ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವರದಿ ಕೇಂದ್ರಕ್ಕೆ ಸಲ್ಲಿಕೆ; ಜ.6ರಂದು ಬಹಿರಂಗ (Srikrishna Committee | Telangana | P Chidambaram | Andhra Pradesh)
Bookmark and Share Feedback Print
 
ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತ ವರದಿಯನ್ನು ಶ್ರೀಕೃಷ್ಣ ಸಮಿತಿಯು ಇಂದು ಅಪರಾಹ್ನ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರಿಗೆ ಸಲ್ಲಿಸಿದೆ. ಆದರೆ ಇದನ್ನು ಜನವರಿ 6ರ ಮೊದಲು ಬಹಿರಂಗಪಡಿಸಲಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಶ್ರೀಕೃಷ್ಣ ಅವರ ನೇತೃತ್ವದ ಐದು ಸದಸ್ಯರ ಸಮಿತಿಯು ಸಭೆಯೊಂದನ್ನು ನಡೆಸಿದ ನಂತರ ದೆಹಲಿಯಲ್ಲಿನ ನಾರ್ತ್ ಬ್ಲಾಕ್ ಕಚೇರಿಗೆ ತೆರಳಿ ಗೃಹಸಚಿವರನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸಿತು.

ವರದಿಯನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಗೃಹಸಚಿವರು ಮನವಿ ಮಾಡಿಕೊಂಡಿದ್ದಾರೆ. ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದೆ.

2011ರ ಜನವರಿ 6ರಂದು ಆಂಧ್ರಪ್ರದೇಶದ ಎಂಟು ಪ್ರಮುಖ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಿದ ನಂತರ ಸಮಿತಿ ನೀಡಿರುವ ವರದಿಯನ್ನು ಬಹಿರಂಗಪಡಿಸಲಾಗುತ್ತದೆ. ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆದುಕೊಂಡ ನಂತರ ಮುಂದಿನ ನಿರ್ಧಾರಗಳಿಗೆ ಬರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮತ್ತು ಆಂಧ್ರಪ್ರದೇಶದಲ್ಲಿನ ಭದ್ರತೆ ಕುರಿತು ನಿನ್ನೆಯಷ್ಟೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೇಂದ್ರ ಸಂಪುಟದ ತುರ್ತು ಸಭೆ ನಡೆಸಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದರು.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಒಂದು ಕಡೆ, ಅಖಂಡ ಆಂಧ್ರಪ್ರದೇಶವೇ ಬೇಕು ಎನ್ನುವುದು ಇನ್ನೊಂದು ಕಡೆ -- ಇವೆರಡನ್ನೂ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರ ಸಮಿತಿಗೆ ಸೂಚಿಸಿತ್ತು. ಎರಡೂ ವಿಚಾರಗಳಲ್ಲಿ ರಾಜ್ಯದ ಜನತೆಯ ಭಾವನೆಗಳಿಗೆ ಬೆಲೆ ಕೊಡಬೇಕಾಗಿರುವುದರಿಂದ ಇದನ್ನು ಸೂಕ್ಷ್ಮ ವಿಚಾರ ಎಂದು ಪರಿಗಣಿಸಲಾಗಿತ್ತು.

ಆಂಧ್ರಪ್ರದೇಶದ ಎಲ್ಲಾ 23 ಜಿಲ್ಲೆಗಳಿಗೆ ಭೇಟಿ ನೀಡಿದ್ದ ಶ್ರೀಕೃಷ್ಣ ಸಮಿತಿಯು ಸುಮಾರು 800 ಪುಟಗಳ ಸುದೀರ್ಘ ವರದಿಯನ್ನು ಸಿದ್ಧಪಡಿಸಿದ್ದು, ಇದರಿಂದ ರಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುವುದು ಸಮಿತಿಯ ಅಭಿಪ್ರಾಯ.
ಸಂಬಂಧಿತ ಮಾಹಿತಿ ಹುಡುಕಿ