ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡ್ಡಿ ದಕ್ಷಿಣ ಭಾರತದ ಕೊನೆಯ ಬಿಜೆಪಿ ಸಿಎಂ: ಗೌಡ (HD Deve Gowda | BJP | Karnataka | BS Yeddyurappa)
ಭೂ ಹಗರಣಗಳಲ್ಲಿ ಮುಳುಗೇಳುತ್ತಿರುವ ಕರ್ನಾಟಕ ಬಿಜೆಪಿ ಸರಕಾರದ ವಿರುದ್ಧದ ಆಕ್ರೋಶವನ್ನು ಮುಂದುವರಿಸಿರುವ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ದಕ್ಷಿಣ ಭಾರತದ ಬಿಜೆಪಿಯ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಭೂ ಹಗರಣಗಳಲ್ಲಿ ಭಾಗವಹಿಸಿರುವುದು ಸಾಬೀತಾಗಿರುವುದರಿಂದ, ಆ ಸ್ಥಾನದಲ್ಲಿ ಮುಂದುವರಿಯಲು ಯಡಿಯೂರಪ್ಪಗೆ ಯೋಗ್ಯತೆಯಿಲ್ಲ. ಕರ್ನಾಟಕ ರಾಜ್ಯದ ರಕ್ಷಣೆಯ ನಿಟ್ಟಿನಲ್ಲಿ ಅವರನ್ನು ತಕ್ಷಣವೇ ಕೆಳಗಿಳಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ದೇಶದ ಯಾವುದೇ ಮುಖ್ಯಮಂತ್ರಿ ತನ್ನ ಸಂಬಂಧಿಕರಿಗೆ ಲಾಭವಾಗುವಂತೆ ಸರಕಾರಿ ಜಮೀನನ್ನು ಡಿನೋಟಿಫೈ ಮಾಡಿರುವ ಉದಾಹರಣೆಗಳಿಲ್ಲ ಎಂದು ಟೀಕಿಸಿದ ಗೌಡರು, ಯಡಿಯೂರಪ್ಪನವರನ್ನು ಬೆಂಬಲಿಸುತ್ತಿರುವ ಬಿಜೆಪಿಯ ಕೇಂದ್ರೀಯ ನಾಯಕತ್ವದ ಮೇಲೂ ಹರಿ ಹಾಯ್ದರು. ಕೇಂದ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಇಬ್ಬಂದಿತನ ತೋರಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಕುರಿತು ಹೋರಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಗೌಡರು ಬಲವಾಗಿ ಸಮರ್ಥಿಸಿಕೊಂಡರು. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ರಾಜ್ಯಪಾಲರು ಕಾನೂನು ಕ್ರಮಕ್ಕೆ ಒಪ್ಪಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂಬ ಬಿಜೆಪಿ ಬೇಡಿಕೆಯನ್ನು ಪುರಸ್ಕರಿಸುವ ಅಗತ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.

ಬಿಜೆಪಿಗೆ ನಾನು ಬೆಂಬಲ ನೀಡಲ್ಲ...
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಜಾಗೊಳಿಸಿದರೆ, ಸರಕಾರವನ್ನು ಬೆಂಬಲಿಸುವ ಪ್ರಸ್ತಾಪವನ್ನು ಜೆಡಿಎಸ್ ಮುಂದಿಟ್ಟಿದೆ ಎಂಬ ವರದಿಗಳನ್ನು ಇದೇ ಸಂದರ್ಭದಲ್ಲಿ ಗೌಡರು ತಳ್ಳಿ ಹಾಕಿದರು.

ಈ ರೀತಿಯಾಗಿ ಸಂಚು ನಡೆಯುತ್ತಿದೆ ಎಂದು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಗೌಡರು, ಎನ್‌ಡಿಎ ಜತೆ ಗುರುತಿಸಿಕೊಳ್ಳುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ತೊಲಗಿಸಿದರೆ ಮಾತ್ರ ಕರ್ನಾಟಕ ಉಳಿಯಬಹುದು. ಅವರು ಬಿಜೆಪಿಯ ದಕ್ಷಿಣ ಭಾರತದ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿ ಎಂದರು.

ಕೇರಳ ಜೆಡಿಎಸ್ ಘಟಕವು ರಾಜಧಾನಿ ತಿರುವನಂತಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಮತ್ತೊಮ್ಮೆ ಕರೆ ನೀಡಿದರು.
ಸಂಬಂಧಿತ ಲೇಖನಗಳು