ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಟಾಪಿಟ್, ಇದೇನೂ ಪತ್ರಿಕಾಗೋಷ್ಠಿಯಲ್ಲ: ಕೆಂಡದುಂಡೆಯಾದ ಮಮತಾ (Railway Budget 2011 | Mamata Banerjee | UPA Rail Budget | Lalu Prasad Yadav)
PTI
ರೈಲ್ವೇ ಬಜೆಟ್ ಮಂಡನೆ ವೇಳೆ ಮಾಜಿ ರೈಲು ಮಂತ್ರಿ ಲಾಲು ಪ್ರಸಾದ್ ಮತ್ತು ಹಾಲಿ ಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಸಂಘರ್ಷ ನಡೆಯುತ್ತಿರುವುದು ಸಾಮಾನ್ಯ. ಅದು 2011-12ರ ರೈಲ್ವೇ ಆಯವ್ಯಯ ಪತ್ರ ಮಂಡನೆ ಸಂದರ್ಭದಲ್ಲಿ ಶುಕ್ರವಾರವೂ ನಡೆಯಿತು.

'ದೀದಿ' ಅವರು ಚುನಾವಣೆಗೆ ಹೊರಟಿರುವ ತಮ್ಮ ರಾಜ್ಯವಾದ ಬಂಗಾಳಕ್ಕಾಗಿ ಕೆಲವೊಂದು ಯೋಜನೆಗಳನ್ನು ಘೋಷಿಸಿದ ತಕ್ಷಣವೇ ಲಾಲು ಪ್ರಸಾದ್ ಅವರು ಎದ್ದುನಿಂತು, ಎಡಪಕ್ಷ ಆಳ್ವಿಕೆಯಲ್ಲಿರುವ ರಾಜ್ಯಕ್ಕೆ ಇಷ್ಟೊಂದು ಸೌಲಭ್ಯಗಳನ್ನು ನೀಡುತ್ತಿರುವುದನ್ನು ಆಕ್ಷೇಪಿಸಿದರು.

ಕರ್ನಾಟಕಕ್ಕೇನು ದಕ್ಕಿತು? ಮುನಿಯಪ್ಪ ಏನು ಮಾಡಿದರು ಇತ್ಯಾದಿ ವರದಿಗಳಿಗೆ ವೆಬ್‌ದುನಿಯಾ ಮುಖಪುಟ ನೋಡಿ.

ಕರ್ನಾಟಕದ ಕೆಲವು ಸಂಸದರು, ಸಂಯುಕ್ತ ಜನತಾ ದಳ ನಾಯಕ ಶರದ್ ಯಾದವ್ ಮುಂತಾದ ಕೆಲವು ಇತರ ಸಂಸದರು ಕೂಡ ಧ್ವನಿಯೆತ್ತಿ, ಮಮತಾ ಅವರ ಕಾಲೆಳೆಯಲಾರಂಭಿಸಿದರು.

ಸ್ವಲ್ಪಮಾತ್ರವೇ ಪ್ರಚೋದನೆಯಿಂದ ತಾಳ್ಮೆ ಕಳೆದುಕೊಳ್ಳುವುದಕ್ಕೆ ಹೆಸರಾದ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಈ ಬಾರಿಯೂ ತಾಳ್ಮೆ ಕಳೆದುಕೊಂಡರು. ಈ ಸಂಸದರತ್ತ ಕೂಗಾಡಿದ ಆಕೆ, ಏನಿದ್ದರೂ ರೈಲ್ವೇ ಬಜೆಟ್ ಮೇಲಿನ ಚರ್ಚೆ ಸಂದರ್ಭ ಮಾತನಾಡಿ ಎಂದು ಜೋರು ಮಾಡಿದರು.

"ಇದೇನೂ ಪತ್ರಿಕಾಗೋಷ್ಠಿಯಲ್ಲ" ಎನ್ನುತ್ತಾ ಕೋಪದಿಂದಲೇ ಈ ಸಂಸದರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ ಮಮತಾ.

ನಂತರ, ಪಟ್ನಾ ಮತ್ತು ಗಯಾ ವಿಭಾಗಗಳಿಗೆ ಕೊಡುಗೆಗಳನ್ನು ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ಆಕೆ ಲಾಲು ಅವರನ್ನು ಉದ್ದೇಶಿಸಿ, 'ಪಟ್ನಾ ಇರುವುದು ಬಿಹಾರದಲ್ಲಲ್ಲವೇ?' ಎಂದು ಕೋಪದಿಂದಲೇ ಕೇಳಿದರು.

ಒಂದು ಹಂತದಲ್ಲಂತೂ ಆಕೆ, "ಹೌದು, ಬಂಗಾಳ ನನ್ನ ರಾಜ್ಯ, ಇತರ ರಾಜ್ಯಗಳಂತೆಯೇ ಪಶ್ಚಿಮ ಬಂಗಾಳವೆಂದರೆ ನನಗೆ ಪ್ರೀತಿ, ಏನೀಗ" ಎಂದೂ ಪ್ರಶ್ನಿಸಿಬಿಟ್ಟರು.

ಬಂಗಾಳಿ ಉಚ್ಚಾರದೊಂದಿಗೆ ಊರಿನ ಹೆಸರುಗಳೆಲ್ಲವೂ 'ಒ'ಕಾರ ಮಯವಾಗಿ ಕೇಳಿಬರುತ್ತಿದ್ದುದು ಆಕೆಯ ಬಹುಭಾಷಾ (ಉರ್ದು, ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಉಚ್ಚಾರ) ಬಜೆಟ್ ಭಾಷಣದ ಹೈಲೈಟ್‌ಗಳಲ್ಲೊಂದು.

ಕಳೆದ ಯುಪಿಎ ಸರಕಾರದಲ್ಲಿ ಲಾಲು ಅವರು ರೈಲು ಮಂತ್ರಿಯಾಗಿದ್ದರು. 2009ರಲ್ಲಿ ಈಕೆ ಅದರ ನೇತೃತ್ವ ವಹಿಸಿದ್ದಂದಿನಿಂದಲೂ ಇಬ್ಬರು ಬದ್ಧವೈರಿಗಳಂತೆ ಕಚ್ಚಾಡುತ್ತಲೇ ಬಂದವರು. ಲಾಲು ಮೇಲೆ ಮಾತ್ರವೇ ಅಲ್ಲ, ಬೇರೆ ಸಂಸದರು ಕೂಡ ದೀದಿ ಕೆಂಗಣ್ಣಿಗೆ ಗುರಿಯಾಗಿ "ಸ್ಟಾಪ್ ಇಟ್ ಸ್ಟಾಪ್ ಇಟ್" ಎಂದು ಕೂಗಿಸಿಕೊಂಡರು. ಅಷ್ಟು ಮಾತ್ರವಲ್ಲದೆ, "ಧ್ಯಾನ್ ಸೇ ಸುನೋ (ಗಮನವಿಟ್ಟು ಕೇಳಿ)" ಎಂದೂ ಹೇಳಿಸಿಕೊಂಡರು!
ಇವನ್ನೂ ಓದಿ