ನಾನು ಷಂಡ, ಅತ್ಯಾಚಾರ ಮಾಡುವುದು ಹೇಗೆ ಎಂದು ಶಾಸಕ ಪ್ರಶ್ನಿಸಿದ ಬೆನ್ನಿಗೆ ಆತನ ಪತ್ನಿಯೂ ಅದನ್ನೇ ಸಾರಿದ್ದಾಳೆ. ಅತ್ಯಾಚಾರ ಮಾಡಲು ನನ್ನ ಗಂಡ ದೈಹಿಕವಾಗಿ ಸಮರ್ಥನಲ್ಲ, ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾಳೆ.
ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಶಾಸಕ ಪುರುಷೋತ್ತಮ ನಾರಾಯಣ ದ್ವಿವೇದಿ ಪ್ರಕರಣ. ಬಂಡಾ ಜಿಲ್ಲೆಯಲ್ಲಿನ 17ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ, ಆಕೆಯನ್ನು ಸುಳ್ಳು ಕೇಸಿನ ಮೂಲಕ ಜೈಲಿಗಟ್ಟಿದ್ದ ಶಾಸಕ ಪತ್ನಿ ಆಶಾ ಎಂಬಾಕೆಯೇ ಮೇಲಿನಂತೆ ಹೇಳಿರುವುದು.
'ನನ್ನ ಗಂಡ ಕಳೆದ 18 ವರ್ಷಗಳಿಂದ ಡಯಾಬಿಟೀಸ್ ಮತ್ತು ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಎಡ ಕಿಡ್ನಿಯೂ ಕೆಲಸ ಮಾಡುತ್ತಿಲ್ಲ. ಇಂತಹ ದೈಹಿಕ ಸ್ಥಿತಿಯಲ್ಲಿ ಅವರು ಅತ್ಯಾಚಾರ ಮಾಡುವುದು ಸಾಧ್ಯವಿಲ್ಲ. ಅವರ ಪತ್ನಿಯಾಗಿ ಇದನ್ನು ನಾನು ಖಚಿತವಾಗಿ ಹೇಳಬಲ್ಲೆ' ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಆಶಾ ತಿಳಿಸಿದ್ದಾಳೆ.
ಆರೋಪಗಳು ಸಂಪೂರ್ಣ ಸುಳ್ಳು ಎಂದಿರುವ ಶಾಸಕನ ಪತ್ನಿ, ಪ್ರಕರಣದಲ್ಲಿ ನನ್ನ ಗಂಡನನ್ನು ಡಿಎನ್‌ಎ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ತಕ್ಷಣವೇ ಒಳಪಡಿಸಬೇಕು ಎಂದು ಆಗ್ರಹಿಸಿದಳು.
ನನ್ನ ಗಂಡನ ರಾಜಕೀಯ ಎದುರಾಳಿಗಳು ಮಾಡಿರುವ ರಾಜಕೀಯ ಕುತಂತ್ರವಿದು. ಇದನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ಒಪ್ಪಿಸಬೇಕು. ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳುತ್ತಿರುವ ಹುಡುಗಿ ಕಳ್ಳತನ ಮಾಡಿದ್ದು ಹೌದು. ಆಕೆಯನ್ನು 500 ಮಂದಿಯ ಎದುರಲ್ಲೇ ಬಂಧಿಸಲಾಗಿತ್ತು. ಅಲ್ಲದೆ, ಅದೇ ಸಂದರ್ಭದಲ್ಲಿ ಕಳ್ಳತನವಾಗಿದ್ದ ಮೊಬೈಲನ್ನು ಅಕೆಯಿಂದ ವಶ ಪಡಿಸಿಕೊಳ್ಳಲಾಗಿತ್ತು ಎಂದು ಆಶಾ ಹೇಳಿಕೊಂಡಿದ್ದಾಳೆ.
ಆ ಹುಡುಗಿಯನ್ನು ಬಂಧಿಸಿದ ನಂತರ ಪೊಲೀಸರು ಬಂಡಾ ಜೈಲಿನಲ್ಲಿ ಆಕೆಯ ಹೇಳಿಕೆ ಪಡೆದುಕೊಂಡಿದ್ದರು. ಆಗ ನನ್ನ ಗಂಡನ ಬಗ್ಗೆ ಆಕೆ ಯಾವುದೇ ದೂರನ್ನೂ ನೀಡಿರಲಿಲ್ಲ. ಅಷ್ಟಕ್ಕೂ ಆಕೆ ತನ್ನ ಸ್ವಂತ ತಂದೆಯ ವಿರುದ್ಧವೇ ಆರೋಪಗಳನ್ನು ಮಾಡಿದ್ದಳು ಎಂದೂ ಆರೋಪಿಸಿದಳು.
ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆಯಲ್ಲವೇ ಎಂದಾಗ, ಈ ಕುರಿತ ಪರೀಕ್ಷೆಗಳು ಕೂಡ ಆಕೆಯನ್ನು ಅತ್ಯಾಚಾರ ಮಾಡಲಾಗಿದೆ ಅಥವಾ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದನ್ನು ನಿರೂಪಿಸಲು ವಿಫಲವಾಗಿವೆ; ಆಕೆ ಹೆಸರಿಸಿರುವ ವ್ಯಕ್ತಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಳು.