ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಕ್ಷೇತರರ ಅನರ್ಹತೆ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ (K'taka MLAs | disqulaification | Supreme Court | Karnataka | High Court)
ಪಕ್ಷಾಂತರ ನಿಷೇಧ ಕಾಯ್ದೆಯಡಿ ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಸರಿ ಎಂದು ಹೈಕೋರ್ಟ್ ನೀಡಿರುವ ಅಂತಿಮ ತೀರ್ಪಿಗೆ ಮಧ್ಯಂತರ ತಡೆ ನೀಡಬೇಕೆಂಬ ಪಕ್ಷೇತರರ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ.

ಐವರು ಪಕ್ಷೇತರ ಶಾಸಕರರನ್ನು ಸ್ಪೀಕರ್ ಕೆಜಿ ಬೋಪಯ್ಯ ಅವರು ಅನರ್ಹಗೊಳಿಸಿರುವುದು ಸರಿ ಎಂದು ಫೆ.14ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಮತ್ತು ಸಿರಿಯಾಕ್ ಜೋಸೆಫ್ ಅವರನ್ನೊಳಗೊಂಡ ಪೀಠ ಎತ್ತಿ ಹಿಡಿದಿದೆ.

ಮಾರ್ಚ್ 3ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೀಕ್ರೆಟ್ ಬ್ಯಾಲೆಟ್‌ಗೆ ಪರಿಗಣಿಸಬೇಕೆಂಬ ಪಕ್ಷೇತರ ಶಾಸಕರ ಪರ ವಕೀಲರಾದ ಕೆ.ಕೆ.ವೇಣುಗೋಪಾಲ್ ಅವರ ಮನವಿಯನ್ನು ಸುಪ್ರೀಂ ಪೀಠ ತಳ್ಳಿಹಾಕಿ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 29ಕ್ಕೆ ಮುಂದೂಡಿದೆ.

ಅಲ್ಲದೇ ಪಕ್ಷೇತರರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಸಚೇತಕರಾಗಿರುವ ಜೀವರಾಜ್ ಅವರು ಹತ್ತು ದಿನಗಳೊಳಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿಯೂ ಸೀಕ್ರೆಟ್ ಬ್ಯಾಲೆಟ್‌ಗೆ ಅವಕಾಶ ನೀಡುವಂತೆ ಕೇಳಿದ್ದರು. ಆದರೆ ಹೈಕೋರ್ಟ್ ಆ ಸಂದರ್ಭದಲ್ಲಿಯೂ ಮನವಿಯನ್ನು ತಿರಸ್ಕರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ತಮ್ಮ ಅನರ್ಹತೆ ಪ್ರಶ್ನಿಸಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಮೋಹನ ಶಾಂತನಗೌಡರ್, ನ್ಯಾ.ಅಬ್ದುಲ್ ನಜೀರ್ ಹಾಗೂ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಪೂರ್ಣ ಪೀಠ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಕೈಗೊಂಡ ಕ್ರಮ ಸರಿಯಾದದ್ದು. ಪಕ್ಷೇತರ ಸದಸ್ಯರು ಒಂದು ರಾಜಕೀಯ ಪಕ್ಷದ ಸರಕಾರದಲ್ಲಿ ಸಚಿವ ಸಂಪುಟ ಸೇರಿಕೊಂಡರೆ ಅವರು ತಮ್ಮ ಪಕ್ಷೇತರ ಸ್ಥಾನಮಾನ ಕಳೆದುಕೊಂಡು ಆ ಪಕ್ಷದ ಸದಸ್ಯರಾಗಿರುತ್ತಾರೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಬಿಜೆಪಿಯ 11 ಮಂದಿ ಶಾಸಕರ ಜತೆ ಐವರು ಪಕ್ಷೇತರರನ್ನು ಅನರ್ಹಗೊಳಿಸಿರುವ ಕ್ರಮ ಕಾನೂನು ಬಾಹಿರವಲ್ಲ ಎಂದು ತೀರ್ಪು ನೀಡಿತ್ತು.
ಇವನ್ನೂ ಓದಿ