ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಧಾನಸಭೆಯಲ್ಲೇ ರಾಜ್ಯಪಾಲರನ್ನು ಜಗ್ಗಾಡಿದ ಆಂಧ್ರ ಶಾಸಕರು (Andhra Pradesh | Telangana | E.S.L. Narasimhan | N. Jayaprakash Narayan)
ತೆಲಂಗಾಣ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಕ್ಷಗಳ ತೆಲಂಗಾಣ ಪ್ರಾಂತ್ಯದ ಶಾಸಕರು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಜ್ಯಪಾಲರ ಮೇಲೆ ಭಾಗಶಃ ಹಲ್ಲೆ ನಡೆಸಲು ಯತ್ನಿಸಿದ ಪ್ರಸಂಗ ಆಂಧ್ರಪ್ರದೇಶ ವಿಧಾನಮಂಡಲದಲ್ಲಿ ನಡೆದಿದೆ.

ಆಂಧ್ರಪ್ರದೇಶ ವಿಧಾನಮಂಡಲದ ಬಜೆಟ್ ಅಧಿವೇಶನದ ಮೊದಲ ದಿನ ಸಂಪ್ರದಾಯದಂತೆ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದರು. ರಾಜ್ಯಪಾಲರು ಭಾಷಣ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆಯೇ ಘೋಷಿಸಿದ್ದ ಟಿಆರ್ಎಸ್ ಸದಸ್ಯರು, ಭಾಷಣಗಳ ಪ್ರತಿಯನ್ನು ಹರಿದು, ಒಂದು ಹಂತದಲ್ಲಿ ಹಲ್ಲೆಗೆ ಯತ್ನಿಸಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದರು.

ರಾಜ್ಯಪಾಲರ ಭಾಷಣದಲ್ಲಿ ತೆಲಂಗಾಣ ಕುರಿತು ಪ್ರಸ್ತಾವನೆ ಇಲ್ಲದೇ ಇರುವುದು, ತೆಲಂಗಾಣ ವಿರೋಧಿ ನೀತಿಯನ್ನು ರಾಜ್ಯಪಾಲರು ಅನುಸರಿಸುತ್ತಾ ಬಂದಿರುವುದೇ ತೆಲಂಗಾಣ ಪ್ರಾಂತ್ಯದ ಟಿಆರ್ಎಸ್ ಮತ್ತು ಟಿಡಿಪಿ ಶಾಸಕರ ಆಕ್ರೋಶಕ್ಕೆ ಕಾರಣ ಎಂದು ವರದಿಗಳು ಹೇಳಿವೆ.

ಆರಂಭದಲ್ಲಿ ಟಿಆರ್ಎಸ್ ಶಾಸಕರು ರಾಜ್ಯಪಾಲರ ಮೈಕನ್ನು ಕಿತ್ತು ಹಾಕಿದರು. ಬಳಿಕ ಅವರು ಭಾಷಣ ಮಾಡಬೇಕಿದ್ದ ವಾಚನ ಪೀಠವನ್ನು ಕೂಡ

ನೆಲಕ್ಕುರುಲಿಸಿದರು. ಈ ಹೊತ್ತಿನಲ್ಲಿ ಅತ್ತ ಇಬ್ಬರು ಟಿಡಿಪಿ ಶಾಸಕರಾದ ಆರ್. ರೇವಂತ್ ರೆಡ್ಡಿ ಮತ್ತು ಮಹೇಂದರ್ ರೆಡ್ಡಿಯವರು ಹಿಂದಿನಿಂದ ಬಂದು, ಕುರ್ಚಿಗಳನ್ನು ಸದನದ ಬಾವಿಗೆ ಎಳೆದು ಹಾಕಿದರು.

ರೇವಂತ್ ರೆಡ್ಡಿಯವರಂತೂ ಸೀದಾ ರಾಜ್ಯಪಾಲ ನರಸಿಂಹನ್ ಅವರತ್ತ ಬಂದು, ಅವರನ್ನು ಬದಿಗೆ ನೂಕಲು ಯತ್ನಿಸಿದರು. ರಾಜ್ಯಪಾಲರ ಅಂಗರಕ್ಷಕರು ಪಕ್ಕದಲ್ಲೇ ಇದ್ದರೂ ಅವರನ್ನು ಜಗ್ಗಾಡಲು ಯತ್ನಿಸಿದರು.

ರಾಜ್ಯಪಾಲರ ಭಾಷಣದ ಪ್ರತಿಗಳನ್ನು ಹರಿದು ಹಾಕಿದ ಟಿಆರ್ಎಸ್ ಶಾಸಕರು, 'ರಾಜ್ಯಪಾಲರೇ, ರಾಜ್ಯ ಬಿಟ್ಟು ತೊಲಗಿ' ಎಂಬ ಘೋಷಣೆಗಳನ್ನು ಕೂಗಿದರು. ಟಿಆರ್ಎಸ್ ಶಾಸಕ ಟಿ. ಹರೀಶ್ ರಾವ್ ಅವರು ಸದಸ್ಯರ ಟೇಬಲ್ ಮೇಲೆ ಹತ್ತಿ ವೇದಿಕೆಗೆ ಹತ್ತಲು ಯತ್ನಿಸಿದರು. ಆದರೆ ತಕ್ಷಣವೇ ಸದನದೊಳಗೆ ಬಂದ ಮಾರ್ಷಲ್‌ಗಳು ಅವರನ್ನು ತಡೆದರು. ಅಷ್ಟರಲ್ಲಿ ಇತರ ಶಾಸಕರು ವೇದಿಕೆಗೆ ನುಗ್ಗಿ, ರಾಜ್ಯಪಾಲರನ್ನು ತಳ್ಳಲು ಯತ್ನಿಸಿದರು.

ತೆಲಂಗಾಣಕ್ಕೆ ಸೇರಿದ ಟಿಡಿಪಿ ಶಾಸಕರು ಕೂಡ ಪ್ರತಿಭಟನೆಗೆ ಕೈ ಜೋಡಿಸಿದರು. ಕೆಲವರಂತೂ ರಾಜ್ಯಪಾಲರತ್ತ ತಮ್ಮ ಶಾಲುಗಳನ್ನು ಎಸೆದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಾದಾ ದಿರಿಸಿನಲ್ಲಿದ್ದ ಮಾರ್ಷಲ್‌ಗಳು ರಾಜ್ಯಪಾಲರ ಸುತ್ತ ನಿಂತು ಅವರಿಗೆ ರಕ್ಷಣೆ ಒದಗಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ, ಪ್ರತಿಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ, ವಿಧಾನ ಪರಿಷತ್ ಸ್ಪೀಕರ್ ಎ. ಚಕ್ರಪಾಣಿ, ವಿಧಾನಸಭೆಯ ಉಪಾಧ್ಯಕ್ಷ ನಡೇಂದ್ಲ ಮನೋಹರ್ ಮತ್ತಿತರರು ಮಾಡಿದ ಮನವಿಗಳನ್ನು ಪ್ರತಿಭಟನಾ ನಿರತ ಶಾಸಕರು ಕಿವಿಗೆ ಹಾಕಿಕೊಳ್ಳದೆ, ತಮ್ಮ ಆಟೋಪಗಳನ್ನು ಮುಂದುವರಿಸಿದರು.
ಇವನ್ನೂ ಓದಿ