ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸದ್ಯಕ್ಕಿಲ್ಲ ಗಲ್ಲು; ನನ್ನೂರಿನ ಜೈಲಿಗೆ ಸ್ಥಳಾಂತರಿಸಿ: ಅಫ್ಜಲ್
(Afzal Guru | Jaish-e-Mohammed | Parliament attack | Jammu and Kashmir)
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಸದ್ಯಕ್ಕಂತೂ ತನಗೆ ಮರಣ ದಂಡನೆ ಶಿಕ್ಷೆಯನ್ನು ದಯಪಾಲಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡಿರುವ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಮೊಹಮ್ಮದ್ ಅಫ್ಜಲ್ ಗುರು, ದೆಹಲಿಯಿಂದ ನನ್ನೂರಿನ ಜೈಲಿಗೆ ಸ್ಥಳಾಂತರಿಸಿ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾನೆ.
2001ರ ಸಂಸತ್ ದಾಳಿಯಲ್ಲಿ ಪಿತೂರಿ ಆರೋಪ ಸಾಬೀತಾಗಿ ಸುಪ್ರೀಂ ಕೋರ್ಟಿನಿಂದ ಮರಣ ದಂಡನೆ ಶಿಕ್ಷೆಯ ತೀರ್ಪನ್ನು ಪಡೆದುಕೊಂಡು ಯುಪಿಎ ಸರಕಾರದ ಅನುಮತಿಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಅಫ್ಜಲ್ ಗುರು, ತನ್ನನ್ನು ಜಮ್ಮು-ಕಾಶ್ಮೀರಕ್ಕೆ ಸ್ಥಳಾಂತರಗೊಳಿಸಿ ಎಂದು ಕೇಳಿಕೊಂಡಿದ್ದಾನೆ.
ನನ್ನನ್ನು ಜಮ್ಮು-ಕಾಶ್ಮೀರದ ಜೈಲಿಗೆ ಸ್ಥಳಾಂತರಗೊಳಿಸುವುದರಿಂದ ಆಗಾಗ ನನ್ನನ್ನು ಭೇಟಿ ಮಾಡುವ ಕುಟುಂಬಸ್ಥರಿಗೆ ಅನುಕೂಲವಾಗುತ್ತದೆ ಎಂಬ ಕಾರಣಗಳನ್ನು ಕೊಟ್ಟಿರುವ ಅಫ್ಜಲ್, ಈ ಸಂಬಂಧ ದೆಹಲಿ ಸರಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ತನ್ನ ವಕೀಲ ಕಾಮಾಕ್ಯ ಸಿಂಗ್ ಮಹಿಳ್ವಾಲ್ ಮೂಲಕ ಅರ್ಜಿ ಗುಜರಾಯಿಸಿದ್ದಾನೆ.
ನಾನು ದೆಹಲಿಯ ತಿಹಾರ್ ಜೈಲಿನಲ್ಲಿರುವುದರಿಂದ, ಮನೆಯವರು ಅಥವಾ ಸಂಬಂಧಿಕರು ನನ್ನನ್ನು ಭೇಟಿ ಮಾಡಬೇಕಿದ್ದರೆ ಅಲ್ಲಿಂದ ಇಲ್ಲಿಯವರೆಗೆ ಬರಬೇಕಾಗುತ್ತದೆ. ಇದು ಅವರಿಗೆ ಅನನುಕೂಲತೆ ಸೃಷ್ಟಿಸುತ್ತಿದೆ. ಹಾಗಾಗಿ ನನ್ನನ್ನು ನನ್ನ ರಾಜ್ಯದ ಜೈಲಿಗೆ ಸ್ಥಳಾಂತರಿಸಿದರೆ ಉತ್ತಮ ಎಂದು ಭಯೋತ್ಪಾದಕ ಸಲ್ಲಿಸಿರುವ ಅರ್ಜಿ ಶುಕ್ರವಾರ ವಿಚಾರಣೆ ನಡೆಯಲಿದ್ದರೂ, ಅದು ಮುಂದಿನ ವಾರಕ್ಕೆ ಮುಂದೂಡಲ್ಪಡಬಹುದು ಎಂದು ವಕೀಲರು ತಿಳಿಸಿದ್ದಾರೆ.