ಹೀಗೆಂದು ಬಾಂಬ್ ಹಾಕಿರುವುದು ಹುರಿಯತ್ ಕಾನ್ಫರೆನ್ಸ್ ನಾಯಕ. ಇಬ್ಬರು ಪ್ರತ್ಯೇಕತಾವಾದಿ ನಾಯಕರು ಮತ್ತು ನನ್ನ ಸ್ವಂತ ಸಹೋದರನನ್ನು ಕೊಂದದ್ದು ಭಾರತದ ಮಿಲಿಟರಿ ಅಲ್ಲ, ಬದಲಿಗೆ ನಮ್ಮದೇ ಜನಗಳು ಎಂದು ಹೇಳಿಕೊಂಡಿದ್ದಾನೆ. ಇದು ಜಮ್ಮು-ಕಾಶ್ಮೀರದಲ್ಲಿ ಭಾರೀ ಅಲ್ಲೋಲ ಕಲ್ಲೋಲತೆಗೆ ಕಾರಣವಾಗಿದೆ.
ಹುರಿಯತ್ ಕಾನ್ಫರೆನ್ಸ್ ಮಾಜಿ ಅಧ್ಯಕ್ಷ ಅಬ್ದುಲ್ ಗನಿ ಬಟ್ ಎಂಬಾತನೇ ಇಂತಹ ಹೇಳಿಕೆ ನೀಡಿರುವುದು. ಆ ಕೊಲೆಗಳಲ್ಲಿ ಪೊಲೀಸರು ಅಥವಾ ಭದ್ರತಾ ಪಡೆಗಳು ಭಾಗವಹಿಸಿರಲಿಲ್ಲ. ನಮ್ಮ ಜನರೇ ಸೇರಿಕೊಂಡು ಅವರನ್ನು ಕೊಂದು ಹಾಕಿದ್ದರು ಎಂದು ಆತ ತಿಳಿಸಿದ್ದಾನೆ.
ಮಿರ್ವಾಯಿಜ್ ಮುಹಮ್ಮದ್ ಫಾರೂಕ್ ಮತ್ತು 2002ರಲ್ಲಿ ಗುಂಡಿಗೆ ಬಲಿಯಾದ ಅಬ್ದುಲ್ ಗನಿ ಲೋನ್ ಹಾಗೂ 1995ರಲ್ಲಿ ಹತ್ಯೆಗೀಡಾದ ತನ್ನ ಸಹೋದರ ಮೊಹಮ್ಮದ್ ಸುಲ್ತಾನ್ ಬಟ್ ಕುರಿತು ಸತ್ಯ ಮಾತನಾಡಲು ಈಗ ಸಮಯ ಬಂದಿದೆ. ಹಾಗಾಗಿ ವಾಸ್ತವ ವಿಚಾರವನ್ನು ಬಿಚ್ಚಿಡುತ್ತಿದ್ದೇನೆ ಎಂದು ಬಟ್ ವಿವರಣೆ ನೀಡಿದ್ದಾನೆ.
ಹಾಗಾದರೆ ಹತ್ಯೆ ಮಾಡಿದ್ದು ಯಾರು ಎಂದು ಹೇಳಿ ಎಂದಾಗ, ಅವರನ್ನು ಗುರುತಿಸುವ ಅಗತ್ಯವೇನಿದೆ? ಅವರನ್ನು ಈಗಾಗಲೇ ಗುರುತಿಸಲಾಗಿದೆ ಎಂದಷ್ಟೇ ಉತ್ತರಿಸಿದ್ದಾನೆ.