ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ಮಕರಜ್ಯೋತಿ ನಿಜಕ್ಕೂ ದೇವರ ಮಹಿಮೆಯಲ್ಲ? (Sabarimala stampede | Pulmedu | Periyar Tiger Reserve | Kerala Police)
Bookmark and Share Feedback Print
 
PTI
ಮಕರ ಸಂಕ್ರಾತಿಯ ವಿಶೇಷ ದಿನದಂದು ಕೋಟ್ಯಾನುಕೋಟಿ ಅಯ್ಯಪ್ಪ ಭಕ್ತರು ತದೇಕಚಿತ್ತದಿಂದ ದಿಟ್ಟಿಸಿ ನೋಡಿ ಪುನೀತರಾಗುವ ಶಬರಿಮಲೆ 'ಮಕರಜ್ಯೋತಿ'ಯ ಹಿಂದಿರುವ ಶಕ್ತಿ ಯಾವುದು? ಕಲಿಯುಗದ ಈ ದಿನಗಳಲ್ಲೂ ದೇವರ ಮಹಿಮೆ ಈ ರೀತಿಯಲ್ಲಿ ನಡೆಯುತ್ತಿದೆಯೇ? ಅಥವಾ ದೇವಸ್ಥಾನದ ಸಿಬ್ಬಂದಿಗಳ ಮೂಲಕ ದೀಪ ಹಚ್ಚಿ, ಅದನ್ನೇ ಅಯ್ಯಪ್ಪ ಜ್ಯೋತಿ ಎಂದು ಹೇಳಲಾಗುತ್ತಿದೆಯೇ?

ಇಂತಹ ಪ್ರಶ್ನೆಗಳೇನೂ ಹೊಸತಲ್ಲ. ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ. ವಿಚಾರವಾದಿಗಳು ಕೆಲ ವರ್ಷಗಳ ಹಿಂದೆಯೇ ತನಿಖೆ ನಡೆಸಿ, 'ರಹಸ್ಯ' ಬಹಿರಂಗಪಡಿಸಿದ್ದಾರೆ. ಶಬರಿಮಲೆ ಜ್ಯೋತಿ ನಕಲಿ ಎಂದು ಇದುವರೆಗೆ ಯಾವೊಬ್ಬ ಅಧಿಕೃತ ವ್ಯಕ್ತಿಯೂ ಹೇಳಿಕೆ ನೀಡಿಲ್ಲ. ಆದರೆ ಸಂಬಂಧಪಟ್ಟವರು ಹೇಳಿಕೊಂಡು ಬಂದಿದ್ದಾರೆ.

ಈಗ ಮತ್ತೆ ಈ ಪ್ರಶ್ನೆ ಉದ್ಭವಿಸಿರುವುದು ಕೇರಳ ಹೈಕೋರ್ಟ್‌ನಿಂದಾಗಿ. ಶಬರಿಮಲೆಯ ಮಕರಜ್ಯೋತಿ ನಕಲಿಯೇ ಅಥವಾ ಅಸಲಿಯೇ ಎಂದು ಅದು ಪ್ರಶ್ನಿಸಿದೆ. ಇದಕ್ಕೆ ಉತ್ತರ ನೀಡಬೇಕು ಎಂದು ಕೇರಳ ಸರಕಾರಕ್ಕೆ ಸೂಚನೆ ನೀಡಿದೆ.

ಭಕ್ತರು ಪವಿತ್ರ ಬೆಳಕು ಎಂದು ನಂಬಿರುವ 'ಮಕರಜ್ಯೋತಿ'ಯ ಹಿಂದಿನ ಸತ್ಯ ಹೊರಗೆ ಬರಬೇಕು. ಅಲ್ಲಿ ದೀಪವನ್ನು ಮನುಷ್ಯರೇ ಹಚ್ಚುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕೇರಳ ಸರಕಾರ ಮತ್ತು ಶಬರಿಮಲೆ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವ ತ್ರಿವಾಂಕೂರ್ ದೇವಸ್ವಂ ಮಂಡಳಿ ತಿಳಿಸಬೇಕು ಎಂದು ನ್ಯಾಯಮೂರ್ತಿ ತೊಟ್ಟಾತಿಲ್ ಆರ್. ರಾಧಾಕೃಷ್ಣನ್ ಮತ್ತು ಪಿ. ಭಾವದಾಸನ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಅಷ್ಟಕ್ಕೂ ಅದು ಮಕರಜ್ಯೋತಿಯಲ್ಲ...
ನಾವು, ಅದರಲ್ಲೂ ಬಹುತೇಕ ಕನ್ನಡಿಗರು ನಂಬಿರುವ ಪ್ರಕಾರ 'ಮಕರಜ್ಯೋತಿ' ಎಂದರೆ ಮೂರು ಬಾರಿ ದಿವ್ಯವಾದ ದೀಪವೊಂದು ಕಾಣಿಸಿಕೊಂಡು ಮಾಯವಾಗುವುದು. ಆದರೆ ವಾಸ್ತವ ಸಂಗತಿ ಬೇರೆಯೇ ಇದೆ.

ಮಕರಜ್ಯೋತಿ ಎಂದರೆ ನಕ್ಷತ್ರ. ಅಯ್ಯಪ್ಪ ಸ್ವಾಮಿ ತನ್ನ ಬಾಲ್ಯವನ್ನು ಕಳೆದ ಅರಮನೆಯಿಂದ ಆಭರಣಗಳನ್ನು ಅಯ್ಯಪ್ಪನ ಗರ್ಭಗುಡಿಗೆ ತೆಗೆದುಕೊಂಡು ಹೋಗುವಾಗ ಕಾಣಿಸಿಕೊಂಡು ಮಾಯವಾಗುವ ನಕ್ಷತ್ರವನ್ನೇ ಮಕರಜ್ಯೋತಿ (ಜ್ಯೋತಿ=ನಕ್ಷತ್ರ) ಎಂದು ಕರೆಯಲಾಗುತ್ತದೆ.

ನಾವು ಮಕರಜ್ಯೋತಿ ಎಂದು ಕರೆಯುವ ಜ್ಯೋತಿಯನ್ನು 'ಮಕರವಿಳಕ್ಕು' ಎನ್ನಲಾಗುತ್ತದೆ. ಇದು ದೇಗುಲದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಪೂನಾಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಕಾಣಿಸಿಕೊಂಡು ಮಾಯವಾಗುತ್ತದೆ. ಮಲಯಾಳಂನಲ್ಲಿ ವಿಳಕ್ಕು ಎಂದರೆ ಬೆಳಕು ಎಂದರ್ಥ.

ಪ್ರಸಕ್ತ ವಿವಾದಕ್ಕೀಡಾಗಿರುವುದು ಇದೇ 'ಮಕರವಿಳಕ್ಕು'. ಇದನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ ಎನ್ನುವುದು ಆರೋಪ. ಆದರೆ ಇದೇ ಸರಿ, ಜನ ಅರ್ಥ ಮಾಡಿಕೊಂಡಿರುವುದೇ ತಪ್ಪು ಎಂದು ವಾದಿಸುವವರೂ ಇದ್ದಾರೆ.

ತಂತ್ರಿಗಳೇ ಹೇಳಿದ್ದಾರೆ ನಕಲಿ ಎಂದು...
ಕಂಟರಾರು ಮಹೇಶ್ವರು ಎಂಬ ಶಬರಿಮಲೆಯ ಮಾಜಿ ತಂತ್ರಿಯೇ ಮಕರಜ್ಯೋತಿ ನಕಲಿ ಎಂದು 2008ರಲ್ಲಿ ಹೇಳಿದ್ದರು. ಪೂನಾಮಂಬಲಮೇಡು ಬೆಟ್ಟಕ್ಕೆ ಮೊದಲೇ ತೆರಳುವ ಕೆಲವು ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಕರ್ಪೂರವನ್ನು ಉರಿಸುತ್ತಾರೆ ಎಂದು ಹೇಳುವ ಮೂಲಕ ಅವರು ವಿವಾದಕ್ಕೆ ಸಿಲುಕಿದ್ದರು.

ಇದಕ್ಕೆ ಇನ್ನಷ್ಟು ಉಪ್ಪು-ಖಾರ ಹಚ್ಚಿದ್ದು ಸ್ವತಃ ತ್ರಿವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ರಾಮನ್ ನಾಯರ್. ಟಿವಿ ಚಾನೆಲ್‌ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಈ ಹಿಂದೆ ಪಾಲ್ಗೊಂಡಿದ್ದ ಅವರು, ಮಕರಜ್ಯೋತಿ ದೇವರ ಮಹಿಮೆಯಲ್ಲ. ಅದು ಟಿಡಿಬಿ ಸಿಬ್ಬಂದಿ, ಪೊಲೀಸರು ಮತ್ತು ಇತರರು ಸೇರಿ ಜಂಟಿಯಾಗಿ ಉರಿಸುವ ದೀಪ. ಇದೊಂದು ಧಾರ್ಮಿಕ ವಿಧಿವಿಧಾನ ಎಂದು ಹೇಳಿದ್ದರು.

ಶಬರಿಮಲೆಯ ಹಿರಿಯ ಅರ್ಚಕರ ಕುಟುಂಬದ ಸದಸ್ಯರಾಗಿರುವ ರಾಹುಲ್ ಈಶ್ವರ್ ಅವರ ಪ್ರಕಾರ, ಮಕರಜ್ಯೋತಿ ಎಂದರೆ ಬೆಳಗುವ ನಕ್ಷತ್ರ. ಇದು ಮಕರ ಸಂಕ್ರಾಂತಿಯಂದು ಆಕಾಶದಲ್ಲಿ ಕಾಣಿಸಿಕೊಳ್ಳುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಹೋಗುವ ಸಂದರ್ಭದಲ್ಲಿ ಈ ನಕ್ಷತ್ರ ಕಾಣಿಸಿಕೊಳ್ಳುತ್ತದೆ.

ಕಂಟರಾರು ಮಹೇಶ್ವರು ಮತ್ತು ರಾಮನ್ ನಾಯರ್ ಮುಂತಾದ ಅರ್ಚಕ ವರ್ಗಕ್ಕೆ ಸೇರಿದವರು ಹೇಳಿದ್ದು, ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು. ಜ್ಯೋತಿ (ಮಕರವಿಳಕ್ಕು) ಕಾಣಿಸಿಕೊಳ್ಳುವುದು ದೈವೀಕ ಶಕ್ತಿಯಲ್ಲ, ಅದು ಧಾರ್ಮಿಕ ವಿಧಿ ವಿಧಾನ. ಅಂದೇ ಕಾಣಿಸಿಕೊಳ್ಳುವ ನಕ್ಷತ್ರ (ಮಕರಜ್ಯೋತಿ) ಪವಿತ್ರವಾದುದು. ಇದನ್ನು ಭಕ್ತರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.

ಫೋಟೋ ತೆಗೆದಿದ್ದರು...
ಹೀಗೆಂಬ ಸುದ್ದಿಗಳೂ ಇವೆ. 80ರ ದಶಕದಲ್ಲಿ ಕೆಲವು ವಿಚಾರವಾದಿಗಳು ಮಕರಜ್ಯೋತಿಯ ರಹಸ್ಯವನ್ನು ಪತ್ತೆ ಮಾಡಲು ಹೋಗಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದರು.

ಕೆಲವು ಮಂದಿ ಸೇರಿ ಮಕರಜ್ಯೋತಿಯನ್ನು ಉರಿಸುತ್ತಿರುವುದನ್ನು ವಿಚಾರವಾದಿಗಳು ಎಂದು ಹೇಳಿಕೊಂಡವರು ಫೋಟೋ ತೆಗೆದಿದ್ದರು. ಆದರೆ ಅಲ್ಲಿದ್ದವರಿಗೆ ಸಿಕ್ಕಿ ಬಿದ್ದು, ಎಲ್ಲವನ್ನೂ ಕಳೆದುಕೊಂಡಿದ್ದರು. ದೀಪ ಉರಿಸುವ ಮಂದಿ ವಿಚಾರವಾದಿಗಳನ್ನು ಥಳಿಸಿದ್ದರು ಎಂದು ಹೇಳಲಾಗುತ್ತಿದೆ.

ಜ್ಯೋತಿ ಹಾಗಾದ್ರೆ, ಗರುಡ?
ಮಕರಜ್ಯೋತಿ ನಿಜಕ್ಕೂ ದೇವರ ಮಹಿಮೆಯಲ್ಲ ಎಂದು ವಿಚಾರವಾದಿಗಳು ಮತ್ತು ಇತರರ ವಾದವನ್ನು ಒಪ್ಪಿಕೊಂಡರೂ, ಗರುಡನ ಕಥೆಯೇನು? ಪ್ರತಿವರ್ಷ ಸರಿಯಾದ ಹೊತ್ತಿಗೆ ಕಾಣಿಸಿಕೊಂಡು ಮಾಯವಾಗುವ ಗರುಡನೂ ನಕಲಿಯೇ?

ಪಂದಳ ಅರಮನೆಯಿಂದ ಆಭರಣಗಳನ್ನು ದೇಗುಲಕ್ಕೆ ತರುವ ಹೊತ್ತಿಗೆ ಕಾಣಿಸಿಕೊಳ್ಳುವ ಗರುಡ ಮತ್ತೆ ಕಾಣಿಸಿಕೊಳ್ಳುವುದು ಶಬರಿಮಲೆಯಿಂದ ಒಡವೆಗಳನ್ನು ಅರಮನೆಗೆ ವಾಪಸ್ ಕೊಂಡೊಯ್ಯುವಾಗ. ಇದರ ಹಿಂದೆ ಯಾರ ಶಕ್ತಿ ಅಡಗಿದೆ ಎಂಬುದನ್ನು ಇದುವರೆಗೆ ಪತ್ತೆ ಹಚ್ಚುವುದು ಯಾರಿಗೂ ಸಾಧ್ಯವಾಗಿಲ್ಲ.

ಜನರ ನಂಬಿಕೆಗೆ ಬಿಟ್ಟದ್ದು: ಮುಖ್ಯಮಂತ್ರಿ
ಕೋಟ್ಯಂತರ ಅಯ್ಯಪ್ಪ ಭಕ್ತರು ನಂಬಿರುವ ಮಕರಜ್ಯೋತಿಯ ಸತ್ಯಾಸತ್ಯತೆಯ ಬಗ್ಗೆ ಸರಕಾರವು ಯಾವುದೇ ತನಿಖೆ ನಡೆಸುವುದಿಲ್ಲ. ಇದು ಜನರ ನಂಬಿಕೆಗೆ ಬಿಟ್ಟ ವಿಚಾರ ಎಂದು ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ಪ್ರಶ್ನೆ ಮಾಡಿರುವುದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸುತ್ತಿದ್ದ ಮುಖ್ಯಮಂತ್ರಿ, ಜ್ಯೋತಿ ಕೋಟ್ಯಂತರ ಭಕ್ತರ ನಂಬಿಕೆಯ ವಿಚಾರವಾಗಿರುವುದರಿಂದ ಅದು ದೇವರ ಮಹಿಮೆಯೋ ಅಥವಾ ಮಾನವ ನಿರ್ಮಿತವೋ ಎಂಬುದನ್ನು ಸರಕಾರ ತನಿಖೆ ಮಾಡುವುದಿಲ್ಲ ಎಂದರು.

ಭಕ್ತಿಯಿಂದ ಅಯ್ಯಪ್ಪ ವ್ರತಧಾರಿಗಳು ಸೇರಿದಂತೆ ಲಕ್ಷಾಂತರ ಮಂದಿ ನೋಡಿ ಪುನೀತ ಭಾವ ಹೊಂದುತ್ತಿರುವ ಮಕರಜ್ಯೋತಿಯ ಸತ್ಯಾಸತ್ಯತೆಯ ಕುರಿತು ಪರಿಶೀಲನೆ ನಡೆಸಲು ಸರಕಾರವು ಜ್ಯೋತಿಷಿಗಳನ್ನು ಅಥವಾ ವಿಜ್ಞಾನಿಗಳನ್ನು ಸಂಪರ್ಕಿಸುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ನಕಲಿಯೆಂದು ಸರಕಾರವೇ ಹೇಳಿತ್ತು...
ಮಕರ ಸಂಕ್ರಾಂತಿಯಂದು ಪೂನಾಂಬಲಮೇಡು ಬೆಟ್ಟದಲ್ಲಿ ಕಾಣಿಸಿಕೊಂಡು ಮಾಯವಾಗುವ 'ಮಕರಜ್ಯೋತಿ' (ನಾವು ಮಕರಜ್ಯೋತಿಯೆಂದೇ ಅಂದುಕೊಳ್ಳೋಣ) ಮಾನವ ನಿರ್ಮಿತ. ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ವಶದಲ್ಲಿರುವ ಈ ಜಾಗದಲ್ಲಿ ಕಾಣಿಸಿಕೊಳ್ಳುವ ಜ್ಯೋತಿಯ ಹಿಂದೆ ದೇವರ ಮಹಿಮೆ ಇಲ್ಲ ಎಂದು ಕಾಲ್ತುಳಿತ ದುರಂತ ನಡೆದ ನಂತರ ಕೇರಳ ಸರಕಾರವೇ ಹೇಳಿಕೊಂಡಿತ್ತು.

ಮಕರವಿಳಕ್ಕು ದೈವೀಕವಾದುದಲ್ಲ. ಅದು ಮಾನವ ಸೃಷ್ಟಿ. ಹಾಗಾಗಿ ಭಕ್ತರು ಈ ರೀತಿಯಾಗಿ ಉನ್ಮಾದಕ್ಕೊಳಗಾಗಬೇಕಾದ ಅಗತ್ಯವಿಲ್ಲ. ಉನ್ಮಾದಕ್ಕೊಳಗಾದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಸರಕಾರ ಹೇಳಿತ್ತು. ಆದರೆ ಈಗ ಸ್ವತಃ ಮುಖ್ಯಮಂತ್ರಿಯವರು ಬೇರೆಯದೇ ಆದ ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ