ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ್ರಿವರ್ಣ ಧ್ವಜ ಹಾರಿಸಿಯೇ ಸಿದ್ಧ: ಬಿಜೆಪಿ | ಸಿಎಂಗೂ ಅಹ್ವಾನ (Lal Chowk | BJP | Jammu and Kashmir | Omar Abdullah)
Bookmark and Share Feedback Print
 
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರ ಸಮಸ್ಯೆಗಳ ಪರಿಹಾರ ಸಂಬಂಧ ನೇಮಕಗೊಂಡಿರುವ ಮೂವರು ಸಂಧಾನಕಾರರು ಮತ್ತು ಕಾಂಗ್ರೆಸ್ ನಾಯಕರ ಒತ್ತಾಯದ ಹೊರತಾಗಿಯೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲು ಬಿಜೆಪಿ ನಿರಾಕರಿಸಿದೆ.

ಕೆಲ ದಿನಗಳ ಹಿಂದೆ ಬಿಜೆಪಿಯು ಚಾಲನೆ ನೀಡಿರುವ ರಾಷ್ಟ್ರೀಯ ಏಕತಾ ಯಾತ್ರೆಯು ಜನವರಿ 26ರಂದು ಲಾಲ್‌ಚೌಕಕ್ಕೆ ತಲುಪಲಿದೆ. ಗಣರಾಜ್ಯೋತ್ಸವ ದಿನವಾದ ಅಂದು ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ನಾವು ಹಾರಿಸುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.

ಈ ನಡುವೆ ಸ್ವತಃ ಒಮರ್ ಅಬ್ದುಲ್ಲಾ ಅವರನ್ನೇ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುವಂತೆ ಬಿಜೆಪಿ ಆಹ್ವಾನ ನೀಡಿದೆ. ಐಕ್ಯತೆಯನ್ನು ಸಾರುವ ನಿಟ್ಟಿನಲ್ಲಿ ನಾವು ಆಯೋಜಿಸಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗವಹಿಸಬೇಕು ಎಂದು ಬಿಜೆಪಿ ಹೇಳಿದೆ.

ಅತ್ತ ಮತ್ತೊಂದು ಕಡೆ ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಅವರು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.

ನಮಗೆ ಮುಖ್ಯಮಂತ್ರಿ ಒಮರ್ ಅವರಿಂದ ನಿರಪೇಕ್ಷಣಾ ಪತ್ರ ಬೇಕಾಗಿಲ್ಲ. ಅದರ ಅಗತ್ಯ ನಮಗಿಲ್ಲ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ನಮ್ಮ ಏಕತಾ ಯಾತ್ರೆಯನ್ನು ಮುಖ್ಯಮಂತ್ರಿಯವರು ಸ್ವಾಗತಿಸಿದರೆ ಒಳ್ಳೆಯದು. ಅವರು ಒಬ್ಬ ಚುನಾಯಿತ ಪ್ರತಿನಿಧಿ ಎಂದು ಹುಸೇನ್ ಅಭಿಪ್ರಾಯಪಟ್ಟರು.

'ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಧರಿಸಿರುವ ಬಿಜೆಪಿ ಯುವವಾಹಿನಿ ಮೇಲೆ ಮುಗಿ ಬೀಳುವ ಬದಲು ಅಬ್ದುಲ್ಲಾ ಅವರು ರಾಜ್ಯದಲ್ಲಿ ಪಾಕಿಸ್ತಾನದ ಧ್ವಜಗಳು ಹಾರಾಡದಂತೆ ನೋಡಿಕೊಳ್ಳಲಿ. ಈ ಕುರಿತು ಹುರಿಯತ್ ನಾಯಕ ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಬಾಯಿ ಬಿಡಲು ಮುಖ್ಯಮಂತ್ರಿ ಅವಕಾಶ ನೀಡಬೇಕು. ಅವರು ಏನು ಹೇಳುತ್ತಾರೋ ನೋಡೋಣ' ಎಂದರು.

ಬಿಜೆಪಿಗೆ ಸಂಧಾನಕಾರರ ಸಲಹೆ...
ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸುವ ತನ್ನ ನಿರ್ಧಾರವನ್ನು ಬಿಜೆಪಿ ಮರು ಪರಿಶೀಲನೆ ನಡೆಸಬೇಕು ಎಂದು ಜಮ್ಮು-ಕಾಶ್ಮೀರದ ಸಮಸ್ಯೆಗಳ ಪರಿಹಾರದ ಕುರಿತು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟಿರುವ ಸಂಧಾನಕಾರರ ಸಮಿತಿಯು ಸಲಹೆ ಮಾಡಿದೆ.

ರಾಷ್ಟ್ರಧ್ವಜವನ್ನು ಹಾರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕು. ಆದರೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕು. ಆ ನಿಟ್ಟಿನಲ್ಲಿ ಜನವರಿ 26ರಂದು ಶ್ರೀನಗರದಲ್ಲಿ ಧ್ವಜಾರೋಹಣ ಮಾಡುವ ಬಿಜೆಪಿ ನಿರ್ಧಾರ ಮರು ಪರಿಶೀಲನೆ ಮಾಡುವುದು ಒಳ್ಳೆಯದು ಎಂದು ದಿಲೀಪ್ ಪಡ್ಗಾಂವ್ಕರ್, ರಾಧಾ ಕುಮಾರ್ ಮತ್ತು ಎಂ.ಎಂ. ಅನ್ಸಾರಿಯವರು ಹೇಳಿದ್ದಾರೆ.

ಧ್ವಜಾರೋಹಣ ವಿವಾದವೇನು?
ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದ್ದರೂ, ಅಲ್ಲಿ ಭಾರತದ ಧ್ವಜ ಹಾರುತ್ತಿರಲಿಲ್ಲ. ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ, 1991ರಲ್ಲಿ ತಿರಂಗವನ್ನು ಎತ್ತರೆತ್ತರಕ್ಕೆ ಹಾರಿಸಿ ದಾಖಲೆ ಬರೆದಿತ್ತು.

1991ರಲ್ಲಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 'ಏಕತಾ ಯಾತ್ರೆ' ಹೆಸರಿನಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಯಾತ್ರೆ ಮಾಡಿ ಸಾಂಕೇತಿಕವಾಗಿ ಧ್ವಜ (1991ರ ಜನವರಿ 26ರಂದು) ಹಾರಿಸಿದ್ದರು. ಅಂದಿನಿಂದ ನಿರಂತರ 19 ವರ್ಷಗಳ ಕಾಲ ಅಲ್ಲಿ ಧ್ವಜ ಹಾರಿತ್ತು. ಆದರೆ ಈ ಸಂಪ್ರದಾಯವನ್ನು 2010ರಲ್ಲಿ ಮುರಿಯಲಾಗಿತ್ತು. ಅಂತಹ ಕ್ರಮಕ್ಕೆ ಮುಂದಾಗಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತು ಅಲ್ಲಿನ ರಾಜ್ಯ ಸರಕಾರ.

ಭಾರತದ ಧ್ವಜವನ್ನು ಹಾರಿಸಿದರೆ ಅಲ್ಲಿ ಹಿಂಸಾಚಾರ ನಡೆಯುತ್ತದೆ. ಪ್ರತ್ಯೇಕತಾವಾದಿಗಳು ಮತ್ತು ಅವರ ರೂಪದಲ್ಲಿರುವ ಉಗ್ರಗಾಮಿಗಳು ಗಲಭೆಗಳನ್ನು ಸೃಷ್ಟಿಸುತ್ತಾರೆ. ಹಾಗಾಗಿ ಧ್ವಜಾರೋಹಣ ಬೇಡ ಎನ್ನುವುದು ಸರಕಾರಗಳು ಮತ್ತು ಕೆಲವು 'ಜಾತ್ಯತೀತ' ಪಕ್ಷಗಳ ನಿಲುವು. ಇದನ್ನು ವಿರೋಧಿಸುತ್ತಿರುವ ಬಿಜೆಪಿ, ನಮ್ಮ ನೆಲದಲ್ಲಿ ಯಾಕೆ ರಾಷ್ಟ್ರಧ್ವಜ ಹಾರಿಸಬಾರದು ಎಂದು ಪ್ರಶ್ನಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ