ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಗಲಭೆ; ಎಲ್ಲಾ ಕೇಸ್ ವಾಪಸ್ ಪಡೆದ ಸರಕಾರ (Telangana cases | Andhra Pradesh | Congress | N Kiran Kumar Reddy)
Bookmark and Share Feedback Print
 
ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರ ಒತ್ತಡಕ್ಕೆ ಮಣಿದಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಸರಕಾರ, ಪ್ರತ್ಯೇಕ ತೆಲಂಗಾಣ ರಾಜ್ಯ ಸೃಷ್ಟಿಗೆ ಆಗ್ರಹಿಸಿ ನಡೆಸಲಾದ ಹಿಂಸಾಪೂರಿತ ಪ್ರತಿಭಟನೆಗಳ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.

ತೆಲಂಗಾಣ ಪ್ರಾಂತ್ಯದ ಸಚಿವರು ಮತ್ತು ಆಡಳಿತ ಪಕ್ಷದ ವಿವಿಧ ನಾಯಕರ ಜತೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಇತ್ಯರ್ಥವಾಗದೆ ಉಳಿದಿರುವ 967 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದರು. ಈ ಹಿಂದೆ ವಾಪಸ್ ಪಡೆದುಕೊಂಡಿದ್ದ ಪ್ರಕರಣಗಳ ಸಾಲಿಗೆ ಈ ಪ್ರಕರಣಗಳೂ ಸೇರಿವೆ.

ತೆಲಂಗಾಣ ಪರ ಮತ್ತು ವಿರೋಧವಾಗಿ 2009ರ ನವೆಂಬರ್ ತಿಂಗಳಿನಿಂದ 2010ರ ಸೆಪ್ಟೆಂಬರ್ ನಡುವೆ ಆಂಧ್ರದ ಮೂರು ಪ್ರಾಂತ್ಯಗಳಲ್ಲಿ (ತೆಲಂಗಾಣ, ಆಂಧ್ರ ಕರಾವಳಿ ಮತ್ತು ರಾಯಲಸೀಮೆ) ನಡೆದಿದ್ದ ಪ್ರತಿಭಟನೆಗಳ ಸಂದರ್ಭಗಳಲ್ಲಿ ಈ ಎಲ್ಲಾ ಪ್ರಕರಣಗಳು ದಾಖಲಾಗಿದ್ದವು.

ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಕುರಿತು ಅಧಿಕೃತ ಪ್ರಕಟಣೆಯನ್ನು ಗೃಹಸಚಿವೆ ಸಬಿತಾ ಇಂದಿರಾ ರೆಡ್ಡಿ ಹೊರಡಿಸಲಿದ್ದಾರೆ. ಕೆಲವು ಸೂಕ್ಷ್ಮ ಪ್ರಕರಣಗಳನ್ನು ಹಿಂಪಡೆಯಲು ಸರಕಾರ ನ್ಯಾಯಾಲಯದ ಮೊರೆ ಹೋಗಲಿದೆ.

ಆರಂಭದಲ್ಲಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದ ಸರಕಾರ, ಪ್ರಮುಖ ಪ್ರಕರಣಗಳ ಹಿಂತೆಗೆತಕ್ಕೆ ನಿರಾಕರಿಸಿತ್ತು. ಇದರಿಂದ ನಿರಾಸೆಗೊಂಡ ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರು ಉಪವಾಸಕ್ಕೆ ಮುಂದಾದರು. ಇದರಿಂದ ಕೇಂದ್ರ ಸರಕಾರಕ್ಕೂ ಬಿಸಿ ಮುಟ್ಟಿತ್ತು.

ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿ ಕಳೆದ ಸೋಮವಾರದಿಂದ ಉಪವಾಸ ಮಾಡುತ್ತಿರುವ ಸಂಸದರನ್ನು ತೆಲಂಗಾಣ ಪ್ರಾಂತ್ಯದ ಸಚಿವರ ನಿಯೋಗವು ಭೇಟಿ ಮಾಡಿ ಮಾಡಲಿದೆ. ಅವರಿಗೆ ಸರಕಾರದ ನಿರ್ಧಾರವನ್ನು ತಿಳಿಸಲಿರುವ ನಿಯೋಗ, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ