ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ರಾಮದೇವ್ 'ನಾಯಿ' ಎಂದ ಕಾಂಗ್ರೆಸ್ ಸಂಸದ (Cong MP calls Swami Ramdev a `dog', 'bloody Indian')
ಯೋಗಗುರು ಬಾಬಾ ರಾಮದೇವ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ಹೊಸ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲು ಯತ್ನಿಸುತ್ತಿರುವುದರ ನಡುವೆಯೇ ಇದೇ ವಿಚಾರದಲ್ಲಿ ಅವರಿಗೆ ಕಾಂಗ್ರೆಸ್ ಸಂಸದನೋರ್ವ ಜೀವ ಬೆದರಿಕೆ ಹಾಕಿರುವ, ಬ್ಲಡಿ ಇಂಡಿಯನ್ ಮತ್ತು ನಾಯಿ ಎಂದು ನಿಂದಿಸಿರುವ ಪ್ರಸಂಗ ನಡೆದಿದೆ.

ರಾಮದೇವ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಅರುಣಾಚಲ ಪ್ರದೇಶದ ಲೋಕಸಭಾ ಸದಸ್ಯ ನಿನಾಂಗ್ ಎರಿಂಗ್. ಇವರು ಪೂರ್ವ ಅರುಣಾಚಲ ಪ್ರದೇಶ ಲೋಕಸಭಾ ಕ್ಷೇತ್ರದ ಸದಸ್ಯ. ಭ್ರಷ್ಟಾಚಾರದ ವಿರುದ್ಧ ಅರುಣಾಚಲ ಪ್ರದೇಶದಲ್ಲಿ ಹೋರಾಟ ಮುಂದುವರಿಸಿದರೆ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ರಾಮದೇವ್ ತಿಳಿಸಿದ್ದಾರೆ.

ಬಾಬಾ ರಾಮದೇವ್ ಅವರು ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಕೇಂದ್ರ ಪಸೀಘಾಟ್‌‍ನಲ್ಲಿ ಯೋಗ ತರಬೇತಿ ಶಿಬಿರ ನಡೆಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಂಸದ ನಿನಾಂಗ್ ಎರಿಂಗ್ ಕೂಡ ಭಾಗವಹಿಸಿದ್ದರು.
PTI

'ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಅವರು, ನನ್ನನ್ನು ಬ್ಲಡಿ ಇಂಡಿಯನ್ (ದರಿದ್ರ ಭಾರತೀಯ) ಎಂದು ಜರೆದರು. ನಾಯಿ ಎಂದು ದೂಷಣೆ ಮಾಡಿದರು. ಭಾರತದಲ್ಲೇ ನಾನು ಬ್ಲಡಿ ಇಂಡಿಯನ್ ಎಂದು ಕರೆಸಿಕೊಳ್ಳಬೇಕಾಯಿತು. ಈ ರೀತಿ ಆಗಿರುವುದು ಇದೇ ಮೊದಲು' ಎಂದು ವೇದಿಕೆಯ ಬಳಿಯಲ್ಲೇ ನಿಂತಿದ್ದ ಸಂಸದನತ್ತ ಬೆರಳು ತೋರಿಸುತ್ತಾ ರಾಮದೇವ್ ದೂರಿದರು.

ಪ್ರಶ್ನೆ ಕೇಳಿದ್ದ ರಾಮದೇವ್...
ಭ್ರಷ್ಟಾಚಾರದ ವಿರುದ್ಧ 'ಭಾರತ್ ಸ್ವಾಭಿಮಾನ್' ಹೆಸರಿನಲ್ಲಿ ದೇಶವ್ಯಾಪಿ ಹೋರಾಟ ನಡೆಸುತ್ತಾ ಬಂದಿರುವ ರಾಮದೇವ್, ಯೋಗ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದರು. ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರುವ ವಿಚಾರದ ಕುರಿತು ಕೇಂದ್ರವನ್ನು ಪ್ರಶ್ನಿಸಿದ್ದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತಲುಪಲಿರುವ ಭ್ರಷ್ಟಾಚಾರ ಕುರಿತ ಪ್ರಶ್ನಾವಳಿಗಳನ್ನೊಳಗೊಂಡ ಮನವಿಗೆ ನೀವು ಸಹಿ ಹಾಕಿದ್ದೀರಾ ಎಂದು ನೆರೆದಿದ್ದ ಜನತೆಯನ್ನು ಯೋಗಗುರು ಪ್ರಶ್ನಿಸಿದ್ದರು. ಅಲ್ಲದೆ, ಆ ಮನವಿಯಲ್ಲಿ ಇದ್ದ, ಪ್ರಧಾನಿಯವರಿಗೆ ಕೇಳಬೇಕಿರುವ ಪ್ರಶ್ನೆಗಳನ್ನು ವೇದಿಕೆಯಲ್ಲಿ ಉಲ್ಲೇಖಿಸಿದ್ದರು.

ಆಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಣಾಚಲ ಪ್ರದೇಶ ಶಿಕ್ಷಣ ಸಚಿವ ಬೋಯ್ಸಿರಾಮ್ ಸಾಯಿರಾಮ್ ಮತ್ತು ಕಾಂಗ್ರೆಸ್ ಸಂಸದ ತೀವ್ರ ಕುಪಿತಗೊಂಡರು. ಸಂಸದನಂತೂ ನೇರವಾಗಿ ಬೆದರಿಕೆ ಹಾಕಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಅರುಣಾಚಲ ಪ್ರದೇಶದಲ್ಲಿ ಮುಂದುವರಿಸಿದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿದರು ಎಂದು ಪತಂಜಲಿ ಯೋಗಪೀಠದ ಮಾಧ್ಯಮ ಸಲಹೆಗಾರ ಎಸ್.ಕೆ. ತಿಜರಬಾಲ ದೂರಿದ್ದಾರೆ.

ನಾನು ನಿಂದಿಸಿಲ್ಲ, ಆರೋಪ ಸುಳ್ಳು...
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ಲೇಟ್ ಬದಲಾಯಿಸಿರುವ ಸಂಸದ ಎರಿಂಗ್, ನಾನು ರಾಮದೇವ್ ವಿರುದ್ಧ ಏನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮದೇವ್ ಬಗ್ಗೆ ನಾನು ಯಾವುದೇ ಟೀಕೆ ಅಥವಾ ನಿಂದನೆ ಮಾಡಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಅವರು ರಾಜಕೀಯ ಮಾತನಾಡಿದರು. ಅವರು ನೆಹರೂ-ಗಾಂಧಿ ಕುಟುಂಬ ಹಾಗೂ ಕೇಂದ್ರ ಸರಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು. ಆಗ ನಾನು ಮಧ್ಯ ಪ್ರವೇಶಿಸಿದೆ. ಬಾಬಾಜೀ, ಇದು ಯೋಗ ಕಾರ್ಯಕ್ರಮ. ಹಾಗಾಗಿ ರಾಜಕೀಯವನ್ನು ತರುವುದು ಬೇಡ ಎಂದೆ. ಅವರು ನನ್ನ ಮಾತನ್ನು ಕೇಳಲಿಲ್ಲ. ಅಷ್ಟರಲ್ಲಿ ಅವರ ಅಂಗರಕ್ಷಕರು ನನ್ನಲ್ಲಿಗೆ ಬಂದು, ವೇದಿಕೆಯಿಂದ ಕೆಳಗೆ ತಳ್ಳಿದರು ಎಂದರು.

ಬಿಜೆಪಿ ತೀವ್ರ ಖಂಡನೆ...
ಬಾಬಾ ರಾಮದೇವ್ ಅವರನ್ನು ದರಿದ್ರ ಭಾರತೀಯ ಮತ್ತು ನಾಯಿ ಎಂದು ನಿಂದಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಎರಿಂಗ್ ಹೇಳಿಕೆಗಳು ಬೇಜವಾಬ್ದಾರಿಯುತವಾದದ್ದು ಮತ್ತು ರಾಜದ್ರೋಹದಿಂದ ಕೂಡಿದ್ದು. ರಾಮದೇವ್ ಅವರನ್ನು ಬ್ಲಡಿ ಇಂಡಿಯನ್ ಎಂದು ನಿಂದಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ರಾಮದೇವ್ ಓರ್ವ ಗೌರವಾನ್ವಿತ ವ್ಯಕ್ತಿ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಸಂಸದ ಎರಿಂಗ್, ತಾನೊಬ್ಬ ಭಾರತೀಯ ಎಂದುಕೊಂಡಿದ್ದಾರೋ, ಇಲ್ಲವೋ ಎಂದೂ ಪ್ರಮುಖ ಪ್ರತಿಪಕ್ಷ ಪ್ರಶ್ನಿಸಿದೆ.

ಅವರು ಇನ್ನೊಬ್ಬರನ್ನು ಬ್ಲಡಿ ಇಂಡಿಯನ್ ಎಂದು ಕರೆಯುವಾಗ, ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ಪರಿಗಣಿಸುತ್ತಾರಾ? ಅವರು ತನ್ನನ್ನು ತಾನು ಭಾರತೀಯ ಎಂದು ಗುರುತಿಸಿಕೊಳ್ಳದೇ ಇದ್ದರೆ, ಸಂಸತ್ತಿನಲ್ಲಿ ಕುಳಿತುಕೊಳ್ಳಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದಿರುವ ಬಿಜೆಪಿ, ತಕ್ಷಣವೇ ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ವರದಿ ಕೇಳಿದ ಕಾಂಗ್ರೆಸ್...
ಸಂಸದ ಪ್ರಸಂಗಕ್ಕೆ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ವರದಿ ತರಿಸಿಕೊಂಡ ನಂತರ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸುವುದಾಗಿ ತಿಳಿಸಿದೆ.

ಯಾವುದೇ ರೀತಿಯಲ್ಲಿ ಅನಾಗರಿಕ ಭಾಷೆಯನ್ನು ಬಳಸುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಈ ಕುರಿತು ತಕ್ಷಣವೇ ತನಿಖೆಗೆ ಆದೇಶ ನೀಡಲಾಗುತ್ತದೆ. ಯೋಗ ಕ್ಷೇತ್ರದಲ್ಲಿ ಬಾಬಾ ರಾಮದೇವ್ ನೀಡುತ್ತಿರುವ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಘಟನೆ ಕುರಿತ ಸಂಪೂರ್ಣ ಮಾಹಿತಿ ಸಿಕ್ಕಿದ ಬಳಿಕ ಪ್ರತಿಕ್ರಿಯಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ತಿಳಿಸಿದ್ದಾರೆ.
ಇವನ್ನೂ ಓದಿ