ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿ ಹಂತಕ ಗೋಡ್ಸೆ ನಮ್ಮ ಕಾರ್ಯಕರ್ತನಲ್ಲ: ಆರೆಸ್ಸೆಸ್ (RSS | Congress | Mahatma Gandhi | Nathuram Godse)
Bookmark and Share Feedback Print
 
PR
ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾದ ಸದಸ್ಯ ಎಂದು ಕಾಂಗ್ರೆಸ್ ತನ್ನ ಪುಸ್ತಕದಲ್ಲಿ ಬರೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್, ಗೋಡ್ಸೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ 125 ವರ್ಷ ತುಂಬಿದ ನೆನಪಿನಲ್ಲಿ ನಡೆಸಲಾದ ಸಮಾವೇಶದ ಸಂದರ್ಭದಲ್ಲಿ ಹಿರಿಯ ನಾಯಕ ಪ್ರಣಬ್ ಮುಖರ್ಜಿಯವರ ಸಂಪಾದಕತ್ವದಲ್ಲಿ ಹೊರತಂದ ಪುಸ್ತಕದಲ್ಲಿ ಇಂತಹ ಆರೋಪ ಮಾಡಲಾಗಿತ್ತು.

ಗಾಂಧಿಯನ್ನು ಗುಂಡಿಕ್ಕಿ ಕೊಂದದ್ದು ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಸದಸ್ಯ ನಾಥೂರಾಮ್ ಗೋಡ್ಸೆ ಎಂದು ಜವಾಹರಲಾಲ್ ನೆಹರು ಯುಗದ ವಿಭಾಗದಲ್ಲಿ ಬೆಟ್ಟು ಮಾಡಿ ತೋರಿಸಲಾಗಿದೆ.

ಪುಸ್ತಕದಲ್ಲಿ ಗಾಂಧಿ ಹತ್ಯೆ ಕುರಿತು ಬರೆಯಲಾಗಿರುವ ಕೆಲವು ಅಂಶಗಳು ಹೀಗಿವೆ.

'ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದ ನಂತರ ಹಿಂದೂ ಕೋಮುವಾದಿ ಶಕ್ತಿಗಳು ತಮ್ಮ ನಿಲುವಿನಲ್ಲಿ ಕಠೋರತನವನ್ನು ಅಳವಡಿಸಿಕೊಂಡವು. ಆಗಸ್ಟ್ 15ನ್ನು ಈ ಕೋಮುವಾದಿ ಶಕ್ತಿಗಳು ಸಂತಾಪದ ದಿನ ಎಂದು ಘೋಷಿಸಿದವು. ಸರಕಾರವು ಮುಸ್ಲಿಮರನ್ನು ಓಲೈಸುವ ನೀತಿಗಳನ್ನು ಹೊಂದಿವೆ ಎಂದು ಆರೋಪಿಸಿ ಟೀಕಿಸಲಾರಂಭಿಸಿದವು'.

'ಗಾಂಧೀಜಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ನಿಂದಿಸುವುದು ಸಾಮಾನ್ಯ ವಿಚಾರವಾಗಿ ಹೋಯಿತು. ಹಿಂದೂ ಮಹಾಸಭಾ ಸಭೆಗಳಲ್ಲಿ 'ಗಾಂಧಿ ಮುರ್ದಾಬಾದ್' ಎಂಬ ಘೋಷಣೆಗಳು ಕೇಳಿ ಬರುತ್ತಿದ್ದವು'.

'ಕಾಶ್ಮೀರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ತನ್ನ ಹಗೆತನವನ್ನು ಮುಂದುವರಿಸಿದ ಹೊರತಾಗಿಯೂ, ಅದರ (ಪಾಕಿಸ್ತಾನ) ಸ್ಥಿರಾಸ್ತಿ ಪಾಲೆಂದು 55 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಗಾಂಧೀಜಿ ಒತ್ತಿ ಹೇಳಿದಾಗ ಹಿಂದೂ ಕೋಮುವಾದಿಗಳು ಗಾಂಧಿ ಮೇಲಿನ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿದರು'.

'ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿ 1948ರ ಜನವರಿಯಲ್ಲಿ ಗಾಂಧಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸಿದ್ದರು. ಶಾಂತಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಸರಕಾರ ಭರವಸೆ ನೀಡಿದ್ದರಿಂದ ಅದರಿಂದ ಅವರು ಹಿಂದಕ್ಕೆ ಸರಿದಿದ್ದರು'.

'ಕೆಲವೇ ದಿನಗಳ ನಂತರ, 1948ರ ಜನವರಿ 30ರಂದು ಎಂದಿನಂತೆ ತನ್ನ ದೈನಂದಿನ ಪ್ರಾರ್ಥನಾ ಸಭೆಗಾಗಿ ಬರುತ್ತಿದ್ದ ಹೊತ್ತಿನಲ್ಲಿ ಗಾಂಧಿಯವರನ್ನು ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಸದಸ್ಯ ಹಾಗೂ ವಿ.ಡಿ. ಸಾವರ್ಕರ್ ಆಪ್ತ ಸಹಚರ ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದು ಹಾಕಿದ'.
Godse
PR

ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ...
ಮುಖರ್ಜಿಯವರ ಸಂಪಾದಕತ್ವದ ಪುಸ್ತಕದಲ್ಲಿ ಕಾಂಗ್ರೆಸ್ ಕೆಲವು ಆತ್ಮಾವಲೋಕನದಲ್ಲಿ ತೊಡಗಿದೆ. ಮಹಾತ್ಮಾ ಗಾಂಧಿಯವರ ಹತ್ಯೆಯ ಕುರಿತು ಕೂಡ ವಾಸ್ತವಕ್ಕೆ ಸಂಬಂಧವಿರುವ ಆತ್ಮಾವಲೋಕ ಮಾಡಲಿ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ನ ಇಂತಹ ತೆವಲು ಹೊಸತಲ್ಲ, ಹಿಂದಿನಿಂದಲೇ ನಡೆದುಕೊಂಡು ಬಂದಿರುವಂತದ್ದು. ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಆ ವಿಚಾರವನ್ನು ಅವರು ಅವಿಸ್ಮರಣೀಯಗೊಳಿಸಲು ಯತ್ನಿಸುತ್ತಾ ಬಂದವರು ಎಂದು ಅವರು ಟೀಕಿಸಿದರು.

ಗೋಡ್ಸೆ 1930ರ ಮಧ್ಯಭಾಗದಲ್ಲಿ ಆರೆಸ್ಸೆಸ್ ತೊರೆದಿದ್ದರು. ಗೋಡ್ಸೆ ಆರೆಸ್ಸೆಸ್ ಕಾರ್ಯಕರ್ತ ಎಂದು ಹೇಳುವುದು ಕೇವಲ ರಾಜಕೀಯ ಉದ್ದೇಶಗಳಿಗಾಗಿಯೇ ಹೊರತು ಇನ್ನೇನಕ್ಕಲ್ಲ. ಆ ಮೂಲಕ ಸಂಘಟನೆಯ ಮೇಲೆ ಆಪಾದನೆ ಹೊರಿಸಿ, ಸಮಾಜದ ದೃಷ್ಟಿಯಲ್ಲಿ ಕೆಟ್ಟದೆಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಮಾಧವ್ ಆರೋಪಿಸಿದರು.

ಕಾಂಗ್ರೆಸ್ ಮಾಡಿರುವ ಆರೋಪಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಯೋಚನೆ ಮಾಡುತ್ತೇವೆ. ಅದಕ್ಕೂ ಮೊದಲು ನಮಗೆ ಆ ಪುಸ್ತಕವನ್ನು ನೋಡಬೇಕಿದೆ. ನಂತರ ನಿರ್ಧರಿಸುತ್ತೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ