ಗುಜ್ಜಾರ್ ಪ್ರತಿಭಟನೆ ನಿಲ್ಲಿಸುವಂತೆ ಸಿಎಂ ಗೆಹ್ಲೋಟ್ ಮನವಿ
ಜೈಪುರ, ಮಂಗಳವಾರ, 28 ಡಿಸೆಂಬರ್ 2010( 19:39 IST )
ಗುಜ್ಜಾರ್ ಸಮುದಾಯದ ಬೇಡಿಕೆಗಳ ವಿವಾದ ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ ಸರ್ಕಾರದ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಮುದಾಯದಲ್ಲಿ ಮನವಿ ಮಾಡಿಕೊಂಡಿರುವ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹೋರಾಟವನ್ನು ಕೈಬಿಡಬೇಕೆಂದು ಎಂದು ಕೇಳಿಕೊಂಡಿದ್ದಾರೆ.
ಮೀಸಲಾತಿ ಪಟ್ಟಿಯಲ್ಲಿ ತಮ್ಮ ಜನಾಂಗವನ್ನು ಸೇರಿಸಲು ಒತ್ತಾಯಿಸಿ ರಾಜಸ್ತಾನದಲ್ಲಿ ಗುಜ್ಜಾರ್ ಸಮುದಾಯ ನಡೆಸುತ್ತಿರುವ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಮನವಿ ಮಾಡಿದ್ದಾರೆ.
ಕಳೆದ ಒಂಬತ್ತು ದಿನಗಳಿಂದ ಸರ್ಕಾರ ಮತ್ತು ಗುಜ್ಜಾರ್ ಸಮುದಾಯದ ನಡುವೆ ಯಾವುದೇ ನಿಲುವುಗಳು ಸ್ಪಷ್ಟವಾಗದೇ ಇರುವುದರಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತ ಬಂದ್-ಹಿಂಸಾಚಾರಗಳು ನಡೆಯುತ್ತಿರುವುದರಿಂದ ವಿವಿಧ ಕೈಗಾರಿಕೆ, ರೈಲು ಸೇವೆ ಹಾಗೂ ರಸ್ತೆ ಸಾರಿಗೆಯಲ್ಲಿ ಅಪಾರ ನಷ್ಟ ಉಂಟಾಗಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಈ ಕುರಿತ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಪಿಲುಕಾಪುರದಲ್ಲಿ ಮಹತ್ವದ ಸಭೆ ನಡೆಯುತ್ತಿದೆ ಎಂದು ಗುಜ್ಜಾರ್ ಸಮುದಾಯದ ಮುಂದಾಳು ಡಾ. ರೂಪಾ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿಯವರು ಗಲಭೆಗೆ ಪ್ರತಿಪಕ್ಷಗಳು ಕಾರಣ ಎಂದು ಆರೋಪಿಸಿದ್ದಾರೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಪುತ್ರನ ಮದುವೆಗೆ ಹೋಗಿದ್ದ ಕೆಲವು ಮಂದಿ ಪ್ರತಿಭಟನೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಗಳು ನಮಗೆ ಬಂದಿವೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಮೀಸಲಾತಿ ಕುರಿತು ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹೊರತಾಗಿಯೂ, ಸರಕಾರಿ ನೇಮಕಾತಿಯನ್ನು ತಡೆ ಹಿಡಿಯುವುದಿಲ್ಲ. ಈಗಾಗಲೇ ಲಕ್ಷಾಂತರ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಒತ್ತಡಗಳಿಗೆ ಮಣಿಯದೆ ರಾಜ್ಯದಲ್ಲಿ 8,000 ಪೊಲೀಸ್ ಕಾನ್ಸ್‌ಸ್ಟೇಬಲ್ ಮತ್ತು ಶಿಕ್ಷಕರ ನೇಮಕಾತಿಯನ್ನು ಮಾಡಲಾಗುತ್ತದೆ ಎಂದರು.