ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೃಷ್ಣಾ ನದಿ ನ್ಯಾಯಾಧಿಕರಣ ತೀರ್ಪು; ಕರ್ನಾಟಕಕ್ಕೆ ಜಯ (Krishna water verdict | water dispute | Karnataka | Andhra Pradesh)
Bookmark and Share Feedback Print
 
ಬಹುನಿರೀಕ್ಷಿತ ಕೃಷ್ಣಾ ನದಿ ನ್ಯಾಯಾಧಿಕರಣದ ಅಂತಿಮ ತೀರ್ಪು ಪ್ರಕಟವಾಗಿದ್ದು, ಕರ್ನಾಟಕ ಬಹುತೇಕ ಎಲ್ಲಾ ಬೇಡಿಕೆಗಳಿಗೂ ಅಸ್ತು ಎನ್ನಲಾಗಿದೆ. ಆ ಮೂಲಕ ರಾಜ್ಯವು 'ಕೃಷ್ಣ ಕೃಪೆ'ಗೊಳಗಾಗಿದ್ದರೆ, ಸದಾ ತಗಾದೆ ತೆಗೆಯುತ್ತಿರುವ ಆಂಧ್ರಪ್ರದೇಶ ತೀವ್ರ ಮುಖಭಂಗಕ್ಕೀಡಾಗಿದೆ. ಈ ನಡುವೆ ಕರ್ನಾಟಕಕ್ಕೆ ಒಂದು ಭಾಗದಿಂದ ನಷ್ಟವೂ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕರ್ನಾಟಕದ ಪ್ರಮುಖ ಬೇಡಿಕೆಯಾಗಿದ್ದ ಆಲಮಟ್ಟಿ ಡ್ಯಾಮ್‌ನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ನ್ಯಾಯಾಧಿಕರಣವು ಅಸ್ತು ಎಂದಿದೆ. ಒಟ್ಟಾರೆ ಕರ್ನಾಟಕಕ್ಕೆ 911 ಟಿಎಂಸಿ ನೀರು ದೊರೆತಿದೆ. ಆದರೆ ಬಿ ಸ್ಕೀಮಿನಲ್ಲಿ ಕರ್ನಾಟಕವು ಕೇಳಿದಷ್ಟು ನೀರನ್ನು ಕೊಡಲು ನ್ಯಾಯಾಧಿಕರಣವು ಒಪ್ಪಿಲ್ಲ. ಇಲ್ಲಿ ಜಯ ಸಿಕ್ಕಿರುವುದು ಆಂಧ್ರಪ್ರದೇಶಕ್ಕೆ.

ತೀರ್ಪಿನ ಮುಖ್ಯಾಂಶಗಳು:
** ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ಅವಕಾಶ.
** ಕರ್ನಾಟಕಕ್ಕೆ 911 ಟಿಎಂಸಿ, ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಹಂಚಿಕೆ.
** ಕರ್ನಾಟಕಕ್ಕೆ ಎ ಸ್ಕೀಮಿನಲ್ಲಿ 734 , ಬಿ ಸ್ಕೀಮಿನಲ್ಲಿ 177 ಟಿಎಂಸಿ ನೀರು.
** ಮಹಾರಾಷ್ಟ್ರಕ್ಕೆ ಬಿ. ಸ್ಕೀಮಿನಲ್ಲಿ 81 ಟಿಎಂಸಿ ನೀರು.
** ಆಂಧ್ರಕ್ಕೆ ಬಿ ಸ್ಕೀಮಿನಲ್ಲಿ 190 ಟಿಎಂಸಿ ನೀರು.
** ಕರ್ನಾಟಕ ಹೆಚ್ಚುವರಿಯಾಗಿ 170 ಟಿಎಂಸಿ ನೀರು ಸಂಗ್ರಹಿಸಬಹುದು.
** ಪ್ರತಿ ವರ್ಷ ರಾಜ್ಯದಿಂದ ಆಂಧ್ರಕ್ಕೆ 8-10 ಟಿಎಂಸಿ ಹರಿಸಬೇಕು.
** ಕೃಷ್ಣಾ ಮೇಲ್ದಂಡೆ ಯೋಜನೆಗೆ 303 ಟಿಎಸಿ ನೀರು ಬಳಸಲು ಸಮ್ಮತಿ.
** ಈ ತೀರ್ಪು 2050ರವರೆಗೆ ಅನ್ವಯವಾಗುತ್ತದೆ.

ಹೊಸ ವರ್ಷದ ಕೊಡುಗೆ...
ಮೇಲ್ನೋಟಕ್ಕೆ ಕರ್ನಾಟಕದ ವಾದಕ್ಕೆ ಕೃಷ್ಣ ನದಿ ನ್ಯಾಯಾಧಿಕರಣವು ಮನ್ನಣೆ ನೀಡಿದೆ. ನೀರಿನ ಹಂಚಿಕೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಆದರೆ ಒಳನೋಟ ಹರಿಸಿದಾಗ ಇದೇ ಅನುಭವ ಆಗುವ ಸಾಧ್ಯತೆ ಕಡಿಮೆ.

ಒಟ್ಟಾರೆ ಉತ್ತರ ಕರ್ನಾಟಕದ ಜನತೆಯ ಹೋರಾಟಕ್ಕೆ ಸಿಕ್ಕಿರುವ ಜಯ ಮತ್ತು ಇದು ಹೊಸ ವರ್ಷದ ಕೊಡುಗೆ ಎಂದೇ ಪರಿಗಣಿಸಲಾಗಿದೆ. ಉತ್ತರ ಕರ್ನಾಟಕದ ಜನತೆಯ ಕನಸು ನನಸು ಮಾಡಿರುವ ಐತಿಹಾಸಿಕ ತೀರ್ಪು ಎಂದು ಪ್ರಶಂಸಿಸಲಾಗಿದೆ.

ಅಣೆಕಟ್ಟೆ ಎತ್ತರಕ್ಕೆ ಅವಕಾಶ...
ಆಲಮಟ್ಟಿ ಆಣೆಕಟ್ಟು ಈಗ ಇರುವ ಎತ್ತರ 519.6 ಮೀಟರ್. ಅದನ್ನು 524.26 ಮೀಟರುಗಳಿಗೆ ಏರಿಸಬಹುದು ಎಂಬ ತೀರ್ಪು ಬಂದಿರುವುದು ಕರ್ನಾಟಕದ ಪಾಲಿಗೆ ಮಹತ್ವದ್ದು.

ಆಣೆಕಟ್ಟನ್ನು ಇಷ್ಟು ಎತ್ತರಕ್ಕೆ ಏರಿಕೆ ಮಾಡಲು ನ್ಯಾಯಾಧಿಕರಣ ಒಪ್ಪಿಗೆ ಸೂಚಿಸಿರುವುದು ಹೌದಾದರೂ, ಅದನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಆಣೆಕಟನ್ನು ಏರಿಕೆ ಮಾಡುವುದರಿಂದ ಸಾವಿರಾರು ಎಕರೆ ಭೂಮಿ ಮತ್ತೆ ನೀರಿನಲ್ಲಿ ಮುಳುಗಬೇಕಾಗುತ್ತದೆ. ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ರಾಜ್ಯವು ಮತ್ತೆ ಎದುರಿಸಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕರ್ನಾಟಕಕ್ಕೆ 50 ಟಿಎಂಸಿ ನಷ್ಟ...
ಕೃಷ್ಣಾ ನದಿ ನ್ಯಾಯಾಧಿಕರಣ ನೀಡಿರುವ ತೀರ್ಪು ತೀರಾ ಕೆಟ್ಟದಲ್ಲ, ಕರ್ನಾಟಕಕ್ಕೆ ಲಾಭವಾಗಿದೆ. ಲಾಭವಾಗಿರುವುದು ಆಲಮಟ್ಟಿ ಆಣೆಕಟ್ಟನ್ನು 524.26 ಮೀಟರುಗಳಿಗೆ ಎತ್ತರಿಸಬಹುದು ಎನ್ನುವುದು. ಆದರೆ ಅತ್ತ ಬಿ ಸ್ಕೀಮಿನಲ್ಲಿ ಕರ್ನಾಟಕ 50 ಟಿಎಂಸಿ ನೀರನ್ನು ಕಳೆದುಕೊಂಡಿದೆ.

ಶೇ.50ರಷ್ಟು ನೀರು ಕರ್ನಾಟಕಕ್ಕೆ ಸಿಗಬೇಕೆಂದು ಬೇಡಿಕೆಯಾಗಿತ್ತು. ಶೇ.25ರಂತೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ನೀಡಿದರೆ ಸಾಕು ಎನ್ನುವುದು ಕರ್ನಾಟಕದ ವಾದವಾಗಿತ್ತು. ಆದರೆ ಇಲ್ಲಿ ಕರ್ನಾಟಕಕ್ಕೆ ಸಿಕ್ಕಿರುವುದು ನಿರೀಕ್ಷೆಗಿಂತ ತುಂಬಾ ಕಡಿಮೆ. ಕರ್ನಾಟಕವು ಬಿ ಸ್ಕೀಮಿನಲ್ಲಿ 270 ಟಿಎಂಸಿ ನೀರನ್ನು ಕೇಳಿತ್ತು.

ಬಿ ಸ್ಕೀಮಿನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವುದು ಕೇವಲ 177 ಟಿಎಂಸಿ ನೀರು ಮಾತ್ರ. ಆದರೆ ಅತ್ತ ಆಂಧ್ರಪ್ರದೇಶಕ್ಕೆ 190 ಟಿಎಂಸಿ ನೀರನ್ನು ನ್ಯಾಯಾಧಿಕರಣ ಒದಗಿಸಿದೆ. ಮಹಾರಾಷ್ಟ್ರಕ್ಕೆ ಈ ವಿಭಾಗದಲ್ಲಿ ನೀಡಿರುವುದು 81 ಟಿಎಂಸಿ ನೀರು.

2050ರವರೆಗೆ ತೀರ್ಪು ಅನ್ವಯ...
ಕೃಷ್ಣ ನದಿ ನ್ಯಾಯಾಧಿಕರಣ ತೀರ್ಪು ನೀಡಿರುವುದು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್. ಈ ತೀರ್ಪು 2050ರವರೆಗೆ ಅನ್ವಯವಾಗುತ್ತದೆ ಎಂದು ಹೇಳಿರುವ ನ್ಯಾಯಮೂರ್ತಿಗಳು, ನಂತರ ಅಗತ್ಯ ಬಿದ್ದರೆ ಪರಿಷ್ಕರಣೆ ನಡೆಸಬಹುದಾಗಿದೆ ಎಂದಿದ್ದಾರೆ.

ನ್ಯಾಯಾಧಿಕರಣದಲ್ಲಿ ವಕೀಲ ಮೋಹನ್ ಕಾತರಕಿಯವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮಿಶ್ರಾ ನೇತೃತ್ವದ ನ್ಯಾಯಾಧಿಕರಣದಲ್ಲಿರುವ ಇತರ ನ್ಯಾಯಮೂರ್ತಿಗಳೆಂದರೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಶೇಟ್, ಎಸ್.ಪಿ. ಶ್ರೀವಾತ್ಸವ. 2004ರ ಏಪ್ರಿಲ್ 2ರಿಂದ ನ್ಯಾಯಾಧಿಕರಣ ಮಂಡಳಿಯು ಚಾಲನೆ ಪಡೆದುಕೊಂಡಿತ್ತು.

ತೀರ್ಪಿಗೆ ಸಮಾಧಾನ...
ನ್ಯಾಯಾಧಿಕರಣದ ತೀರ್ಪಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಸುರೇಶ್ ಕುಮಾರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಒಂಚೂರು ಹುಳಿ, ಒಂಚೂರು ಖಾರ ಎಂಬಂತೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತೀರ್ಪು ಸ್ವೀಕಾರಾರ್ಹ. ನಾವು ಕಳೆದುಕೊಂಡಿರುವುದು ಹೌದು, ಆದರೆ ನಮ್ಮ ಕೆಲವು ಬೇಡಿಕೆಗಳಿಗೆ ನ್ಯಾಯಾಧಿಕರಣ ಮನ್ನಣೆ ನೀಡಿರುವುದು ಕೂಡ ಹೌದು. ಒಟ್ಟಾರೆ ಇದು ಸಮಾಧಾನಕರ, ಸಂತೋಷಪಡಬಹುದು ಎಂದು ಹೇಳಿದ್ದಾರೆ.


ಸಂಬಂಧಿತ ಮಾಹಿತಿ ಹುಡುಕಿ