ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರ ವಿರೋಧಿಸಿದ ದಲಿತೆಯ ಮೂಗು, ಕಿವಿ, ಕೈ ಕಟ್ (Fatehpur | Dalit girl | Congress | Rahul Gandhi)
ತನ್ನ ಮೇಲೆ ಮೂವರು ದುರುಳರಿಂದ ಅತ್ಯಾಚಾರ ಯತ್ನ ನಡೆದಾಗ ಅದನ್ನು ತೀವ್ರವಾಗಿ ಪ್ರತಿರೋಧಿಸಿದ 16ರ ಹರೆಯದ ದಲಿತ ಬಾಲಕಿಯೊಬ್ಬಳ ಮೂಗು, ಕಿವಿ ಮತ್ತು ಕೈಯನ್ನು ಕತ್ತರಿಸಿದ ಹೇಯ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಿಗೆ ಇದು ರಾಜಕೀಯ ದಾಳವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸಿವೆ.

ಘಟನೆ ನಡೆದಿರುವುದು ಫತೇಪುರ ಜಿಲ್ಲೆಯ ಬಿಂಡಾಕಿ ಪ್ರದೇಶದಲ್ಲಿ. ತಕ್ಷಣವೇ ಹುಡುಗಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಅಪರಾಹ್ನ ಗದ್ದೆ ಕಡೆ ಕೆಲಸಕ್ಕೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಶಿವೋಮ್, ಹರಿ ಶಂಕರ್ ಮತ್ತು ಪವನ್ ಎಂಬ ಮೂವರು ಆಕೆಯನ್ನು ಎಳೆದು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಇದನ್ನು ಪ್ರತಿಭಟಿಸಿದ ಏಕೈಕ ಕಾರಣಕ್ಕೆ ಕತ್ತಿಯಿಂದ ಬಾಲಕಿಯ ಅಂಗಾಂಗಗಳನ್ನು ಛೇದಿಸಿದ್ದಾರೆ. ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅವರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
PR

ಲಕ್ನೋ ವಿಶೇಷ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್ ಅವರ ಪ್ರಕಾರ ಹುಡುಗಿಯ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ.

ಬದ್ಲು ರಾಮ್ ಪಾಸಿ ಪುತ್ರಿ ಹೊಲದತ್ತ ಹೊರಟಿದ್ದ ಸಂದರ್ಭದಲ್ಲಿ ಶಿವೋಮ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದಾಗ, ಹರಿಶಂಕರ್ ಮತ್ತು ಆತನ ಬಾವ ರಾಮ್ ರತನ್ ಎಂಬಾತ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ. ಇದರಿಂದ ಬಾಲಕಿಗೆ ತೀವ್ರ ಗಾಯಗಳಾಗಿವೆ ಎಂದು ದೂರು ಬಂದಿದೆ ಎಂದು ಪೊಲೀಸ್ ಅಧಿಕಾರಿ ಲಾಲ್ ತಿಳಿಸಿದ್ದಾರೆ.

ಪ್ರಸಕ್ತ ಬಾಲಕಿಯನ್ನು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಅತ್ಯಾಚಾರಕ್ಕೆ ಯತ್ನಿಸಿದವರ ಮೇಲೆ ಕೊಲೆ ಯತ್ನ, ಉದ್ದೇಶಪೂರ್ವಕವಾಗಿ ಮಾರಕ ಆಯುಧಗಳಿಂದ ಗಾಯಗೊಳಿಸಿರುವುದು ಮತ್ತು ಅತ್ಯಾಚಾರ ಯತ್ನ ಕೇಸುಗಳನ್ನು ಹಾಕಲಾಗಿದೆ.

ರಾಜಕೀಯ ತಿರುವು ಸಾಧ್ಯತೆ...
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತಾನು ಶೀಘ್ರದಲ್ಲೇ ಬಾಲಕಿಯನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದೇನೆ. ನಿಜಕ್ಕೂ ದಲಿತರ ಬಗ್ಗೆ ಕಾಳಜಿಯಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರು ಆಕೆಯನ್ನು ಭೇಟಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಕಾನ್ಪುರ ಆಸ್ಪತ್ರೆಗೆ ರಾಹುಲ್ ಗಾಂಧಿ ಇಂದು (ಸೋಮವಾರ) ಭೇಟಿ ನೀಡುವ ಸಾಧ್ಯತೆಗಳಿವೆ.

ಈ ನಡುವೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್, ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರಿಗೆ ಪತ್ರ ಬರೆಯಲಿದ್ದೇನೆ. ಅವರೇ ವೈಯಕ್ತಿಕ ಮುತುವರ್ಜಿ ವಹಿಸಿ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಇಂತಹ ಘಟನೆಗಳು ರಾಜಕೀಯಕ್ಕೆ ಬಳಕೆಯಾಗುವ ಸಾಧ್ಯತೆಗಳು ಹೆಚ್ಚು. ಪ್ರಮುಖವಾಗಿ ಆಡಳಿತ ಪಕ್ಷ ಬಹುಜನ ಸಮಾಜ ಪಕ್ಷಕ್ಕೆ ಹಾನಿಯಾಗಬಹುದು. ಇತ್ತೀಚೆಗಷ್ಟೇ ದಲಿತ ಹುಡುಗಿಯೊಬ್ಬಳನ್ನು ಬಿಎಸ್‌ಪಿ ಶಾಸಕರೊಬ್ಬರು ನಿರಂತರವಾಗಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಇವನ್ನೂ ಓದಿ