ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎ.ಕೆ.ಆಂಟನಿ 'ಕುಂಭಕರ್ಣ': ಅಚ್ಯುತಾನಂದನ್ ತಿರುಗೇಟು (Antony | Achuthanandan | Kerala Assembly Election | Rahul Gandhi)
ಒಂದು ದಿನದ ಹಿಂದೆಯಷ್ಟೇ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು 'ಅಮೂಲ್ ಬೇಬಿ' ಎಂದು ಕರೆಯುವ ಮೂಲಕ ಸುದ್ದಿಗಿಟ್ಟಿಸಿಕೊಂಡಿದ್ದ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಇದೀಗ ರಕ್ಷಣಾ ಸಚಿವ ಎ. ಕೆ. ಆಂಟನಿ ಮೇಲೆ ತಿರುಗಿ ಬಿದ್ದಿದ್ದು, ಮುಂಬೈ ದಾಳಿ ಸಂದರ್ಭದಲ್ಲಿ ನಿದ್ರಿಸುತ್ತಿದ್ದ ಆಂಟನಿ 'ಕುಂಭಕರ್ಣ' ಎಂದು ಜರೆದಿದ್ದಾರೆ.

ಕಳೆದ ಐದು ವರ್ಷದ ಅವಧಿಯಲ್ಲಿ 87ರ ಹರೆಯದ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ನಿದ್ರಿಸುತ್ತಿದ್ದರು ಅಥವಾ ನಿದ್ದೆ ಬರುವಂತೆ ನಟಿಸುತ್ತಿದ್ದರು ಎಂದು ಆಂಟನಿ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪುರಾಣದ ರಾಮಾಯಣದಲ್ಲಿರುವ ಕುಂಭಕರ್ಣರಂತೆ ಆಂಟನಿ ನಿದ್ರೆ ಮಾಡುತ್ತಾರೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ಮುಂಬೈ ದಾಳಿ ನಡೆದ ಸಂದರ್ಭದಲ್ಲಿ ಆಂಟನಿ ನಿದ್ರಿಸುತ್ತಿದ್ದರು. ರಾಜ್ಯವನ್ನೇ ನಡುಗಿಸಿದ ಮಾರಾಡ್ ಕೋಮುವಾರಿನ ಹಿಂಸಾಚಾರ ಸಂದರ್ಭದಲ್ಲೂ ಮಲಗಿದ್ದರು ಎಂದು ಅಚ್ಯುತಾನಂದನ್ ಆರೋಪ ಮಾಡಿದರು.

ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಅಚ್ಯುತಾನಂದನ್ 'ಅಮೂಲ್ ಬೇಬಿ' ಎಂದು ವ್ಯಂಗ್ಯ ಮಾಡಿದ್ದರು. ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಗೆದ್ದರೆ ಮುಂದಿನ ಚುನವಾಣೆವರೆಗೆ ಆ ರಾಜ್ಯಕ್ಕೆ 93ರ ಹರೆಯದ ವೃದ್ಧರೊಬ್ಬರು ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತ್ಯುತ್ತರವಾಗಿ ಅಚ್ಯುತಾನಂದನ್ ಈ ರೀತಿಯ ಹೇಳಿಕೆ ನೀಡಿದ್ದರು. ಆದರೆ ಅಚ್ಯುತಾನಂದನ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು, ಕೇರಳ ಸಿಎಂ ಹೇಳಿಕೆಯು 'ಅನಾಗರಿಕ' ಎಂದು ಹೇಳಿದ್ದರು.
ಇವನ್ನೂ ಓದಿ