ಈ ಸಂಬಂಧ ನ್ಯಾಯಾಲಯವು ಪ್ರಮಾಣೀಕರಿಸಲು ಸೂಚನೆ ನೀಡಿದಾಗ, ಜೂನ್ 18ರಂದು ಆರೋಪದಿಂದ ಆಶ್ಚರ್ಯಕರವಾಗಿ ಪಾಠಕ್ ಹಿಂದಕ್ಕೆ ಸರಿದಿದ್ದರು. ಸೆಪ್ಟೆಂಬರ್ 7ರಂದು ಪ್ರಕರಣದ ಅಂತಿಮ ವರದಿ ಸಲ್ಲಿಸಿದ್ದ ಪೊಲೀಸರು, ಶಾಸಕನಿಗೆ ಕ್ಲೀನ್ ಚಿಟ್ ನೀಡಿದ್ದರು.
ಕೆಲ ದಿನಗಳ ನಂತರ ಮತ್ತೆ ಮಾತು ಬದಲಿಸಿದ ಪಾಠಕ್, ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ಕ್ಲೀನ್ ಚಿಟ್ ನೀಡಿದ್ದು ಸರಿಯಲ್ಲ. ನಾನು ಆರೋಪವನ್ನು ಹಿಂದಕ್ಕೆ ಪಡೆದುಕೊಂಡದ್ದು ಶಾಸಕನ ಬೆದರಿಕೆಯಿಂದ. ಜೀವ ಬೆದರಿಕೆ ಹಾಕಿದ್ದರಿಂದ ಹಾಗೆ ಮಾಡಿದ್ದೆ ಎಂದು ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನ್ಯಾಯಾಲಯವು 2011ರ ಮಾರ್ಚ್ 25ಕ್ಕೆ ಮುಂದೂಡಿತ್ತು.
ಆದರೆ ಮುಂದಿನ ವಿಚಾರಣೆಗೆ ಕಾಯದ ಪಾಠಕ್, ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೇಸರಿಗೆ ಬರೋಬ್ಬರಿ 21 ಇಂಚು ಉದ್ದದ ಹರಿತವಾದ ಅಗಲುಗಳುಳ್ಳ ಚೂರಿಯಿಂದ ಇರಿದು ಕೊಂದಿದ್ದಾರೆ. ಅದೂ ಶಾಸಕ ತನ್ನ ನಿವಾಸದಲ್ಲಿ ಜನರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದ ಹೊತ್ತಿನಲ್ಲಿ. ನೇರವಾಗಿ ಎದೆಗೂಡಿಗೆ ಚೂರಿ ಹಾಕಿದ್ದರಿಂದ ಕೆಲವೇ ಹೊತ್ತಿನಲ್ಲಿ ಕೇಸರಿ ಕೊನೆಯುಸಿರೆಳೆದಿದ್ದ.
ಅತ್ತ ಮತ್ತೊಂದು ದಿಕ್ಕಿನಿಂದ ಪ್ರಕರಣವನ್ನು ನೋಡಿದಾಗ ಬೇರೆಯದೇ ಆದ ಚಿತ್ರಣ ಸಿಗುತ್ತದೆ. ಪಾಠಕ್ ಎಂಬ ಶಿಕ್ಷಕಿಯ ಮಾನಸಿಕ ಸ್ಥಿತಿಯ ಬಗ್ಗೆ ಶಂಕೆ ಮೂಡುವಂತಹ ಅಂಶಗಳು ರಾಚುತ್ತವೆ.
ಗಂಡ ಅಶೋಕ್ ಪಾಠಕ್ ಜತೆ ಸೇರಿ ಶಾಲೆಯನ್ನು ತೆರೆದ ನಂತರ, ಅವರದ್ದೇ ಆದ ಕಾರಣದಿಂದ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಅಶೋಕ್ ಪ್ರಸಕ್ತ ಈಶಾನ್ಯ ರಾಜ್ಯದ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಪಾಠಕ್ ಈ ಹಿಂದೆ ತನ್ನ ಮಾವ ಮತ್ತು ಗಂಡನ ಸಹೋದರನ ಮೇಲೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ದಾಖಲಿಸಿದ್ದವರು. ಅವರಿಬ್ಬರನ್ನೂ ಕೋರ್ಟ್ ಕಟಕಟೆಗೆ ಎಳೆದು ತಂದಿದ್ದವರು. ಇದನ್ನೇ ಮುಂದಿಟ್ಟುಕೊಂಡಿರುವ ಬಿಜೆಪಿ, ಶಾಸಕನ ಹತ್ಯೆಯ ಹಿಂದೆ ಷಡ್ಯಂತ್ರವಿದೆ ಎಂದು ಹೇಳುತ್ತಿದೆ.