ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ, ದುಷ್ಟರನ್ನು ಶಿಕ್ಷಿಸುವ ಅಧಿಕಾರಿಗಳೇ ಮಾಯವಾಗುತ್ತಿರುವ ಹೊತ್ತಿನಲ್ಲಿ, ಆ ನಿಟ್ಟಿನಲ್ಲಿ ಮುಂದುವರಿದಿದ್ದ ಅಧಿಕಾರಿಗೆ ನಮ್ಮ ಸಮಾಜವು ನೀಡಿರುವ ಉಡುಗೊರೆಯಿದು. ತೈಲ ಮಾಫಿಯಾದ ಮೇಲೆ ದಾಳಿ ನಡೆಸಿದ್ದನ್ನೇ ಮುಂದಿಟ್ಟುಕೊಂಡ ದುಷ್ಕರ್ಮಿಗಳು ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಸಜೀವವಾಗಿ ದಹಿಸಿದ್ದಾರೆ.
PR
ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾದ್ ಎಂಬಲ್ಲಿನ ಪನೇವಾಡಿಯಲ್ಲಿ. ಮಾಲೆಗಾಂವ್ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಯಶವಂತ್ ಸೋನಾವಾನೆಯವರು ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆ ನಡೆಯುತ್ತಿರುವುದನ್ನು ಕಂಡು ದಾಳಿ ಮಾಡಿದ್ದರು.
ಮುಂಬೈಯಿಂದ 260 ಕಿಲೋ ಮೀಟರ್ ದೂರದಲ್ಲಿನ ಮನ್ಮಾಡ್ ನಗರದಲ್ಲಿನ ರಸ್ತೆ ಬದಿಯ ಧಾಬಾವೊಂದರ ಮೇಲೆ ಯಶವಂತ್ ತನ್ನ ಸಹಾಯಕ ಮತ್ತು ಚಾಲಕನ ಜತೆ ಸೇರಿ ದಾಳಿ ನಡೆಸಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಅಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆ ನಡೆಯುತ್ತಿತ್ತು. ಆ ಮಾಫಿಯಾ ವ್ಯಕ್ತಿಗಳು ಯಶವಂತ್ ದಾಳಿ ನಡೆಸುತ್ತಿದ್ದಂತೆ ಪೆಟ್ರೋಲ್ ಮೈಮೇಲೆ ಸುರಿದು ಬೆಂಕಿ ಹಚ್ಚಿದರು ಎಂದು ಹೇಳಲಾಗಿದೆ.
ಇನ್ನೊಂದು ವರದಿಯ ಪ್ರಕಾರ ನಿರ್ದಿಷ್ಟ ಸ್ಥಳವೊಂದರ ಭದ್ರತಾ ಕಾರ್ಯದ ಪರಿಶೀಲನೆಗೆಂದು ಹೊರಟಿದ್ದ ಯಶವಂತ್, ರಸ್ತೆ ಬದಿಯ ಹೊಟೇಲೊಂದರಲ್ಲಿ ಕೊಂಚ ಹೊತ್ತು ತಂಗಿದ್ದರು. ಈ ಹೊತ್ತಿನಲ್ಲಿ ಅಲ್ಲಿ ತೈಲ ಕಲಬೆರಕೆ ನಡೆಯುತ್ತಿತ್ತು. ಇದನ್ನು ಜಿಲ್ಲಾಧಿಕಾರಿ ಆಕ್ಷೇಪಿಸಿದ್ದರು.
ತೈಲ ಕಲಬೆರಕೆಯ ಕುರಿತು ತನಿಖೆ ನಡೆಸಲು ಸ್ಥಳಕ್ಕೆ ಸಪ್ಲೈ ಇನ್ಸ್‌ಪೆಕ್ಟರ್ ಅವರನ್ನು ಬರುವಂತೆ ಸೂಚಿಸಿದ್ದರು. ಇದಾದ ಸ್ವಲ್ಪ ಹೊತ್ತಿಗೆ ಬೈಕುಗಳಲ್ಲಿ ಬಂದ ಕೆಲವು ದುಷ್ಕರ್ಮಿಗಳು, ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರು. ಇದೇ ಹೊತ್ತಿಗೆ ಪೋಪಟ್ ಶಿಂಧೆ, ಆತನ ಪುತ್ರ, ಸೋದರಳಿಯ ಮತ್ತು ಇನ್ನೊಬ್ಬ ವ್ಯಕ್ತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.
ತಕ್ಷಣವೇ ಕಾರ್ಯ ಪ್ರವೃತ್ತರಾಗಿರುವ ಪೊಲೀಸರು ಪ್ರಮುಖ ಆರೋಪಿ ಪೋಪಟ್ ಶಿಂಧೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಅಧಿಕಾರಿ ಯಶವಂತ್ ಮೇಲೆ ಪೆಟ್ರೋಲ್ ಸುರಿದಿದ್ದ ಶಿಂಧೆ ಕೂಡ ತೀವ್ರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾನ್, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳನ್ನು ಕಾನೂನಿನ ಕಟಕಟೆಗೆ ತಂದು, ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದ್ದಾರೆ.