ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿ ಮೇಲೆ ಸಾವರ್ಕರ್‌ಗೆ ನಂಬಿಕೆ ಇರಲಿಲ್ಲ: ಬಾಳ್ ಠಾಕ್ರೆ (Veer Savarkar | Congress | Digvijay Singh | Bal Thackeray)
PTI
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ವಿರುದ್ಧ ಶಿವಸೇನೆಯ ವರಿಷ್ಠ ಬಾಳ್ ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಮರ ಓಟುಗಳನ್ನು ಆಕರ್ಷಿಸುವ ಸಲುವಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ದ್ವಿ-ರಾಷ್ಟ್ರ ಸಿದ್ಧಾಂತವನ್ನು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರಿಗಿಂತಲೂ ಮೊದಲು ಪ್ರಸ್ತಾಪಿಸಿದ್ದು ವೀರ ಸಾವರ್ಕರ್. ದೇಶ ವಿಭಜನೆಯ ಮೂಲ ಸಾವರ್ಕರ್ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದರು.

ಮುಸ್ಲಿಮರ ಓಟ್ ಬ್ಯಾಂಕ್ ಕೊಳ್ಳೆ ಹೊಡೆಯಲು ಸಿಂಗ್ ಇತಿಹಾಸವನ್ನು ತಿರುಚುತ್ತಿದ್ದಾರೆ. ಸಾವರ್ಕರ್ ಕೊನೆಯವರೆಗೂ ಅಖಂಡ ಭಾರತದ ಪರವಾಗಿದ್ದರು ಮತ್ತು ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿದ್ದರು ಎಂದು ಠಾಕ್ರೆ ತನ್ನ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದಿದ್ದಾರೆ.

'ರಾಷ್ಟ್ರ ವಿಭಜನೆ ಮಾಡಲಾಗುವುದಿಲ್ಲ ಎಂದು 1945ರ ಚುನಾವಣೆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಆಶ್ವಾಸನೆ ನೀಡಿದ್ದರು. ಆದರೆ ಗಾಂಧೀಜಿಯ ಆಶ್ವಾಸನೆಯಲ್ಲಿ ಸಾವರ್ಕರ್ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ, ಕಾಂಗ್ರೆಸ್ ದೇಶ ವಿಭಜನೆಗೆ ಒಪ್ಪಲಿದೆ. ಕಾಂಗ್ರೆಸ್‌ಗೆ ಮತ ಹಾಕುವುದೆಂದರೆ ದೇಶ ವಿಭಜನೆ ಮಾಡುವುದು ಎಂದು ಸಾವರ್ಕರ್ ಸಾಕಷ್ಟು ಬಾರಿ ಹೇಳಿದ್ದರು'

'ಆದರೆ ಸಾವರ್ಕರ್ ಅವರನ್ನು ಯಾರೊಬ್ಬರೂ ನಂಬಲಿಲ್ಲ. ಆಗಿನ ಆರೆಸ್ಸೆಸ್ ಮುಖ್ಯಸ್ಥ, ಹಿಂದೂ ಮಹಾಸಭಾ ನಾಯಕ ಡಾ. ಎಸ್.ಪಿ. ಮುಖರ್ಜಿಯವರು ಕೂಡ ಆ ಚುನಾವಣೆಯಿಂದ ಹಿಂದಕ್ಕೆ ಸರಿದರು. ಕೊನೆಗೆ ಅದು ತಪ್ಪೆಂದು ಮನಗಂಡ ಮುಖರ್ಜಿ ಒಪ್ಪಿಕೊಂಡರು'

'ದೇಶ ವಿಭಜನೆಯನ್ನು ಸಂಪೂರ್ಣವಾಗಿ ವಿರೋಧಿಸಿದವರು ಸಾವರ್ಕರ್. ಆದರೆ ಅವರನ್ನು ಮೂಲೆಗುಂಪು ಮಾಡಲಾಯಿತು. ಪಾಕಿಸ್ತಾನದ ರಚನೆ ವಿರುದ್ಧ ನೇರವಾಗಿ, ಬಹಿರಂಗವಾಗಿ ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿ ಹೋರಾಡಿದ್ದರು. ಈ ಸಂಬಂಧ ಜಾಗತಿಕ ಮಟ್ಟದಲ್ಲೂ ಅವರು ತನ್ನ ದನಿಯನ್ನು ಪಸರಿಸಿದ್ದರು. 1944ರಲ್ಲಿ ಅವರು 'ಯುನೈಟೆಡ್ ಪ್ರೆಸ್ ಆಫ್ ಅಮೆರಿಕಾ' ಸುದ್ದಿಸಂಸ್ಥೆಗೆ ಟೆಲಿಗ್ರಾಫ್ ಮೂಲಕ ತನ್ನ ಹೇಳಿಕೆಯನ್ನು ರವಾನಿಸಿದ್ದರು'

'ತನ್ನ ಕೊನೆಯ ಯತ್ನವಾಗಿ 1947ರ ಆಗಸ್ಟ್ 8ರಂದು ಸಾವರ್ಕರ್ ಅವರು ಹಿಂದೂಗಳ ಸಮಾವೇಶವೊಂದನ್ನು ಕರೆದಿದ್ದರು. ಅಖಂಡ ಭಾರತವನ್ನು ಉಳಿಸಿಕೊಳ್ಳಲು ಹೋರಾಟ ಮುಂದುವರಿಸಿ ಎಂದು ಅವರು ಕರೆ ನೀಡಿದ್ದರು. ಆದರೆ ಅದು ವ್ಯರ್ಥವಾಗಿ ಹೋಯಿತು' ಎಂದು ಸಾಮ್ನಾ ಸಂಪಾದಕೀಯದಲ್ಲಿ ಠಾಕ್ರೆ ವಿವರಣೆ ನೀಡಿದ್ದಾರೆ.
ಸಂಬಂಧಿತ ಲೇಖನಗಳು