ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಲೈಸೆನ್ಸ್ ರದ್ದಿಗೆ ಸಿಎಜಿ ವರದಿಯಷ್ಟೇ ಸಾಲದು: ಸುಪ್ರೀಂ (CAG | Supreme Court | 2G Spectrum | UPA govt)
ಮಹಾ ಲೆಕ್ಕ ಪರಿಶೋಧಕರ ವರದಿಯನ್ನು ಮಾತ್ರ ಆಧರಿಸಿ 2ಜಿ ತರಂಗಾಂತರ ಪರವಾನಗಿಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ಸಂಬಂಧ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಅದು ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

ಪ್ರಕರಣ ನ್ಯಾಯಾಲಯಕ್ಕೆ ಬಂದ ನಂತರ ಸರಕಾರ ಕೈಗೊಂಡಿರುವ ಯಾವುದೇ ಕ್ರಮ ಅಥವಾ ನಿರ್ಧಾರಗಳು, ನ್ಯಾಯಾಲಯವು ಸಂಬಂಧಪಟ್ಟ ಅರ್ಜಿಗಳಿಗೆ ನೀಡುವ ತೀರ್ಪನ್ನು ಅವಲಂಬಿಸಿರುತ್ತದೆ ಎಂದು ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಅವರು (ಸರಕಾರ) ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಅವರೇನೇ ಮಾಡಿದರೂ, ಅದು ನಾವು (ನ್ಯಾಯಾಲಯ) ನೀಡುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠವು ಸ್ಪಷ್ಟಪಡಿಸಿತು.

ಈ ರೀತಿಯಾಗಿ ಸುಪ್ರೀಂ ಕೋರ್ಟ್ ಹೇಳಿರುವುದು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ. ನಿಯಮಾವಳಿಗಳಂತೆ ಸೇವೆಗಳನ್ನು ಒದಗಿಸಲು ವಿಫಲವಾಗಿರುವ ದೂರವಾಣಿ ಕಂಪನಿಗಳ ಪರವಾನಗಿಗಳನ್ನು ಕ್ರಮಬದ್ಧಗೊಳಿಸುವುದರಿಂದ ಸರಕಾರವನ್ನು ತಡೆಯಬೇಕು. ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರಕಾರೇತರ ಸಂಸ್ಥೆಯೊಂದು (ಸಿಪಿಐಎಲ್) ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು.

ಕಂಪನಿಗಳ ಮೇಲೆ ದಂಡ ಹಾಕುವ ಮೂಲಕ ಆ ಕಂಪನಿಗಳ ಪರವಾನಗಿಗಳನ್ನು ಸರಕಾರವು ಕ್ರಮಬದ್ಧಗೊಳಿಸುತ್ತಿದೆ ಎಂದು ಎನ್‌ಜಿಒ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದರು.

ಈ ಸಂಬಂಧ ಪೀಠವು ತನ್ನ ಮುಂದುವರಿದ ಆದೇಶದಲ್ಲಿ, 'ಪರವಾನಗಿಗಳನ್ನು ರದ್ದುಪಡಿಸುವುದಾದರೆ, ಅದು ಕೇವಲ ಸಿಎಜಿ ವರದಿಯನ್ನು ಆಧರಿಸಿ ಮಾತ್ರ ಸಾಧ್ಯವಿಲ್ಲ' ಎಂದಿದೆ.

ಭಾರೀ ಪ್ರಮಾಣದ ಅವ್ಯವಹಾರಗಳು ನಡೆದಿರುವುದರಿಂದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ 2ಜಿ ತರಂಗಾಂತರ ಪರವಾನಗಿಗಳನ್ನು ರದ್ದುಪಡಿಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಮತ್ತು ಎನ್‌ಜಿಒ ಸಿಪಿಐಎಲ್ ಸಲ್ಲಿಸಿರುವ ಅರ್ಜಿಗಳು ಪ್ರಸಕ್ತ ವಿಚಾರಣೆಯಲ್ಲಿವೆ.

ಈ ಅರ್ಜಿಗಳ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 1ಕ್ಕೆ ಮುಂದೂಡಿದೆ.

2ಜಿ ತರಂಗಾಂತರ ಪರವಾನಗಿಗಳನ್ನು ರದ್ದುಪಡಿಸಲು ಪ್ರಮುಖವಾಗಿ ಐದು ಆಧಾರಗಳಿವೆ ಎಂದು ಸಿಪಿಐಎಲ್ ಪರ ವಾದಿಸಿದ ವಕೀಲ ಭೂಷಣ್ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಯತ್ನಿಸಿದರು.

2001ರಲ್ಲಿ ನಿರ್ಧಾರ ಮಾಡಲ್ಪಟ್ಟ ದರದಲ್ಲಿ ಯಾವುದೇ ಹರಾಜು ನಡೆಸದೆ ತರಂಗಾಂತರವನ್ನು ಹಂಚಿಕೆ ಮಾಡಿರುವುದು, ಅಂತಿಮ ದಿನಾಂಕವನ್ನು ಮುನ್ಸೂಚನೆಯಿಲ್ಲದೆ ರದ್ದು ಮಾಡಿರುವುದು, 122ರಲ್ಲಿ 85 ಕಂಪನಿಗಳು ಅರ್ಹತೆ ಹೊಂದಿಲ್ಲದೇ ಇರುವುದು, ಅವುಗಳಲ್ಲಿ 69 ಕಂಪನಿಗಳು ನಿಯಮಾವಳಿಗಳನ್ನು ಪೂರೈಸದೇ ಇರುವುದು ಮುಂತಾದುವುದು ಭೂಷಣ್ ನ್ಯಾಯಾಲಯದ ಮುಂದಿಟ್ಟಿರುವ ಕಾರಣಗಳು.

ಮುಂದಿನ ವಿಚಾರಣೆ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುವುದಾಗಿ ನ್ಯಾಯಾಲಯ ಅರ್ಜಿದಾರರಿಗೆ ತಿಳಿಸಿದೆ.
ಸಂಬಂಧಿತ ಲೇಖನಗಳು