ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ದೇಶದಲ್ಲಿ ಏನಾಗ್ತಿದೆ?: ಸುಪ್ರೀಂ ಕೋರ್ಟ್ ಮತ್ತೆ ಚಾಟಿ
(Supreme Court | Hasan Ali Khan | Money Laundering | UPA | Swiss Bank | Black Money)
ಈ ದೇಶದಲ್ಲಿ ಏನಾಗ್ತಿದೆ?: ಸುಪ್ರೀಂ ಕೋರ್ಟ್ ಮತ್ತೆ ಚಾಟಿ
ನವದೆಹಲಿ, ಗುರುವಾರ, 3 ಮಾರ್ಚ್ 2011( 15:25 IST )
ಸಿವಿಸಿ ನೇಮಕಾತಿ ವಿಷಯದಲ್ಲಿ ತಪ್ಪು ಮಾಡಿದ ಕೇಂದ್ರವನ್ನು ತರಾಟೆಗೊಂಡ ದಿನವೇ, ಮತ್ತೊಂದು ಪ್ರಕರಣದಲ್ಲಿಯೂ ಕೇಂದ್ರದ ಯುಪಿಎ ಸರಕಾರದ ವಿರುದ್ಧ ಕಿಡಿ ಕಾರಿರುವ ಸುಪ್ರೀಂ ಕೋರ್ಟು, ಬಹುಕೋಟಿ ರೂಪಾಯಿಯ ಹಣ ದುರುಪಯೋಗ ಮತ್ತು ತೆರಿಗೆ ವಂಚನೆ ಪ್ರಕರಣದ ಆರೋಪಿ ಹಸನ್ ಅಲಿಯನ್ನು ತನಿಖೆ ನಡೆಸುವ ಗೋಜಿಗೆ ಹೋಗಿಲ್ಲವೇಕೆ ಎಂದು ಪ್ರಶ್ನಿಸಿತಲ್ಲದೆ, ಒಂದು ಹಂತದಲ್ಲಿ ತಾಳ್ಮೆ ಗೆಟ್ಟು, "ಏನಾಗುತ್ತಿದೆ ಈ ದೇಶದಲ್ಲಿ" ಎಂದೂ ಪ್ರಶ್ನಿಸಿತು.
ಹಸನ್ ಅಲಿ ವಿರುದ್ಧ ಕ್ರಮ ಕೈಗೊಳ್ಳಲು ನಿಮಗಿರುವ ಅಡ್ಡಿಯಾದರೂ ಏನು? ಹಸನ್ ಅಲಿ ವಿರುದ್ಧ ತನಿಖೆಗೆ ಇನ್ನೆಷ್ಟು ವರ್ಷಗಳು ಬೇಕು ನಿಮಗೆ ಎಂದೂ ಸುಪ್ರೀಂ ಕೋರ್ಟು ಕೇಂದ್ರದ ಯುಪಿಎ ಸರಕಾರವನ್ನು ಪ್ರಶ್ನಿಸಿದೆ.
ಹಸನ್ ಅಲಿ ಮತ್ತು ಇತರ ಕಪ್ಪು ಹಣವಂತರನ್ನು ಇದುವರೆಗೂ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವ ಪ್ರಯತ್ನವನ್ನು ಇನ್ನೂ ಮಾಡಿಲ್ಲವೇಕೆ ಎಂದು ಸುಪ್ರೀಂ ಕೋರ್ಟು ಗುರುವಾರ ತಿಳಿಯಲು ಬಯಸಿತು.
ಪುಣೆಯ ಉದ್ಯಮಿ ಹಸನ್ ಅಲಿ ಖಾನ್‌ಗೆ ಸಂಬಂಧಿಸಿದ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣದ ತನಿಖೆ ನಡೆಸುತ್ತಿದ್ದ ಅನುಷ್ಠಾನ ನಿರ್ದೇಶನಾಲಯ (ಇ.ಡಿ.)ಯ ಮೂವರು ಅಧಿಕಾರಿಗಳನ್ನು ಕೂಡ ಕೇಂದ್ರವು ದಿಢೀರ್ ಆಗಿ ವರ್ಗಾವಣೆ ಮಾಡಿರುವುದನ್ನು ಆಕ್ಷೇಪಿಸಿರುವ ಸುಪ್ರೀಂ ಕೋರ್ಟು, ತಕ್ಷಣವೇ ಅವರನ್ನು ಮರುನೇಮಕ ಮಾಡಬೇಕೆಂದು ಆದೇಶಿಸಿದೆ.
ಸರಕಾರವು ಈ ರೀತಿ ಮಾಡದೇಹೋದರೆ, ತಪ್ಪಿತಸ್ಥರ ವಿರುದ್ಧದ ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಲಯವೇ ವಿಶೇಷ ಅಧಿಕಾರಿಯನ್ನು ನೇಮಿಸಬೇಕಾದೀತು ಎಂದೂ ಎಚ್ಚರಿಸಿದೆ.
ವಿದೇಶೀ ಬ್ಯಾಂಕುಗಳಲ್ಲಿ ಸುಮಾರು 800 ಕೋಟಿ ಡಾಲರ್ (35963 ಕೋಟಿ ರೂ.) ಇರಿಸಿದ್ದಾನೆನ್ನಲಾಗಿರುವ ಹಸನ್ ಅಲಿಗೆ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ತೆರಿಗೆ ನೋಟೀಸ್ ಜಾರಿ ಮಾಡಲಾಗಿತ್ತು.
ಸರಕಾರದ ಪರ ಸಾಲಿಸಿಟರ್ ಜನರಲ್ ಸುಬ್ರಹ್ಮಣ್ಯಂ ಅವರು ಏನೋ ಹೇಳಲು ಹೋದಾಗ ಕೆಂಡ ಕಾರಿದ ನ್ಯಾಯ ಪೀಠವು, "ಈ ದೇಶದಲ್ಲಿ ಏನಾಗುತ್ತಿದೆ" ಎಂದೂ ಕೇಳಿತು. ಈ ಕುರಿತು ಉತ್ತರಿಸಲು ಸರಕಾರಕ್ಕೆ ಸುಪ್ರೀಂ ಕೋರ್ಟು ಮಂಗಳವಾರದವರೆಗೆ ಸಮಯಾವಕಾಶ ನೀಡಿದೆ.
ವಿದೇಶದಲ್ಲಿ ವಿಶೇಷವಾಗಿ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇರಿಸಿದವರ ಹೆಸರು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟು ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇದ್ದು, ಈ ಕಪ್ಪು ಹಣದ ಶಂಕಿತರಲ್ಲೊಬ್ಬನಾದ ಹಸನ್ ಅಲಿ ಖಾನ್ ದೇಶ ಬಿಟ್ಟು ಹೋಗದಂತೆ ಗಮನ ಹರಿಸುವಂತೆಯೂ ಹೇಳಿದೆ.