ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪುಹಣದ ಮೂಲ ಯಾವುದು?; ಕೇಂದ್ರಕ್ಕೆ ಸುಪ್ರೀಂ ತಪರಾಕಿ (Black money | Supreme Court | India | Pranab Mukherjee)
Bookmark and Share Feedback Print
 
ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಶೇಖರಿಸಿಟ್ಟಿರುವ ಕಪ್ಪುಹಣದ ಕುರಿತು ಕೇಂದ್ರ ಸರಕಾರ ತಳೆದಿರುವ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಕಪ್ಪು ಹಣದ ಮೂಲ ಯಾವುದು? ಇದನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ. ಅಲ್ಲದೆ, ಸರಕಾರ ಮತ್ತು ಹಲವು ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿದೆ.

ಸ್ವಿಸ್ ಬ್ಯಾಂಕ್ ಸೇರಿದಂತೆ ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪುಹಣದ ವಾರಸುದಾರರಾಗಿರುವ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸರಕಾರವು ವಿದೇಶಗಳ ಜತೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಿರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರವು ಇಂದು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೇಳಿತ್ತು.

ಇದರಿಂದ ಸಮಾಧಾನಗೊಳ್ಳದ ಸುಪ್ರೀಂ, ಶಸ್ತ್ರಾಸ್ತ್ರ ವ್ಯವಹಾರ, ಮಾದಕ ದ್ರವ್ಯ ಸಾಗಣಿಕೆ ಮುಂತಾದ ಗಂಭೀರ ವಿಚಾರಗಳ ಮೂಲಕ ಕಪ್ಪುಹಣ ಸಾಗಿಸಲ್ಪಡುತ್ತಿದೆ ಎಂಬ ಹಣದ ಮೂಲ ನಿಮಗೆ ಗೊತ್ತಾದ ನಂತರ ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

ಕಪ್ಪುಹಣದ ವಿಚಾರದಲ್ಲಿ ನಿಜವಾದ ತಪ್ಪಿತಸ್ಥರು ಯಾರು? ಕಪ್ಪುಹಣದ ವಾಸ್ತವ ಮೂಲಗಳು ಯಾವುವು? ಕಪ್ಪುಹಣವನ್ನು ಎಲ್ಲಿ ಬಳಕೆ ಮಾಡಲಾಗುತ್ತಿದೆ? ತೆರಿಗೆ ಕಳ್ಳತನ ತಪ್ಪಿಸಲು ನೀವು ಏನು ಕ್ರಮ ಕೈಗೊಂಡಿದ್ದೀರಿ? ನೀವು ಇದುವರೆಗೆ ಈ ಬಗ್ಗೆ ತನಿಖೆ ನಡೆಸಿದ್ದೀರಾ? ತನಿಖೆ ನಡೆಸಿದ್ದರೆ ಆ ವರದಿಗಳು ಇವೆಯೇ? ಹೀಗೆ ತರಹೇವಾರಿ ಪ್ರಶ್ನೆಗಳನ್ನು ಹಾಕಿದ ನ್ಯಾಯಾಲಯ, ಸರಕಾರವು ಒಪ್ಪಂದಗಳ ಬಗ್ಗೆ ಮಾತನಾಡುತ್ತಿದೆಯೇ ಹೊರತು, ತೆರಿಗೆ ವಂಚಕರು ಅಥವಾ ಕೆಲವು ಖಾತೆಗಳಲ್ಲಿ ಭಾರೀ ಹಣ ಬಿದ್ದಿರುವುದರ ಕುರಿತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಜರ್ಮನಿಯ ಎಲ್‌ಟಿಜಿ ಬ್ಯಾಂಕ್‌ನಲ್ಲಿ ಖಾತೆದಾರರಾಗಿರುವ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಇತ್ತೀಚೆಗಷ್ಟೇ ಸರಕಾರದ ನಿಲುವನ್ನು ಬಹಿರಂಗಪಡಿಸಿದ್ದರು.

ಸರಕಾರವು ಇಂದು ಸಲ್ಲಿಸಿದ ಅಫಿಡವಿತ್‌ ಏನೇನೂ ಸಾಲದು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ, ಹೆಚ್ಚುವರಿ ಅಫಿಡವಿತ್ ಸಲ್ಲಿಸುವಂತೆ ಆದೇಶ ನೀಡಿದೆ. ಅಲ್ಲದೆ ಕೇಂದ್ರ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್, ಗೃಹ ಸಚಿವಾಲಯ, ಕೇಂದ್ರ ಜಾಗೃತ ಆಯೋಗ, ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಮತ್ತೆ ನೋಟೀಸ್ ಜಾರಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ