ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಯಿ ಬಾಬಾ 40 ಸಾವಿರ ಕೋಟಿ ಆಸ್ತಿ ಯಾರ ಪಾಲಿಗೆ? (Sai Baba | Trust | Andhra government | Successor)
PR
ದೇವಮಾನವ ಸತ್ಯ ಸಾಯಿಬಾಬಾ ಅವರ ಆರೋಗ್ಯ ಸ್ಥಿತಿ ಬುಧವಾರ ಕೊಂಚ ಸುಧಾರಿಸಿದೆ ಎಂಬ ವರದಿಗಳ ನಡುವೆಯೇ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಾಯಿ ಬಾಬಾ ಅವರ ಟ್ರಸ್ಟ್, ಆಸ್ತಿ ಪಾಸ್ತಿಗಳಿಗೆಲ್ಲಾ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಭಕ್ತ ಬಾಂಧವರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆಯೇ, ಟ್ರಸ್ಟನ್ನು ಆಂಧ್ರಪ್ರದೇಶ ಸರಕಾರವೇ ವಶಪಡಿಸಿಕೊಳ್ಳುವ ಕುರಿತಾದ ಮಾತುಗಳೂ ಕೇಳಿಬರುತ್ತಿವೆ.

ಈ ನಡುವೆ, ಪುಟ್ಟಪರ್ತಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಾಯಿ ಬಾಬಾ ಅವರ ಅಕ್ಕನ ಮಗ ಶರವಣ ಕುಮಾರ್, ತಮ್ಮ ಹಾಗೂ ಸಾಯಿ ಬಾಬಾ ಟ್ರಸ್ಟ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಕೌಟುಂಬಿಕ ಕಲಹವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದಿದ್ದಾರವರು.

ಆರೋಗ್ಯ ಸುಧಾರಣೆ
ಸಾಯಿ ಬಾಬಾ ಅವರ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ಘೋಷಿಸಿದ್ದು, ದೇಶದ ವಿವಿಧೆಡೆಗಳಿಂದ ಸಾಯಿ ಭಕ್ತರು ಪುಟ್ಟಪರ್ತಿಗೆ ಆಗಮಿಸುತ್ತಿದ್ದಾರೆ. ಸಾಯಿ ಬಾಬಾ ದರ್ಶನಕ್ಕೆ ಅವಕಾಶಕ್ಕಾಗಿ ಅವರು ಆಗ್ರಹಿಸುತ್ತಿದ್ದಾರೆ. ಬ್ಯಾರಿಕೇಡ್‌ಗಳನ್ನೆಲ್ಲಾ ಮುರಿದು ಭಕ್ತರು ಪ್ರಶಾಂತಿ ನಿಲಯದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸುತ್ತ ದಾಂಧಲೆ ನಡೆಸಿದ್ದರಿಂದಾಗಿ, 8 ಕಿ.ಮೀ. ಸುತ್ತಮುತ್ತ ನಿಷೇಧಾಜ್ಞೆಯನ್ನೂ ಹೇರಲಾಗಿದೆ. ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಮಾಡುತ್ತಿದ್ದಾರೆ.

ಉತ್ತರಾಧಿಕಾರಿ ಯಾರು....
ಈ ನಡುವೆ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಾಯಿ ಬಾಬಾ ಅವರ ಆಶ್ರಮ ಮತ್ತು ಸಿಂಹಾಸನವಿರುವ ಪ್ರಶಾಂತಿ ನಿಲಯ, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಇವೆಲ್ಲವುಗಳಿಗೆ ಉತ್ತರಾಧಿಕಾರಿ ಯಾರು ಎಂಬ ಕುರಿತು ಚರ್ಚೆ ಮತ್ತೆ ಕೇಳಿಬರತೊಡಗಿದೆ.

ಅದರಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಹೆಸರೆಂದರೆ ಜೆ.ರತ್ನಾಕರ ಎಂಬವರದು. ಇವರು ಸಾಯಿ ಬಾಬಾ ಕುಟುಂಬದಿಂದ ಇತ್ತೀಚೆಗಷ್ಟೇ ಟ್ರಸ್ಟ್‌ನ ಸದಸ್ಯರಾಗಿ ನಿಯುಕ್ತಿಗೊಂಡಿರುವವರು.

ಚಾರಿಟಿಯನ್ನು ಮುಂದುವರಿಸುವುದು, ಜತೆಗೆ ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ ಮತ್ತು ಆಶ್ರಮವನ್ನು ಆಧ್ಯಾತ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಹೊಣೆಯು ರತ್ನಾಕರ್ ಅವರ ಮೇಲೆ ಬೀಳಬಹುದಾದರೂ, ಅವರು ಸಾಯಿ ಬಾಬಾ ಉತ್ತರಾಧಿಕಾರಿ ಎಂದು ನೇಮಕಗೊಳ್ಳಲಾರರು. ರತ್ನಾಕರ ಅವರು ಸಾಯಿಬಾಬಾ ಅವರ ಕಿರಿಯ ಸಹೋದರ ಜಾನಕೀರಾಂ ಅವರ ಪುತ್ರ.

ಸದ್ಯಕ್ಕೆ ಈ ಬಹುಕೋಟಿ ರೂಪಾಯಿಯ ಟ್ರಸ್ಟ್‌ಗೆ ಮಾಜಿ ಐಎಎಸ್ ಅಧಿಕಾರಿ ಕೆ.ಚಕ್ರವರ್ತಿ ಅವರು ಕಾರ್ಯದರ್ಶಿಯಾಗಿ, ಸತ್ಯ ಸಾಯಿ ಸಂಸ್ಥೆಗಳ ಮುಖ್ಯ ಸಂಚಾಲಕರಾಗಿ ಇಂದುಲಾಲ್ ಷಾ, ಸಾಮಾಜಿಕ ಮತ್ತು ಚಾರಿಟಿ ಕಾರ್ಯಗಳ ಘಟಕದ ಉಸ್ತುವಾರಿಯನ್ನು ಎಂ.ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದು, ನಿವೃತ್ತ ನ್ಯಾಯಾಧೀಶ ಪಿ.ಎನ್.ಭಗವತಿ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಂಧ್ರ ಸರಕಾರದಿಂದಲೂ ಯತ್ನ
ಅತ್ತ ಕಡೆ, ಸಾಯಿಬಾಬಾ ಗುಣಮುಖರಾಗುವಂತೆ ಭಕ್ತಾದಿಗಳು ಪೂಜೆ, ಹೋಮ, ಹವನಾದಿ ಪ್ರಾರ್ಥನೆಗಳಲ್ಲಿ ತೊಡಗಿದ್ದರೆ, ಆಂಧ್ರ ಪ್ರದೇಶದ ಕಾಂಗ್ರೆಸ್ ಸರಕಾರವು, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಅನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯಾಸಾಧ್ಯತೆಗಳ ಕುರಿತು ತೀವ್ರ ಪರಿಶೀಲನೆಯಲ್ಲಿ ತೊಡಗಿದೆ.

ಸರಕಾರದ ವಿತ್ತೀಯ ಮುಖ್ಯ ಕಾರ್ಯದರ್ಶಿ ಎಲ್.ವಿ.ಸುಬ್ರಹ್ಮಣ್ಯಂ, ಆರೋಗ್ಯ ವಿಭಾಗದ ಮುಖ್ಯ ಕಾರ್ಯದರ್ಶಿ ಪಿ.ವಿ.ರಮೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ರಘು ರಾಜು, ಒಸ್ಮಾನಿಯಾ ಆಸ್ಪತ್ರೆ ಹೃದಯ ತಜ್ಞ ಡಾ.ಲಕ್ಷ್ಮಣ್ ರಾವ್ ಹಾಗೂ ವೈದ್ಯ ಡಾ.ಭಾನುಪ್ರಸಾದ್ ಅವರನ್ನೊಳಗೊಂಡ ತಂಡವೊಂದನ್ನು ಆಂಧ್ರ ಪ್ರದೇಶ ಸರಕಾರವು ಈ ಕುರಿತು ವಿಚಾರಣೆಗಾಗಿ ಕಳುಹಿಸಿದೆ. ಅವರೆಲ್ಲರೂ ಟ್ರಸ್ಟ್ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದು, ಬಾಬಾ ನಡೆಸುತ್ತಿರುವ ಜನಕಲ್ಯಾಣ ಕಾರ್ಯಕ್ರಮಗಳನ್ನು ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಲಿದೆ.

40 ಸಾವಿರ ಕೋಟಿ ಆಸ್ತಿ...
ಆದಾಯ ತೆರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ 40 ಸಾವಿರ ಕೋಟಿ ರೂಪಾಯಿಗಳ ಆಸ್ತಿಪಾಸ್ತಿ ಹೊಂದಿದೆ. ಟ್ರಸ್ಟ್‌ಗೆ ನೀಡುವ ಎಲ್ಲ ದೇಣಿಗೆಗಳಿಗೆ ತೆರಿಗೆ ರಿಯಾಯಿತಿ ಅನ್ವಯವಾಗುತ್ತದೆ.

ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇದರ ಮೇಲೆ ಕಣ್ಣು ಬೀಳಲು ಪ್ರಮುಖ ಕಾರಣವೆಂದರೆ, ಈ ಟ್ರಸ್ಟ್‌ಗೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವಿದೇಶೀ ದೇಣಿಗೆ ಹರಿದುಬರುತ್ತಿರುವುದು. ಟ್ರಸ್ಟ್‌ನಲ್ಲಿ ಸೂಕ್ತ ಲೆಕ್ಕ ಪತ್ರ ಇಡುವ ವ್ಯವಸ್ಥೆ ಇದೆಯೇ, ಖರ್ಚು ಮಾಡಲೂ ಸೂಕ್ತ ವ್ಯವಸ್ಥೆ ಇದೆಯೇ ಎಂದು ತಿಳಿದುಕೊಳ್ಳಲು ಬಂದಿದ್ದೇವೆ. ಅದಿಲ್ಲವಾದರೆ, ಸರಕಾರವು ಟ್ರಸ್ಟ್ ಅನ್ನು ವಶಪಡಿಸಿಕೊಳ್ಳುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ ಹಿರಿಯ ಅಧಿಕಾರಿಯೊಬ್ಬರು.

ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟು ಪುಟ್ಟಪರ್ತಿಯಲ್ಲಿರುವ ವಿಶ್ವವಿದ್ಯಾಲಯ ಸಂಕೀರ್ಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ವಿಶ್ವ ಧಾರ್ಮಿಕ ಮ್ಯೂಸಿಯಂ ಚೈತನ್ಯ ಜ್ಯೋತಿ, ತಾರಾಲಯ, ರೈಲು ನಿಲ್ದಾಣ, ಹಿಲ್-ವ್ಯೂ ಸ್ಟೇಡಿಯಂ, ಸಂಗೀತ ಕಾಲೇಜು, ಆಡಳಿತಾಂಗ ಕಟ್ಟಡ, ವಿಮಾನ ನಿಲ್ದಾಣ, ಒಳಾಂಗಣ ಕ್ರೀಡಾ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣಗಳನ್ನು ನಡೆಸುತ್ತಿದೆ. ಇದಲ್ಲದೆ, 180ರಷ್ಟು ದೇಶಗಳಲ್ಲಿ ಸುಮಾರು 1200 ಸತ್ಯ ಸಾಯಿಬಾಬಾ ಕೇಂದ್ರಗಳು ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿವೆ.
ಇವನ್ನೂ ಓದಿ