ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರುಷಿ ಪ್ರಕರಣ ಮುಗಿಸಲು ಆತುರ ಯಾಕೆ?; ಸಿಬಿಐಗೆ ಕೋರ್ಟ್ (CBI | Aarushi Talwar | Hemraj | Rajesh Talwar)
Bookmark and Share Feedback Print
 
ಆರುಷಿ ತಲ್ವಾರ್ ಹತ್ಯಾ ಪ್ರಕರಣದ ತನಿಖೆಯನ್ನು ಮುಗಿಸುವ ವರದಿ ಸಲ್ಲಿಸಲು ಆತುರ ಯಾಕೆ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಕೇಂದ್ರೀಯ ತನಿಖಾ ದಳವನ್ನು ಪ್ರಶ್ನಿಸಿದೆ. ಆದರೂ ಸಿಬಿಐ ಸಲ್ಲಿಸಿರುವ ಅಂತಿಮ ವರದಿಯನ್ನು ದಾಖಲು ಮಾಡಿಕೊಂಡಿದೆ.

ಪ್ರಕರಣದ ತನಿಖೆಯನ್ನು ಇಲ್ಲಿಗೆ ಮುಗಿಸುವ ವರದಿ ಸಲ್ಲಿಸಲು ಸಿಬಿಐಗೆ ಆತುರ ಯಾಕೆ? ಮುಕ್ತಾಯ ವರದಿಗೆ ಸಂಬಂಧಪಟ್ಟ ದಾಖಲೆಗಳು ಎಲ್ಲಿ ಎಂದು ಸೋಮವಾರ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಬಿಐ ವಕೀಲ ಎ.ಕೆ. ಸೈನಿ ಅವರನ್ನು ಕೋರ್ಟ್ ಪ್ರಶ್ನಿಸಿತು.

ಪ್ರಕರಣ ತನಿಖೆಯನ್ನು ಮುಕ್ತಾಯಗೊಳಿಸುವ ಕುರಿತು ನಿರ್ಧಾರ ತೆಗೆದುಕೊಂಡ ಬಳಿಕ ದಾಖಲೆಗಳನ್ನು ಸಲ್ಲಿಸಲಾಗುತ್ತದೆ ಎಂದು ಇದಕ್ಕೆ ಸೈನಿ ಉತ್ತರಿಸಿದರು.

ಆರುಷಿ ಪ್ರಕರಣ ಮುಕ್ತಾಯ ವರದಿಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಸಂಬಂಧದ ದಾಖಲೆಗಳನ್ನು ತನಿಖಾಧಿಕಾರಿ ಸಲ್ಲಿಸಲು ನ್ಯಾಯಾಲಯವು ಕಾಲದ ಮಿತಿಯನ್ನು ಪ್ರಕಟಿಸಲಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶೆ ಪ್ರೀತಿ ಸಿಂಗ್ ಆದೇಶಿಸಿದರು.

2008ರ ಮೇ ತಿಂಗಳಲ್ಲಿ ಕೊಲೆಯಾಗಿದ್ದ 14ರ ಹರೆಯದ ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್ ಹತ್ಯಾ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಆರೋಪಗಳ ಮತ್ತು ಆರೋಪಿಗಳ ಕುರಿತು ಪುರಾವೆಗಳು ಇರದೇ ಇರುವುದರಿಂದ ಪ್ರಕರಣದ ತನಿಖೆಯನ್ನು ನಿಲ್ಲಿಸಲು ಸಿಬಿಐ ನಿರ್ಧರಿಸಿದೆ ಎಂದು ಡಿಸೆಂಬರ್ 29ರಂದು ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.

ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಎಂಬ ದಂತವೈದ್ಯ ದಂಪತಿಯ ಪುತ್ರಿ 14ರ ಹರೆಯದ ಆರುಷಿ ತಲ್ವಾರ್ 2008ರ ಮೇ 16ರಂದು ದೆಹಲಿ ಸಮೀಪದ ನೋಯ್ಡಾದಲ್ಲಿನ ಜಲವಾಯು ವಿಹಾರದ ಅವರ ನಿವಾಸದಲ್ಲಿ ಕೊಲೆಯಾಗಿದ್ದಳು. ಕತ್ತು ಸೀಳಿ ಆರುಷಿಯನ್ನು ಹತ್ಯೆ ಮಾಡಲಾಗಿತ್ತು. ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ, ಪ್ರಕರಣ ಪ್ರಮುಖ ಆರೋಪಿ ಎಂದು ಶಂಕಿಸಲಾಗಿದ್ದ 45ರ ಹರೆಯದ ಯಾಮ್ ಪ್ರಸಾದ್ ಬಂಜಾಡೆ ಆಲಿಯಾಸ್ ಹೇಮರಾಜ್ ಶವ ಮರುದಿನ ಅದೇ ಮನೆಯ ಮಹಡಿಯಲ್ಲಿ ಪತ್ತೆಯಾಗಿತ್ತು.

ಕೊಲೆ ನಿಗೂಢತೆಗಳನ್ನು ಭೇದಿಸಲು ವಿಫಲರಾಗಿದ್ದ ಉತ್ತರ ಪ್ರದೇಶ ಪೊಲೀಸರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ನಂತರ, 2008ರ ಜೂನ್ 1ರಂದು ಆರುಷಿ ತಂದೆ ರಾಜೇಶ್ ತಲ್ವಾರ್ ಅವರನ್ನು ಬಂಧಿಸಲಾಯಿತು. ನಂತರದ ದಿನಗಳಲ್ಲಿ ತಲ್ವಾರ್ ಜತೆ ಸಹಾಯಕರಾಗಿ ಕೆಲಸ ಮಾಡಿದ್ದ ಹಲವು ಮಂದಿಯನ್ನು ಬಂಧಿಸಿ, ತನಿಖೆ ನಡೆಸಿತ್ತು.

ಸುಮಾರು 18 ತಿಂಗಳುಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ ಸಿಬಿಐ ಈಗ ಕೈತೊಳೆದುಕೊಂಡಿದೆ. ತನಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಆರುಷಿ ಹೆತ್ತವರತ್ತಲೇ ಆರೋಪಗಳನ್ನು ಮಾಡುತ್ತಿದೆ. ಅವರೇ ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶ ಪಡಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.

ಮರುತನಿಖೆ ತಲ್ವಾರ್ ಅರ್ಜಿ ವಜಾ..
ಪ್ರಕರಣದ ತನಿಖೆಯನ್ನು ಮುಗಿಸುವ ಸಿಬಿಐ ಅಂತಿಮ ವರದಿಯ ವಿರುದ್ಧ ಅರ್ಜಿ ಸಲ್ಲಿಸಿರುವ ಆರುಷಿ ತಂದೆ, ಶಂಕಿತ ಆರೋಪಿ ರಾಜೇಶ್ ತಲ್ವಾರ್ ಅರ್ಜಿಯನ್ನು ಸಿಬಿಐ ನ್ಯಾಯಾಲಯವು ತಿರಸ್ಕರಿಸಿದೆ.

ತನ್ನ ಮಗಳ ಹತ್ಯೆ ಕ್ರೂರಾತಿಕ್ರೂರ ಎಂದು ಬಣ್ಣಿಸಿರುವ ರಾಜೇಶ್ ತಲ್ವಾರ್, ನ್ಯಾಯದ ದೃಷ್ಟಿಯಿಂದ ಈ ಪ್ರಕರಣದ ತನಿಖೆ ಇಲ್ಲಿಗೆ ಮುಗಿಯಬಾರದು. ಮರು ತನಿಖೆಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.

ತಲ್ವಾರ್ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್, ತನಿಖೆ ಮುಕ್ತಾಯದ ವರದಿ ವಿರುದ್ಧ ಅರ್ಜಿ ಸಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ