ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅತ್ಯಂತ ದುರ್ಬಲ' ಪ್ರಧಾನಿ ರಾಜೀನಾಮೆ ನೀಡಲಿ: ಆಡ್ವಾಣಿ (Cash for votes | LK Advani | WikiLeaks | India Cable | Congress | Manmohan Singh)
PTI
ಕಳೆದ ಮಹಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಅದೇ ಮಾತು ಹೇಳಿದ್ದಾರೆ ಆಡ್ವಾಣಿ. "ಮನಮೋಹನ್ ಸಿಂಗ್ ಅವರು ನಾನು ಕಂಡ ಅತ್ಯಂತ ದುರ್ಬಲ ಪ್ರಧಾನಿ" ಎಂದು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಆಡ್ವಾಣಿ ಹೇಳಿದ್ದಾರೆ.

ಸಂಸತ್ತಿನಲ್ಲಿ 'ಓಟಿಗಾಗಿ ಕೋಟಿ ಕೋಟಿ ನೋಟು' ಹಗರಣಕ್ಕೆ ಸಂಬಂಧಿಸಿ, ಅಣು ಒಪ್ಪಂದ ಪರವಾಗಿ ಮತ ಹಾಕಲು, ಆ ಮೂಲಕ ವಿಶ್ವಾಸಮತದಲ್ಲಿ ಮನಮೋಹನ್ ಸಿಂಗ್ ಸರಕಾರದ ಗೆಲುವಿಗೆ ಕಾಂಗ್ರೆಸ್ ಪಕ್ಷವು ಭಾರೀ ಪ್ರಮಾಣದ ಲಂಚ ನೀಡಿ ಸಂಸದರನ್ನು ಖರೀದಿಸಿತ್ತು ಎಂಬ ವರದಿಯನ್ನು ವಿಕಿಲೀಕ್ಸ್ ಮತ್ತೆ ದೃಢಪಡಿಸಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸುತ್ತಿದ್ದರು.

ಓಟಿಗಾಗಿ ನೋಟು ಹಗರಣಕ್ಕೆ ಪ್ರಧಾನಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಉತ್ತರದಾಯಿಗಳಾಗಿದ್ದು, ಪ್ರಧಾನಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲೇಬೇಕು ಎಂದು ಆಡ್ವಾಣಿ ಆಗ್ರಹಿಸಿದ್ದಾರೆ.

ಯುಪಿಎ-2 ಸರಕಾರದ ಇಷ್ಟೆಲ್ಲಾ ಹಗರಣಗಳು ಬಯಲಾಗುತ್ತಿದ್ದರೂ, ಮೊದಲ ಬಾರಿಗೆ ಆಡ್ವಾಣಿ ಈ ಸರಕಾರ ಹೋಗಲೇಬೇಕು ಎಂದು ಧ್ವನಿಯೆತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಹಗರಣದಿಂದ ಹಿಡಿದು, ಭ್ರಷ್ಟಾಚಾರವು ಮೇರೆ ಮೀರಿದೆ. ಪ್ರಾಮಾಣಿಕ, ಶುದ್ಧ ಹಸ್ತ ಎಂಬ ಮನಮೋಹನ್ ಸಿಂಗ್ ಅವರ ಪ್ರತಿಷ್ಠೆ ಕರಗುತ್ತಾ ಹೋಗುತ್ತಲೇ ಇದೆ. ಈ ಸರಕಾರವು ಹಗರಣಗಳನ್ನು ಅಕ್ರಮಗಳನ್ನು ಆತಂಕಕಾರಿ ಎಂಬಷ್ಟರ ಮಟ್ಟಿಗೆ ರಕ್ಷಿಸತೊಡಗಿದೆ ಎಂದು ಆಡ್ವಾಣಿ ಆರೋಪಿಸಿದರು.

ನರಸಿಂಹ ರಾವ್ ಸರಕಾರದಲ್ಲಿ ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಅತ್ಯುತ್ತಮ ಹಣಕಾಸು ಸುಧಾರಣೆಗಳನ್ನು ತಂದಿದ್ದು, ಅಂದಿನಿಂದಲೂ ನಾನು ಅವರನ್ನು ಗೌರವಿಸುತ್ತಿದ್ದೆ. ಇಂದು ಅವರ ಸ್ಥಿತಿ ನೋಡಿ ನಿರಾಸೆಯಾಗಿದೆ ಎಂದವರು ವಿಷಾದದಿಂದ ನುಡಿದರು.

2008ರಲ್ಲಿ ಸಿಂಗ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ಮತದಾನದಲ್ಲಿ ಅವರಿಗೆ ಜಯ ದೊರಕಿಸಿಕೊಡಲು ಭಾರೀ ಪ್ರಮಾಣದ ಖರೀದಿ-ಮಾರಾಟ ನಡೆದಿದೆ ಎಂದು ನಾನು ಅಂದೇ ಹೇಳಿದ್ದೆ. ಇದು ಹಿಂದೆಂದೂ ಕಂಡು ಕೇಳರಿಯದ ಹಗರಣ. ಯಾಕೆಂದರೆ, ಹಿಂದೆ ಸಾಕಷ್ಟು ಹಗರಣಗಳು ನಡೆದಿವೆ. ಆದರೆ 10-15 ಕೋಟಿಗೆ ಸಂಸದರನ್ನು ಖರೀದಿಸಲು ಸಿದ್ಧವಾಗಿ, ತಮ್ಮ ಬಲೆಗೆ ಬೀಳುವ ಸಂಸದರನ್ನು ಗುರುತಿಸುವಲ್ಲಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಸೇರಿದಂತೆ ಇಡೀ ವ್ಯವಸ್ಥೆಯೇ ಭಾಗಿಯಾಗಿತ್ತು ಎಂದು ಆಡ್ವಾಣಿ ಹೇಳಿದರು.

ಈ ಲಂಚ ಹಗರಣದಲ್ಲಿ ಪ್ರಧಾನಿ, ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಫಲಾನುಭವಿಗಳು. ಮತ್ತು ಯಾವತ್ತಿಗೂ ಕೂಡ ಪ್ರಧಾನಿಯನ್ನು ನಾನು ಅತ್ಯಂತ ದುರ್ಬಲ ಎಂದು ಟೀಕಿಸುವಾಗಲೆಲ್ಲಾ, ಕಾಂಗ್ರೆಸ್ ಪಕ್ಷಾಧ್ಯಕ್ಷೆ ಹೇಳಿದಂತೆಯೇ ಅವರು ಕೇಳಬೇಕಾಗುತ್ತದೆ ಎಂಬ ಸತ್ಯಾಂಶವನ್ನೂ ಉಲ್ಲೇಖಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯದ್ದೇ ಅಂತಿಮ ನಿರ್ಣಯವಾಗಿರುತ್ತದೆ, ಆದರೆ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಪಕ್ಷಾಧ್ಯಕ್ಷರ ತೀರ್ಮಾನ ಅಂತಿಮವಾಗಿರುತ್ತದೆ ಎಂದ ಆಡ್ವಾಣಿ, ಪ್ರಸ್ತುತ ಯುಪಿಎಯಲ್ಲಿ ಪ್ರಜಾಸತ್ತೆ ವ್ಯವಸ್ಥೆ ಇದೆಯೇ ಎಂಬುದರ ಮೇಲೆ ಬೆಳಕು ಚೆಲ್ಲಿದರು.

ಮಧ್ಯಂತರ ಚುನಾವಣೆಗೆ ಸಜ್ಜಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೇನೂ ಅಭ್ಯಂತರವಿರಲಾರದು. ಆದರೆ ಎನ್‌ಡಿಎ ಮಟ್ಟಿಗೆ ಹೇಳುವುದಾದರೆ, ಸದ್ಯಕ್ಕೆ ಈ ಸರಕಾರ ಹೋಗಬೇಕು, ಹೊಸ ಸರಕಾರ ಬರಬೇಕು ಎಂದು ಆಡ್ವಾಣಿ ಹೇಳಿದರು.
ಇವನ್ನೂ ಓದಿ