಪಿನಿಂದ ತೀವ್ರ ನಿರಾಸೆಗೊಂಡಿರುವ ಸೇನ್, ತನ್ನ ವಕೀಲರ ಮೂಲಕ ಉನ್ನತ ನ್ಯಾಯಾಲಯ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಜಾಮೀನು ಪಡೆದುಕೊಂಡು ಬಿಡುಗಡೆ ಹೊಂದಿದ್ದ ಸೇನ್, ತಾನು ಅಮಾಯಕ ಎಂದು ಹೇಳುತ್ತಾ ಬಂದಿದ್ದಾರೆ. ನಾನು ಯಾವತ್ತೂ ಮಾವೋವಾದಿಗಳ ಹಿಂಸಾಚಾರವನ್ನು ಬೆಂಬಲಿಸಿಲ್ಲ. ಇದು ವ್ಯರ್ಥ ಮತ್ತು ಅಸಮರ್ಥನೀಯ ಚಳವಳಿ ಎಂದು 2007ರಲ್ಲಿ ಬಂಧನಕ್ಕೊಳಗಾದಾಗಲೂ ಅವರು ಹೇಳಿಕೊಂಡಿದ್ದರು.

ಕೋರ್ಟ್ ತೀರ್ಪಿಗೆ ಪಿಯುಸಿಎಲ್ ಕಾರ್ಯಕರ್ತರು ಮತ್ತು ಸೇನ್ ಕುಟುಂಬವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ನನಗೆ ಬೇಸರ ಹುಟ್ಟಿಸಿದೆ ಎಂದು ಅವರ ಪತ್ನಿ ಎಲಿನಾ ಸೇನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ