ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪುಹಣ ಇಟ್ಟವರ ಹೆಸರು ಬಹಿರಂಗ ಮಾಡ್ತೇವೆ: ಕೇಂದ್ರ (Hasan Ali | Supreme Court | India | UPA govt)
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ತೆರಿಗೆ ತಪ್ಪಿಸಿ ಹಣ ಕೂಡಿಟ್ಟಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾದ ನಂತರ ಅವರ ಹೆಸರುಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದೆ.

ಈ ನಡುವೆ ಭಾರತದ ಬಹುದೊಡ್ಡ ತೆರಿಗೆ ವಂಚಕ ಹಸನ್ ಆಲಿ ಎಲ್ಲಿ ಎಂದು ಪ್ರಶ್ನಿಸಿರುವ ಕೋರ್ಟ್, ಆತ ವಿದೇಶಕ್ಕೆ ಹೋಗದಂತೆ ಖಚಿತಪಡಿಸುವಂತೆ ಕೇಂದ್ರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿತು.

ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟಿರುವ ಹಣದ ಮೇಲೆ ನೇರ ತೆರಿಗೆ ನಿಯಮಾವಳಿ ಮಸೂದೆಯಡಿ ತೆರಿಗೆ ವಿಧಿಸಲಾಗುತ್ತದೆ ಎಂದು ನಿನ್ನೆಯಷ್ಟೇ ಕೇಂದ್ರ ಸರಕಾರವು ಅಫಿಡವಿತ್ ಸಲ್ಲಿಸಿತ್ತು. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಕಪ್ಪುಹಣದ ಬಗ್ಗೆ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸುವಂತೆ ಮತ್ತೆ ಆದೇಶ ಹೊರಡಿಸಿತು.

ವಿದೇಶಿ ಬ್ಯಾಂಕುಗಳಲ್ಲಿ ತೆರಿಗೆ ತಪ್ಪಿಸಿ ಹಣ ಶೇಖರಣೆ ಮಾಡಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾದ ನಂತರ ಅವರ ಹೆಸರನ್ನು ಬಹಿರಂಗಪಡಿಸಲಾಗುತ್ತದೆ. ಈಗಾಗಲೇ ತೆರಿಗೆ ಮಾಹಿತಿ ವಿನಿಮಯ ಒಪ್ಪಂದದ ಕುರಿತು ಹತ್ತು ದೇಶಗಳ ಜತೆ ಸಮಾಲೋಚನೆ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರವು ಸುಪ್ರೀಂಗೆ ಮಾಹಿತಿ ನೀಡಿದೆ.

ಭಾರತೀಯರು ಹಣ ಶೇಖರಿಸಿಟ್ಟಿರುವ ಬ್ಯಾಂಕುಗಳನ್ನು ಹೊಂದಿರುವ ಬಹಾಮಾಸ್, ಬರ್ಮುಡಾ, ಬ್ರಿಟೀಶ್ ವರ್ಜಿನ್ ಐಸ್ಲೆಂಡ್, ಇಸ್ಲೆ ಆಫ್ ಮ್ಯಾನ್, ಕೇಮ್ಯಾನ್ ಐಸ್ಲೆಂಡ್, ಬ್ರಿಟೀಷ್ ಐಸ್ಲೆಂಡ್ ಆಫ್ ಜೆರ್ಸಿ, ಮೊನಾಕೋ, ಸೈಂಟ್ ಕಿಡ್ಸ್ ಎಂಡ್ ನೇವಿಸ್, ಅರ್ಜೆಂಟೀನಾ ಮತ್ತು ಮಾರ್ಷಲ್ ಐಸ್ಲೆಂಡ್ ದೇಶಗಳ ಜತೆ ಮಾತುಕತೆ ನಡೆಸಲಾಗಿದೆ.

ಹಸನ್ ಆಲಿ ಎಲ್ಲಿ?
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, ಗೃಹಸಚಿವ ಆರ್.ಆರ್. ಪಾಟೀಲ್, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿರುವ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿರುವ ಹಸನ್ ಆಲಿ ಎಲ್ಲಿ ಎಂದು ಸುಪ್ರೀಂ ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.

ತೆರಿಗೆ ವಂಚನೆಯ ಪ್ರಮುಖ ಆರೋಪಿ ಹಸನ್ ಆಲಿ ಎಲ್ಲಿ? ಆತ ಏನು ಮಾಡುತ್ತಿದ್ದಾನೆ? ಆತನ ಇತ್ತೀಚಿನ ಚಟುವಟಿಕೆಗಳೇನು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ನ್ಯಾಯಾಲಯವು, ಆತ ವಿದೇಶಕ್ಕೆ ಹೋಗದಿರುವುದನ್ನು ಖಚಿತಪಡಿಸುವಂತೆ ಸೂಚಿಸಿತು.

ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ 2.74 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದಾನೆ ಎಂದು ಹೇಳಲಾಗಿರುವ ಪುಣೆ ಮೂಲದ ಉದ್ಯಮಿ ಹಸನ್ ಆಲಿ ದೇಶದಿಂದ ಪರಾರಿಯಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ವಿವರಣೆಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ವಿದೇಶಿ ಬ್ಯಾಂಕುಗಳಲ್ಲಿ ತೆರಿಗೆ ತಪ್ಪಿಸಿ ಕೂಡಿಟ್ಟಿರುವ ಭಾರತೀಯರ ಹಣವನ್ನು ಮರಳಿ ತರಬೇಕು ಎಂದು ರಾಮ್ ಜೇಠ್ಮಲಾನಿ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಪ್ರಕರಣವಿದು. ನ್ಯಾಯಮೂರ್ತಿಗಳಾದ ಬಿ. ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನೊಳಗೊಂಡ ಪೀಠವು ಮೇಲಿನಂತೆ ಆದೇಶ ನೀಡಿದೆ.
ಇವನ್ನೂ ಓದಿ