ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವರದಿ ಇಂದೇ ಸಲ್ಲಿಕೆ; ಆಂಧ್ರದಲ್ಲಿ ಭಾರೀ ಭದ್ರತೆ (Telangana report | Srikrishna Committee | Andhra Pradesh | Congress)
Bookmark and Share Feedback Print
 
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಕೇಂದ್ರ ಸರಕಾರ ನೇಮಕ ಮಾಡಿದ್ದ ಶ್ರೀಕೃಷ್ಣ ಸಮಿತಿಯು ತನ್ನ ವರದಿಯನ್ನು ಗುರುವಾರ ಗೃಹಸಚಿವ ಪಿ. ಚಿದಂಬರಂ ಅವರಿಗೆ ಹಸ್ತಾಂತರ ಮಾಡಲಿದೆ ಎಂದು ವರದಿಗಳು ಹೇಳಿದ್ದು, ಸಂಭಾವ್ಯ ಹಿಂಸಾಚಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಂಧ್ರಪ್ರದೇಶದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಐದು ಸದಸ್ಯರ ಸಮಿತಿಗೆ ಒದಗಿಸಲಾಗಿದ್ದ ಕಾಲಾವಕಾಶ ಮುಗಿಯುವ ಮೊದಲು ಇಂದು ಎಲ್ಲಾ ಸದಸ್ಯರು ಸಹಿ ಮಾಡಿದ ವರದಿಯನ್ನು ಚಿದಂಬರಂ ಅವರಿಗೆ ಹಸ್ತಾಂತರಿಸಲಾಗುತ್ತದೆ. ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳನ್ನು ಕೇಂದ್ರ ಸರಕಾರ ಪರಿಗಣಿಸಲಿದೆ ಎಂದು ಹೇಳಲಾಗಿದೆ.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಒಂದು ಕಡೆ, ಅಖಂಡ ಆಂಧ್ರಪ್ರದೇಶವೇ ಬೇಕು ಎನ್ನುವುದು ಇನ್ನೊಂದು ಕಡೆ -- ಇವೆರಡನ್ನೂ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರ ಸಮಿತಿಗೆ ಸೂಚಿಸಿತ್ತು. ಎರಡೂ ವಿಚಾರಗಳಲ್ಲಿ ರಾಜ್ಯದ ಜನತೆಯ ಭಾವನೆಗಳಿಗೆ ಬೆಲೆ ಕೊಡಬೇಕಾಗಿರುವುದರಿಂದ ಇದನ್ನು ಸೂಕ್ಷ್ಮ ವಿಚಾರ ಎಂದು ಪರಿಗಣಿಸಲಾಗಿತ್ತು.

ಆಂಧ್ರಪ್ರದೇಶದ ಎಲ್ಲಾ 23 ಜಿಲ್ಲೆಗಳಿಗೆ ಭೇಟಿ ನೀಡಿದ್ದ ಶ್ರೀಕೃಷ್ಣ ಸಮಿತಿಯು ಸುಮಾರು 800 ಪುಟಗಳ ಸುದೀರ್ಘ ವರದಿಯನ್ನು ಸಿದ್ಧಪಡಿಸಿದೆ. ಇದರಿಂದ ರಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುವುದು ಸಮಿತಿಯ ಅಭಿಪ್ರಾಯ.

ಮೂಲಗಳ ಪ್ರಕಾರ ಸಮಿತಿಯು ಇಲ್ಲಿ ಪ್ರತ್ಯೇಕ ರಾಜ್ಯ ರಚನೆಯ ಪರ ಅಥವಾ ವಿರೋಧ ಯಾವುದೇ ಶಿಫಾರಸುಗಳನ್ನು ಮಾಡಿಲ್ಲ. ಬದಲಿಗೆ ಇತರೆ ಪರಿಹಾರಗಳನ್ನು ಜಾರಿಗೆ ತರುವ ಅವಕಾಶಗಳ ಕುರಿತು ಕೇಂದ್ರಕ್ಕೆ ಸಲಹೆ ನೀಡಲಾಗಿದೆ.

ಆದರೂ ತೆಲಂಗಾಣ ಪರ ಮತ್ತು ವಿರೋಧಿ ಗುಂಪುಗಳು ಈಗಾಗಲೇ ತೀವ್ರ ಹಿಂಸಾಚಾರದ ಬೆದರಿಕೆ ಹಾಕಿರುವುದರಿಂದ ಸರಕಾರ ಭಾರೀ ಮುನ್ನೆಚ್ಚೆರಿಕೆಯಲ್ಲಿದೆ. ಸಾಕಷ್ಟು ಭದ್ರತೆಯನ್ನು ರಾಜ್ಯದ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ತೆಲಂಗಾಣ ಗಲಭೆಯ ಹೊತ್ತಿನಲ್ಲಿ 900ಕ್ಕೂ ಹೆಚ್ಚು ಬಸ್ಸುಗಳು ಜಖಂಗೊಂಡಿದ್ದ ಉದಾಹರಣೆ ಕಣ್ಣ ಮುಂದಿದೆ. ಇದರಿಂದ ಆಂಧ್ರ ಸಾರಿಗೆಗೆ 188 ಕೋಟಿ ರೂಪಾಯಿ ನಷ್ಟವಾಗಿತ್ತು. ಹಾಗಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗಲಾಟೆಯಂತಹ ಪರಿಸ್ಥಿತಿ ಉದ್ಭವಿಸಿದರೆ ತಕ್ಷಣವೇ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಇಲ್ಲವೇ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿದ ವಿಶೇಷ ಬಸ್‌ಗಳನ್ನು ಬಿಡಲಾಗುತ್ತದೆ ಸಾರಿಗೆ ಸಂಸ್ಥೆ ಹೇಳಿಕೊಂಡಿದೆ.

ಪ್ರತಿಯೊಬ್ಬರ ಕಣ್ಣು ನೆಟ್ಟಿರುವುದೀಗ ಒಸ್ಮಾನಿಯಾ ಯುನಿವರ್ಸಿಟಿಯಲ್ಲಿ. ತೆಲಂಗಾಣ ಗಲಭೆ ಅತಿ ಹೆಚ್ಚು ನಡೆದದ್ದು ಮತ್ತು ಅತಿ ಹೆಚ್ಚು ಮಂದಿ ಪ್ರಾಣ ತೆತ್ತದ್ದು ಈ ವಿಶ್ವವಿದ್ಯಾಲಯದ ಸುತ್ತಮುತ್ತ. ಇಲ್ಲಿ ಅರೆಸೇನಾಪಡೆ ಸೇರಿದಂತೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಯಾವುದೇ ಅಪಾಯಕಾರಿ ಸನ್ನಿವೇಶವನ್ನು ತಡೆಯಲು ಪಡೆಗಳು ಸನ್ನಧವಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ