ನಿಜವಾಗಿಯೂ ಹಿಂದೂಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆಯೇ ಎನ್ನುವುದು ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಆದರೆ ಸ್ವತಃ ಸಾಕಷ್ಟು ಕಳಂಕಗಳನ್ನು ಹೊತ್ತಿರುವ ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು 'ಹೌದು' ಎನ್ನುತ್ತಿವೆ. ಸ್ವತಃ ಆರೆಸ್ಸೆಸ್ ನಾಯಕ ಸ್ವಾಮಿ ಅಸೀಮಾನಂದ್ ಈ ಸಂಬಂಧ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆ ಬೇರೆ, ಹಿಂದೂ ಭಯೋತ್ಪಾದನೆ ಬೇರೆ ಎಂಬ ವರ್ಗೀಕರಣ ಮಾಡಿದ ಕೀರ್ತಿ ಏನಿದ್ದರೂ ಕಾಂಗ್ರೆಸ್‌ನದ್ದು. ಅದನ್ನೀಗ ಮುಂದುವರಿಸುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳೂ ದಾಪುಗಾಲು ಇಡುತ್ತಿವೆ ಎಂಬ ಆರೋಪಗಳಿದ್ದರೂ, ಈ ಬಗ್ಗೆ ಗಂಭೀರವಾಗಿ ಚಿಂತಿಸಿಸುವ ಕಾಲ ಹತ್ತಿರವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕಾಗಿದೆ.
ಇದು 68 ಜನರ ಸಾವಿಗೆ ಕಾರಣವಾದ, 2007ರ ಫೆಬ್ರವರಿ 18ರಂದು ದೆಹಲಿಯಿಂದ ಲಾಹೋರಿಗೆ ಹೊರಟಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಮತ್ತು ಹೈದರಾಬಾದ್‌ನ ಅಜ್ಮೀರ್ ಸ್ಫೋಟ ಪ್ರಕರಣಗಳಿಗೆ ಲಿಂಕ್‌ನಲ್ಲಿ ಕಳೆದ ವರ್ಷದ ನವೆಂಬರ್ 19ರಂದು ಸ್ವಾಮಿ ಅಸೀಮಾನಂದರನ್ನು ಬಂಧಿಸಿರುವುದಕ್ಕೆ ಸಂಬಂಧಪಟ್ಟದ್ದು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಜತೆ ನಿಕಟ ಸಂಬಂಧ ಹೊಂದಿದ್ದ ಅಸೀಮಾನಂದರು ಸಿಬಿಐ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಅಜ್ಮೀರ್ ಸ್ಫೋಟ, ಮೆಕ್ಕಾ ಮಸೀದಿ ಸ್ಫೋಟ ಹಿಂದೂ ತೀವ್ರವಾದಿಗಳ ಕೃತ್ಯ ಎಂದು ಹೇಳಿದ್ದಾರೆ. ಹಾಗೆಂದು ಸ್ವತಃ ಸಿಬಿಐ ಬಹಿರಂಗಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಪ್ರಸಕ್ತ ಅಸೀಮಾನಂದರು ಹೇಳಿಕೆ ನೀಡಿರುವುದು ಅಪರಾಧ ದಂಡ ಸಂಹಿತೆ 164ರ ಅಡಿಯಲ್ಲಿ. ಹಾಗಾಗಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ಈ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷಿಯಾಗಿ ಬಳಸಬಹುದಾಗಿದೆ ಎಂದೂ ಹೇಳಲಾಗಿದೆ.
ದೇಶದಾದ್ಯಂತ ಹೇಗೆ ಭಯೋತ್ಪಾದನಾ ದಾಳಿಗಳನ್ನು ನಡೆಸಬೇಕು ಎಂದು ಪ್ರಜ್ಞಾ ಸಿಂಗ್ ಠಾಕೂರ್, ಸುನಿಲ್ ಜೋಷಿ, ಇಂದ್ರೇಶ್ ಕುಮಾರ್ ಮತ್ತು ಇತರರು ಹೇಗೆ ಸಂಚು ರೂಪಿಸಿದ್ದರು ಎನ್ನುವುದನ್ನು ಗ್ರಾಫಿಕ್ ವಿವರಗಳ ಮೂಲಕ ಅಸೀಮಾನಂದ್ ತಿಳಿಸಿದ್ದಾರೆ.
ಸ್ಫೋಟದಲ್ಲಿ ಅಭಿನವ್ ಭಾರತ್ ಮತ್ತು ಆರೆಸ್ಸೆಸ್ ಸಕ್ರಿಯ ಪಾತ್ರ ನಿರ್ವಹಿಸಿದೆ. ಹಿಂದೂ ದೇಗುಲಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಇಂತಹ ಕುಕೃತ್ಯಗಳನ್ನು ರೂಪಿಸಲಾಗಿತ್ತು. ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ಶರೀಫ್ ಸ್ಫೋಟಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿರುವ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರ ಕುರಿತು ಕೂಡ ಅಸೀಮಾನಂದ್ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.